2005ರ ನಕ್ಸಲ್ ಹತ್ಯಾಕಾಂಡ ಪ್ರಕರಣ : ಪೊಲೀಸ್ ಕಸ್ಟಡಿಗೆ ವರವರ ರಾವ್

2005ರ ಫೆ.5 ರಂದು ಪಾವಗಡದ ವೆಂಕಟಮ್ಮನಹಳ್ಳಿಯಲ್ಲಿ ಕೆಎಸ್ಆರ್​ಪಿ ಕ್ಯಾಂಪ್‌ ಮೇಲೆ ನಕ್ಸಲ್ ದಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿ ವರವರ ರಾವ್ ...
ತುಮಕೂರು: 2005ರ ಫೆ.5 ರಂದು ಪಾವಗಡದ ವೆಂಕಟಮ್ಮನಹಳ್ಳಿಯಲ್ಲಿ ಕೆಎಸ್ಆರ್​ಪಿ ಕ್ಯಾಂಪ್‌ ಮೇಲೆ ನಕ್ಸಲ್ ದಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿ ವರವರ ರಾವ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿ ಪಾವಗಡ ಜೆಎಂಎಫ್​ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ವರವರ ರಾವ್ 12ನೇ ಆರೋಪಿಯಾಗಿದ್ದರು. ಅಲ್ಲದೆ ಇವರ ವಿರುದ್ಧ ಚಾರ್ಜ್​ ಶೀಟ್ ಕೂಡ ದಾಖಲಾಗಿತ್ತು. ವರವರ ವಿರುದ್ಧ ಜಾಮೀನು ರಹಿತ ವಾರೆಂಟ್ ಕೂಡ ಜಾರಿಯಾಗಿತ್ತು. ಆದರೆ, ಪುಣೆಯ ಯೆರವಾಡ ಜೈಲಿನಲ್ಲಿ ಯುಟಿಪಿ ನಂಬರ್ 3669/11 ವಿಚಾರಣಾಧೀನ ಕೈದಿಯಾಗಿ ವರವರ ರಾವ್ ಇದ್ದರು. ಬಾಡಿ ವಾರೆಂಟ್​ನೊಂದಿಗೆ ಅವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಪಾವಗಡದ ಜೆಎಂಎಫ್​ಸಿ ಕೋರ್ಟ್​ಗೆ ಹಾಜರುಪಡಿಸಿದ್ದರು. 
ವಿಚಾರಣೆ ನಡೆಸಿದ ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಕೆಎಸ್ಆರ್​ಪಿ ಕ್ಯಾಂಪ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಒಟ್ಟು 78 ಮಂದಿ ಆರೋಪಿಗಳಿದ್ದಾರೆ. ಈ ಪೈಕಿ ಕೆಲ ಆರೋಪಿಗಳು ಮೃತಪಟ್ಟಿದ್ದರೆ, 43 ಮಂದಿ ಕಣ್ಮರೆಯಾಗಿದ್ದಾರೆ. 
ಅಂದಿನ ನಕ್ಸಲ್ ದಾಳಿಯಲ್ಲಿ ಕೆಎಸ್ಆರ್​ಪಿ ಪೊಲೀಸರು ಸೇರಿ ಏಳು ಜನ ಮೃತಪಟ್ಟಿದ್ದರು.ವರವರ ರಾವ್ ಅವರನ್ನು ಪುಣೆಯಿಂದ ಕರೆತಂದಿದ್ದ ಪೊಲೀಸರು ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಇರಿಸಿದ್ದರು.
ನಂತರ ಪಾವಗಡ ಜಿಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ತುಮಕೂರು ಜಿಲ್ಲಾ ಕಾರಾಗೃಹದಿಂದ ಕರೆದೊಯ್ಯಲಾಗಿತ್ತು.  ಸದ್ಯ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ಆರೋಪದಡಿ ಅವರನ್ನು ಮಹಾರಾಷ್ಟ್ರದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com