ವಿಶ್ವಾಸ ಮತಕ್ಕೆ ರಾಜ್ಯಪಾಲರ ಗಡುವು ಪಾಲಿಸುವುದೂ, ಬಿಡುವುದು ಸಿಎಂಗೆ ಬಿಟ್ಟದ್ದು: ಸ್ಪೀಕರ್ ರಮೇಶ್ ಕುಮಾರ್

ವಿಶ್ವಾಸ ಮತ ಯಾಚನೆ ಸಂಬಂಧ ರಾಜ್ಯಪಾಲರು ನೀಡಿರುವ ಅಂತಿಮ ಗಡುವನ್ನು ಪಾಲನೆ ಮಾಡುವುದು, ಬಿಡುವುದು ಸಿಎಂ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ವಿಶ್ವಾಸ ಮತ ಯಾಚನೆ ಸಂಬಂಧ ರಾಜ್ಯಪಾಲರು ನೀಡಿರುವ ಅಂತಿಮ ಗಡುವನ್ನು ಪಾಲನೆ ಮಾಡುವುದು, ಬಿಡುವುದು ಸಿಎಂ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಇಡೀ ದೇಶದ ಕುತೂಹಲ ಕೆರಳಿಸಿರುವ ಕರ್ನಾಟಕ ರಾಜಕೀಯ ವಿಚಾರ ಇದೀಗ ನಿರ್ಣಾಯಕ ಘಟ್ಟ ತಲುಪಿದ್ದು, ಇಂದು ಸಿಎಂ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಎಲ್ಲ ಇದೀಗ ಎಲ್ಲರ ನಿರೀಕ್ಷೆ ಹುಸಿಯಾಗಿದ್ದು, ಕಲಾಪ ಚರ್ಚೆಯಲ್ಲೇ ಸಮಯ ಕಳೆಯುತ್ತಿದೆ. ಇತ್ತ ಆಡಳಿತ ಪಕ್ಷದ ಸದಸ್ಯರು ರಾಜ್ಯಪಾಲರ ಅಧಿಕಾರ ವ್ಯಾಪ್ತಿ ಮತ್ತು ಅವರ ಕಾರ್ಯ ವೈಖರಿ ಕುರಿತಂತೆ ಸಾಂವಿಧಾನಾತ್ಮಕ ಅಂಶಗಳನ್ನು ಮುಂದಿರಿಲಿ ಕಲಾಪದಲ್ಲಿ ಚರ್ಚೆ ನಡೆಸಿದರು. 
ಬೆಳಗ್ಗೆ ಸಿಎಂ ಮಾತು ಆರಂಭಿಸುವಾಗ ಇಂದು ವಿಶ್ವಾಸಮತ ನಡೆಯಬಹುದು ಎನ್ನುವ ಲೆಕ್ಕಾಚಾರ ಇತ್ತು. ಆದರೆ ಕೃಷ್ಣಬೈರೇಗೌಡರು ಎಂದು ನಿಂತು ರಾಜ್ಯಪಾಲರಿಗೆ ವಿಶ್ವಾಸ ಮತಯಾಚನೆ ಮಾಡುವಂತೆ ಹೇಳುವ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿದರು. ಇತ್ತ ಚರ್ಚೆಯಲ್ಲೇ ರಾಜ್ಯಪಾಲರು ನೀಡಿದ್ದ ಗಡುವು ಕೂಡ ಮುಕ್ತಾಯವಾಯಿತು. ಮಧ್ಯಾಹ್ನ 1:30 ಆದರೂ ವೋಟ್ ಮಾತ್ರ ನಡೆಯಲೇ ಇಲ್ಲ. ಈ ವೇಳೆ ಯಡಿಯೂರಪ್ಪನವರು ಎದ್ದು ನಿಂತು ಸ್ಪೀಕರ್ ಅವರಲ್ಲಿ ಈ ಪ್ರಕ್ರಿಯೆ ಕೂಡಲೇ ಮುಗಿಸಿಕೊಡಿ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, ರಾಜ್ಯಪಾಲರಿಂದ ನನಗೆ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದಿರುವುದು ಸಿಎಂ ಕುಮಾರಸ್ವಾಮಿ ಅವರಿಗೆ. ಕಲಾಪ ಹೇಗೆ ನಡೆಯಬೇಕೋ ಹಾಗೆ ನಡೆಸುತ್ತೇನೆ. ಚರ್ಚೆಯಾದ ಬಳಿಕ ಮತಕ್ಕೆ ಹಾಕಲಾಗುವುದು ಎಂದು ತಿಳಿಸಿದರು. ಈ ವೇಳೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ ನಡೆದ ಪರಿಣಾಮ ಕಲಾಪವನ್ನು ಸ್ಪೀಕರ್ ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು. 
ನಿನ್ನೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ಶುಕ್ರವಾರ ಮಧ್ಯಾಹ್ನ 1:30ರೊಳಗೆ  ವಿಶ್ವಾಸಮತಯಾಚನೆ ಮಾಡುವಂತೆ ಆದೇಶಿಸಿದ್ದರು. ಈಗ ಈ ಆದೇಶದ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗದ ಮಧ್ಯೆ ಸಂಘರ್ಷ ಎದುರಾಗುವ ಸಾಧ್ಯತೆಯಿದೆ. ಸದನದಲ್ಲಿ ರಾಜ್ಯಪಾಲರ ಕಚೇರಿಯ ವಿಶೇಷ ಅಧಿಕಾರಿ ಉಪಸ್ಥಿತರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com