ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಕಾ ಮಾಧ್ಯಮವಾಗಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

ಆಯಾಯ ರಾಜ್ಯಗಳಲ್ಲಿ ಅಲ್ಲಿಯ ಸ್ಥಳೀಯ ಭಾಷೆಯನ್ನು ಜನರು ಮಾತನಾಡುತ್ತಾರೆ. ನಮಗೆ ಇಂಗ್ಲಿಷ್ ಬರದಿದ್ದರೂ...
ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
ಬೆಳಗಾವಿ: ಆಯಾಯ ರಾಜ್ಯಗಳಲ್ಲಿ ಅಲ್ಲಿಯ ಸ್ಥಳೀಯ ಭಾಷೆಯನ್ನು ಜನರು ಮಾತನಾಡುತ್ತಾರೆ. ನಮಗೆ ಇಂಗ್ಲಿಷ್ ಬರದಿದ್ದರೂ ತಪ್ಪು ತಪ್ಪಾಗಿ ಮಾತಾನಾಡುತ್ತೇವೆ. ಭಾಷೆ ಉಳಿದರೆ ಬದುಕು ಉಳಿಯುತ್ತದೆ. ಭಾಷೆ ಹೋದರೆ ಬದುಕು ಕೂಡ ಅಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿಯ ಕಲಾಭವನದಲ್ಲಿ ನಡೆದ ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು , ನಾನು ಯಾವುದೇ ಭಾಷೆಯ ವಿರೋಧಿ ಅಲ್ಲ.ಈ ನೆಲದ ಭಾಷೆ ಕನ್ನಡವನ್ನು ಅನಾದರದಿಂದ ಕಾಣಬಾರದು. ಕೆಲವರಿಗೆ ಅಪ್ಪ, ಅಮ್ಮ ಅಂದರೆ ಖುಷಿ ಆಗುವುದಿಲ್ಲ. ಮಮ್ಮಿ, ಡ್ಯಾಡಿ ಅಂದರೆ ಖುಷಿಯಾಗುತ್ತದೆ. ಇದು ಅವಿದ್ಯಾವಂತರು ಮಾಡುವುದಿಲ್ಲ. ನಾನು ನನ್ನ ಮಕ್ಕಳಿಗೆ ಅಪ್ಪ, ಅಮ್ಮ ಎಂದು ಕರೆಯಲು ಹೇಳಿಕೊಟ್ಟಿದ್ದೇನೆ ಎಂದು ಹೇಳುವ ಮೂಲಕ ಭಾಷಾಭಿಮಾನ ಮೆರೆದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಮಾಧ್ಯಮ ಕುರಿತು ಬಿಗಿ ನಿಲುವು ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಹೊಸ ತಾಲ್ಲೂಕುಗಳಿಗೆ ಅಂತಿಮ ರಚನೆ ನೀಡುವಲ್ಲಿ ಕೂಡ ಭಿನ್ನ ನಿಲುವು ಹೊಂದಿದೆ ಎಂದು ಹೇಳಿದರು.
ಈ ವರ್ಷ ಕರ್ನಾಟಕ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಸಹ ಬೋಧನೆಯ ಮಾಧ್ಯಮವಾಗಿ ಜಾರಿಗೆ ತಂದಿರುವುದಕ್ಕೆ ಸಿದ್ದರಾಮಯ್ಯ ಭಿನ್ನ ನಿಲುವು ಹೊಂದಿದ್ದಾರೆ. ಸರ್ಕಾರಿ ಕನ್ನಡ ಭಾಷೆಯಲ್ಲಿಯೇ ಕಲಿಕೆಯ ಮಾಧ್ಯಮವನ್ನಾಗಿ ಮಾಡಬೇಕೆಂದು ತಾವು ಅವಿರತ ಪ್ರಯತ್ನಿಸುತ್ತಿರುವುದಾಗಿ ಹೇಳಿದರು. 
ಶಾಲೆಗಳಲ್ಲಿ ಬೋಧನೆಯ ಕಲಿಕಾ ಮಾಧ್ಯಮ ಆಯ್ಕೆ ಪೋಷಕರಿಗೆ ಬಿಟ್ಟಿದ್ದು ಎಂದು ಸುಪ್ರೀಂ ಕೋರ್ಟ್ ನ ಆದೇಶ ಸ್ಥಳೀಯ ಭಾಷೆಗಳ ಬೆಳವಣಿಗೆಯ ಹಿತಾಸಕ್ತಿಗೆ ವಿರುದ್ಧವಾಗಿದೆ. ಸ್ಥಳೀಯ ಭಾಷೆಗಳ ಹಿತಾಸಕ್ತಿಗೆ ಅನುಗುಣವಾಗಿ ಪ್ರಧಾನ ಮಂತ್ರಿ ಮತ್ತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪ್ರಧಾನಿ ಮೇಲೆ ಒತ್ತಡ ಹಾಕುವಂತೆ ಕೋರಿದ್ದೇನೆ ಎಂದರು. ಸ್ಥಳೀಯ ಭಾಷೆಗಳ ರಕ್ಷಣೆಗೆ ಅಗತ್ಯವಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ನಾನು ಕೋರಿಕೆ ಮಾಡಿದ್ದೆ. ಆದರೆ ಅದಕ್ಕೆ ಪ್ರಧಾನಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com