ತುಂಗಾ ಅಣೆಕಟ್ಟೆಯಿಂದ ಎಡ, ಬಲದಂಡೆ ನಾಲೆಗಳಿಗೆ ನೀರು ಬಿಡುಗಡೆ: ಜನರಿಗೆ ಎಚ್ಚರಿಕೆ ಸಂದೇಶ

ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಚುರುಕಾಗುತ್ತಿದ್ದಂತೆ ಗಾಜನೂರಿನಲ್ಲಿರುವ ತುಂಗಾ ...
ಶಿವಮೊಗ್ಗದ ಗಾಜನೂರಿನಲ್ಲಿರುವ ತುಂಗಾ ಅಣೆಕಟ್ಟು
ಶಿವಮೊಗ್ಗದ ಗಾಜನೂರಿನಲ್ಲಿರುವ ತುಂಗಾ ಅಣೆಕಟ್ಟು
ಶಿವಮೊಗ್ಗ: ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಚುರುಕಾಗುತ್ತಿದ್ದಂತೆ ಗಾಜನೂರಿನಲ್ಲಿರುವ ತುಂಗಾ ಅಣೆಕಟ್ಟಿನಿಂದ  ಬಲ ಮತ್ತು ಎಡದಂಡೆ ನಾಲೆಗಳಿಗೆ ನೀರು ಬಿಡಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಜಲ ಸಂಪನ್ಮೂಲ ಇಲಾಖೆ, ನಾಡಿದ್ದು ಸೋಮವಾರ ಬೆಳಗ್ಗೆ ನೀರು ಬಿಡಲಾಗುವುದು. ನೀರು ಬಿಡುಗಡೆಯ ಸಂದರ್ಭದಲ್ಲಿ ನಾಲೆಯ ಸುತ್ತಮುತ್ತ ಜನರು ಕೃಷಿ ಚಟುವಟಿಕೆಗಳನ್ನು ನಡೆಸದಂತೆ ಇಲಾಖೆ ಸೂಚಿಸಿದೆ. ಅಲ್ಲದೆ ನಾಲೆಗಳ ಹತ್ತಿರ ಜಾನುವಾರುಗಳನ್ನು ಸಹ ಮೇವಿಗೆ ಬಿಡದಂತೆ ಎಚ್ಚರಿಕೆ ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 64.8 ಮಿಲಿ ಮೀಟರ್ ಮಳೆಯಾಗಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ 1.4 ಮಿಲಿ ಮೀಟರ್, ಭದ್ರಾವತಿಯಲ್ಲಿ 4.4 ಮಿಲಿ ಮೀಟರ್, ತೀರ್ಥಹಳ್ಳಿ ತಾಲ್ಲೂಕಿನಲ್ಲಿ 7.2 ಮಿಲಿ ಮೀಟರ್, ಸಾಗರ ತಾಲ್ಲೂಕಿನಲ್ಲಿ 8 ಮಿಲಿ ಮೀಟರ್, ಶಿಕಾರಿಪುರ ತಾಲ್ಲೂಕಿನಲ್ಲಿ 10.2 ಮಿಲಿ ಮೀಟರ್, ಸೊರಬ ತಾಲ್ಲೂಕಿನಲ್ಲಿ 12 ಮಿಲಿ ಮೀಟರ್ ಮತ್ತು ಹೊಸನಗರ ತಾಲ್ಲೂಕಿನಲ್ಲಿ 21.5 ಮಿಲಿ ಮೀಟರ್ ಮಳೆ ಬಿದ್ದಿದೆ.
ತಗ್ಗು ಪ್ರದೇಶಗಳಲ್ಲಿರುವ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದಲ್ಲಿ ನಿನ್ನೆ ಸಾವಿರದ 764.60 ಅಡಿ ನೀರು ತಲುಪಿದ್ದು ಅದರ ಸಾಮರ್ಥ್ಯ ಸಾವಿರದ 819 ಅಡಿಯಿದೆ. ಅಣೆಕಟ್ಟಿನ ಒಳಹರಿವು 14 ಸಾವಿರದ 036 ಕ್ಯೂಸೆಕ್ಸ್, ಹೊರಹರಿವು 1,593 ಕ್ಯೂಸೆಕ್ಸ್. ಲಕ್ಕವಳ್ಳಿಯ ಭದ್ರಾ ಅಣೆಕಟ್ಟಿನಲ್ಲಿ 186 ಅಡಿ ನೀರು ತುಂಬುವ ಸಾಮರ್ಥ್ಯವಿದ್ದು ಈಗಾಗಲೇ 133.60 ಅಡಿಯಿದೆ. ಅಣೆಕಟ್ಟಿನ ಒಳಹರಿವು 6 ಸಾವಿರದ 617 ಕ್ಯೂಸೆಕ್ಸ್ ಮತ್ತು ಹೊರಹರಿವು 205 ಕ್ಯೂಸೆಕ್ಸ್ ಆಗಿದೆ. ಗಾಜನೂರಿನ ತುಂಗಾ ಅಣೆಕಟ್ಟಿನ ನೀರಿನ ಮಟ್ಟ 588.24 ಅಡಿ ಸಾಮರ್ಥ್ಯವಿದ್ದು ಈಗಾಗಲೇ 584.24 ಅಡಿಯಷ್ಟು ನೀರು ತುಂಬಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com