ಆಗಸ್ಟ್ 1 ರಿಂದ ಪ್ಲಾಸ್ಟಿಕ್ ಬ್ಯಾಗ್ ವಿತರಿಸುವ ಅಂಗಡಿಗಳಿಗೆ ಐದು ಪಟ್ಟು ದಂಡ, ಅಂಗಡಿ ಪರವಾನಗಿ ರದ್ದು: ಮೇಯರ್

ಉದ್ಯಾನ ನಗರಿ ಬೆಂಗಳೂರಿನಲ್ಲಿ ಆಗಸ್ಟ್ ೧ ರಿಂದ ಪ್ಲಾಸ್ಟಿಕ್ ಚೀಲ ಬಳಸುವ ...

Published: 20th July 2019 12:00 PM  |   Last Updated: 20th July 2019 02:31 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : UNI
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಆಗಸ್ಟ್ ೧ ರಿಂದ ಪ್ಲಾಸ್ಟಿಕ್ ಚೀಲ ಬಳಸುವ ಅಂಗಡಿಗಳ ಮೇಲೆ ಐದು ಪಟ್ಟು ದಂಡ ಮತ್ತು ಅಂಗಡಿ ಪರವಾನಗಿ ರದ್ದುಪಡಿಸುವುದಾಗಿ ಮೇಯರ್ ಗಂಗಾಭಿಕೆ ಮಲ್ಲಿಕಾರ್ಜುನ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಸೆಪ್ಟೆಂಬರ್ ೧ ರಿಂದ ಪ್ರತಿಯೊಂದು ಮನೆಗಳಲ್ಲೂ ಕಸ ವಿಂಗಡಿಸಿ ನೀಡಬೇಕು. ಇಲ್ಲದಿದ್ದರೆ ದಂಡು ವಿಧಿಸುವ ಪದ್ಧತಿ ಜಾರಿಗೆ ಬರಲಿದೆ. ಎಲ್ಲೆಂದರಲ್ಲಿ ಮನಸೋ ಇಚ್ಚೆ ಕಸ ಎಸೆಯುವವರನ್ನು ಪತ್ತೆ ಮಾಡಿ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಜಯನಗರದ ಭೈರಸಂದ್ರ ವಾರ್ಡ್ ನಲ್ಲಿ ಸುಮಾರು ಒಂದು ಸಾವಿರ ಶಾಲಾ ಮಕ್ಕಳೊಂದಿಗೆ “ ನಮ್ಮ ಕಸ ನಮ್ಮ ಜವಾಬ್ದಾರಿ, ಬೇಡ ಬೇಡ ಪ್ಲಾಸ್ಟಿಕ್ ಬೇಡ. ಬೇಕು ಬೇಕು ಬಟ್ಟೆ ಬ್ಯಾಗ್ ಬೇಕು. ಪಿಓಪಿ ಬೇಡ, ಮಣ್ಣಿನ ಗಣಪತಿ ಬೇಕು “ ಎಂಬ ಘೋಷಣೆಯೊಂದಿಗೆ ಆಯೋಜಿಸಿದ್ದ ಬೃಹತ್ ಜಾಗೃತಿ ಜಾಥಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ವಿರುದ್ಧ ಕಳೆದ ಹದಿನೈದು ದಿನಗಳಿಂದ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲಾಗುತ್ತಿದೆ. ಜತೆಗೆ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ಚೀಲ ಇಟ್ಟುಕೊಂಡಿರುವ ಅಂಗಡಿಗಳ ಮೇಲೆ ದಾಳಿ ಮಾಡಿ ಜಪ್ತಿ ಮಾಡುತ್ತಿದ್ದೇವೆ. ಆಗಸ್ಟ್ ೧ ರಿಂದ ದಂಡದ ಪ್ರಮಾಣವನ್ನು ಐದು ಪಟ್ಟು ಹೆಚ್ಚಿಸಲಾಗುವುದು. ಅದಕ್ಕೂ ಜಗ್ಗದಿದ್ದರೆ ನೋಟಿಸ್ ನೀಡಿ, ಅಂಗಡಿ ಪರವಾನಗಿಯನ್ನೇ ರದ್ದು ಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಣ್ಣ ಪುಟ್ಟ ಅಂಗಡಿಗಳು, ಬೀದಿ ಬದಿ ವ್ಯಾಪಾರಿಗಳಿಗೂ ಸಹ ಇದು ಅನ್ವಯವಾಗಲಿದೆ. ಹಣ್ಣು, ತರಕಾರಿ ಮಾರಾಟ ಮಾಡುವವರು ಸಹ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಪ್ಲಾಸ್ಟಿಕ್ ಚೀಲ ಬಳಕೆ ಮಾಡಿದ್ದೇ ಆದಲ್ಲಿ ಅವರು ಮಾರಾಟ ಮಾಡುತ್ತಿರುವ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು.

ಕಾನೂನು ಬಾಹಿರವಾಗಿ ಪ್ಲಾಸ್ಟಿಕ್ ವಿತರಣೆ ಮಾಡಲಾಗುತ್ತಿದ್ದು, ಜನತೆ ಕೂಡ ಪ್ಲಾಸ್ಟಿಕ್ ಬಳಕೆಯಿಂದ ದೂರ ಇರಬೇಕು. ಬಟ್ಟೆ ಬ್ಯಾಗ್ ಬಳಕೆಗೆ ಆದ್ಯತೆ ನೀಡಬೇಕು. ಎಲ್ಲರ ಸಹಕಾರದಿಂದ ಮಾತ್ರ ಪ್ಲಾಸ್ಟಿಕ್ ನಿಯಂತ್ರಣ ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ಸೆಪ್ಟೆಂಬರ್ ೧ ರಿಂದ ಕಸ ವಿಂಗಡನೆ ಕಡ್ಡಾಯವಾಗಿದೆ. ಬುಧವಾರ ಮತ್ತು ಶನಿವಾರ ಮಾತ್ರ ಒಣ ಕಸ ಸ್ವೀಕರಿಸಲಾಗುವುದು. ಉಳಿದ ದಿನಗಳಲ್ಲಿ ಹಸಿ ಕಸ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಕಸ ವಿಂಗಡಿಸಿ ನೀಡದಿದ್ದರೆ ಅಂತಹ ಕುಟುಂಬದವರಿಗೂ ಸಹ ದಂಡ ವಿಧಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಎಚ್ಚರಿಸಿದರು.

ಹಸಿಕಸ, ಒಣ ಕಸ ವಿಂಗಡಣೆ ಮೇಲೆ ಕಣ್ಣಿಡಲು ವಾರ್ಡ್ ನಲ್ಲಿ ೨೫ಕ್ಕೂ ಹೆಚ್ಚು ತಂಡಗಳನ್ನು ರಚಿಸಿದ್ದು, ಪ್ರತಿಯೊಂದು ತಂಡಲ್ಲಿ ಆರು ಜನ ಇರುತ್ತಾರೆ. ಜತೆಗೆ ಜತೆಗೆ ಬಾಂಧವ ಸಂಘಟನೆ ಕೂಡ ಜಾಗೃತಿ ಅಭಿಯಾನದಲ್ಲಿ ಭಾಗಿಯಾಗಲಿದೆ. ಬಾಂಧವ ತಂಡ ಕಸ ಹಾಕುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಿದ್ದು, ಪ್ಲಾಸ್ಟಿಕ್ ಬದಲು ಬಟ್ಟೆ ಬ್ಯಾಗ್ ವಿತರಿಸಲಿದೆ ಎಂದರು.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp