ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಅಪಾರ್ಟ್‌ಮೆಂಟ್‌ 7ನೇ ಮಹಡಿಯಿಂದ ಬಿದ್ದು ತಾಯಿ, ಮಗು ಸಾವು

ಎಂಜಿ ರಸ್ತೆಯ ಪಬ್ ಒಂದರ ಮಹಡಿಯಿಂದ ಬಿದ್ದು ಜೋಡಿಯೊಂದು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಅಂತಹುದೇ ಇನ್ನೊಂದು ದುರಂತ ಬೆಂಗಳೂರಿನಲ್ಲಿ ನಡೆದಿದೆ.
ಶ್ರೀರಾಮ್ ವೈಟ್ ಹೌಸ್ ಅಪಾರ್ಟ್‌ಮೆಂಟ್‌ನ
ಶ್ರೀರಾಮ್ ವೈಟ್ ಹೌಸ್ ಅಪಾರ್ಟ್‌ಮೆಂಟ್‌ನ
ಬೆಂಗಳೂರು: ಎಂಜಿ ರಸ್ತೆಯ ಪಬ್ ಒಂದರ ಮಹಡಿಯಿಂದ ಬಿದ್ದು ಜೋಡಿಯೊಂದು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಅಂತಹುದೇ ಇನ್ನೊಂದು ದುರಂತ ಬೆಂಗಳೂರಿನಲ್ಲಿ ನಡೆದಿದೆ. ಅಪಾರ್ಟ್‌ಮೆಂಟ್‌ ನ ಏಳನೇ ಮಹಡಿಯಲ್ಲಿನ ಬಾಲ್ಕನಿಯಿಂದ ಬಿದ್ದು ತಾಯಿ ಹಾಗೂ ಆಕೆಯ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರು  ಆರ್‌ಟಿ ನಗರದ ದಿಣ್ಣೂರು ರಸ್ತೆಯಲ್ಲಿರುವ  ಶ್ರೀರಾಮ್ ವೈಟ್ ಹೌಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಮಂಗಳವಾರ ಸಂಜೆ ನಡೆದ ಈ ಅವಘಡದಲ್ಲಿ ಭಾವನಾ (29) ಹಾಗೂ ಆಕೆಯ ಮಗ ದೇವಾಂಶ್ (2) ಎಂಬುವವರು ಮೃತಪಟ್ಟಿದ್ದಾರೆ. ಭಾವನಾ ಪುಲಕೇಶಿನಗರದ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅರಿಹಂತ್ ಕುಮಾರ್ ಪತ್ನಿಯಾಗಿದ್ದಾರೆ.
ಮಧ್ಯಾಹ್ನ 3.45 ಕ್ಕೆ ದೇವಾಂಶ್ ಬಾಲ್ಕನಿಯಲ್ಲಿ ಆಟವಾಡುತ್ತಿದ್ದಾಗ ಭಾವನಾ ತನ್ನ ಮೊಬೈಲ್ ನಲ್ಲಿ ಯಾರೊಡನೆಯೋ ಮಾತನಾಡುತ್ತಿದ್ದರು. ಆ ವೇಳೆ ಆಕಸ್ಮಿಕವಾಗಿ ಇಬ್ಬರೂ ಏಲನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುರಂತ ಸಂಭವಿಸಿದಾಗ, ಭಾವನಾ ಅವರ ಅತ್ತೆ ತಮ್ಮ ಮಲಗುವ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಶವಗಳನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸ್ಥಳಾಂತರಿಸುವವರೆಗೂ ಅವರಿಗೆ ಈ ಘಟನೆ ಬಗೆಗೆ ಗೊತ್ತಿರಲಿಲ್ಲ. ನೆರೆಹೊರೆಯವರು ತಿಳಿಸಿದ ನಂತರ ಅರಿಹಂತ್ ತಮ್ಮ ಕಚೇರಿಯಿಂದ ಆಸ್ಪತ್ರೆಗೆ ಆಗಮಿಸಿದ್ದಾರೆ. ಅವರ ಕುಟುಂಬ ಒಟ್ಟು ಎಂಟು ಅಂತಸ್ತಿನ ಅಪಾರ್ಟ್‌ಮೆಂಟ್‌  ಕಟ್ಟಡದ ಏಳನೇ ಮಹಡಿಯಲ್ಲಿ ವಾಸವಿತ್ತು.
ಮೇಲಿನಿಂದ ತಾಯಿ ಮಗು ಬೀಳುವಾಗ ಉಂಟಾದ ಶಬ್ದದಿಂದ ಎಚ್ಚರಗೊಂಡ  ಭದ್ರತಾ ಸಿಬ್ಬಂದಿ ನೆರೆಹೊರೆಯವರನ್ನು ಎಚ್ಚರಿಸಿದರು.ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುವ ವೇಳೆ ಕೆಲವೊಂದು ವ್ಯಕ್ತಿಗಳು ಇದು ಆಕಸ್ಮಿಕ ಸಾವಲ್ಲ ಎಂದಿದ್ದರು. ಇದಕ್ಕಾಗಿ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
"ಭಾವನಾ ಅವರ ತಂದೆ  ನಿರ್ಮಲ್ ಕುಮಾರ್ ಜೈನ್ ಮಾತನಾಡಿರುವಂತೆ ಪತಿ-ಪತ್ನಿಯರ ನಡುವೆ ಕೆಲವು ತಿಂಗಳಿನಿಂದ ಮನಸ್ತಾಪವಿತ್ತು.ಅವರ ಮಗಳು ಈ ಬಗ್ಗೆ ಅಸಮಾಧಾನದಿಂಡ ತನ್ನ ಬಳಿ ಹೇಳಿಕೊಂಡಿದ್ದಳು.ಇದರಿಂದಾಗಿ ಆಕೆ ಆತ್ಮಹತ್ಯೆಯಂತಹಾ ಘೋರ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ" ಎಂದಿದ್ದಾರೆ. ಆದರೆ ಭಾವನಾ ಸತ್ತ ಸ್ಥಳದಲ್ಲಿ ಅಥವಾ ಅವರ ಮನೆಯಲ್ಲಿ ಯಾವುದೇ ಡೆತ್ ನೋಟ್ ಕಂಡುಬಂದಿಲ್ಲ.ಹಾಗಾಗಿ ಭಾವನಾ ಸಾವಿನ ನಿಖರ ಕಾರಣ ತಿಳಿಯಲು ನಾವು ಅರಿಹಂತ್ ಅವರನ್ನು ವಿಚಾರಣೆ ನಡೆಸಬೇಕಿದೆ.ಎಂದು ಪೋಲೀಸರು ಹೇಳಿದ್ದಾರೆ.
ಈ ನಡುವೆ ಇದು ಆತ್ಮಹತ್ಯೆಯಲ್ಲ ಆಕಸ್ಮಿಕ ಅವಘಡ ಎಂದು ಕುಟುಂಬದ ಸಮೀಪದ ಮೂಲವೊಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com