ಐಎಂಎ ವಂಚನೆ ಪ್ರಕರಣ: ಕಿಂಗ್ ಪಿನ್ ಮನ್ಸೂರ್ ಅಲಿ ಖಾನ್ 3 ದಿನಗಳ ಕಾಲ ಇಡಿ ವಶಕ್ಕೆ

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಮನ್ಸೂರ್ ಅಲಿ ಖಾನ್ ನನ್ನು 3 ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.
ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ (ಸಂಗ್ರಹ ಚಿತ್ರ)
ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ (ಸಂಗ್ರಹ ಚಿತ್ರ)
ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಮನ್ಸೂರ್ ಅಲಿ ಖಾನ್ ನನ್ನು 3 ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ.
ದೆಹಲಿಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಬಂಧನಕ್ಕೊಳಗಾಗಿದ್ದ ಐಎಂಎ  (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್‌ ಮನ್ಸೂರ್‌ ಖಾನ್‌ ನನ್ನು ಇಂದು ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದರು. ಇಂದು ಬೆಳಗ್ಗೆ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಕರೆತಂದಿದ್ದ ಅಧಿಕಾರಿಗಳು ಬಳಿಕ ಸಿವಿಲ್ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶರು ಮನ್ಸೂರ್ ಖಾನ್ ನನ್ನು 3 ದಿನಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.
ದುಬೈನಲ್ಲಿ ಸೆರೆಸಿಕ್ಕಿದ್ದ ಮನ್ಸೂರ್ ಖಾನ್ ಅನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ  ಮಧ್ಯಾಹ್ನ 12.15ರ ವೇಳೆಗೆ ಒಂದನೇ ಸಿಟಿ ಸಿವಿಲ್ ನ್ಯಾಯಾಲಯಕ್ಕೆ (ಪಿಎಂಎಲ್  ಎ  ನ್ಯಾಯಾಲಯ) ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಮನ್ಸೂರ್ ಅನ್ನು  ಜುಲೈ 23ರವರೆಗೆ ಇಡಿ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.  ಮನ್ಸೂರ್ ಅಲಿ ಖಾನ್  ಅವರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಕುರಿತು ವಿಚಾರಣೆ ನಡೆಸಬೇಕಿದೆ.  ಆದ್ದರಿಂದ ಅವರನ್ನು 15 ದಿನಗಳ ಕಾಲ ತಮ್ಮ ತಮ್ಮ ವಶಕ್ಕೆ ನೀಡಬೇಕೆಂದು ಇಡಿ ಪರ ವಕೀಲರು  ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ಕೇವಲ ಮೂರು ದಿನಗಳ ಕಾಲ ವಶಕ್ಕೆ ನೀಡುವುದಾಗಿ  ಆದೇಶಿಸಿತು. 
ವಿಚಾರಣೆಯ ನಂತರ ಮನ್ಸೂರ್ ಅಲಿ ಖಾನ್ ಅನ್ನು ದಾಖಲೀಕರಣಕ್ಕಾಗಿ ಇಡಿ  ಕಚೇರಿಗೆ ಕರೆದೊಯ್ಯಲಾಗಿದೆ. ಇಡಿ ಅಧಿಕಾರಿಗಳು, ವಂಚನೆ ದೂರು ದಾಖಲಾದ ನಂತರ ಇಡಿ  ಅಧಿಕಾರಿಗಳು ನಡೆಸಿದ ದಾಳಿ ವೇಳೆ ಲಭ್ಯವಾದ ಆಸ್ತಿಪಾಸ್ತಿ, ಚಿನ್ನಾಭರಣಗಳು, ದಾಖಲೆಗಳ  ಕುರಿತು ವಿಚಾರಣೆ ನಡೆಸಲಿದೆ. 
ಇನ್ನೊಂದೆಡೆ, ತೆಲಂಗಾಣ ಪೊಲೀಸರು ಹಾಗೂ ಎಸ್ ಐಟಿ ಅಧಿಕಾರಿಗಳು ಕೂಡ ಮನ್ಸೂರ್ ಅಲಿ ಖಾನ್ ಅನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು.  ದುಬೈನಲ್ಲಿ  ತಲೆಮರೆಸಿಕೊಂಡಿದ್ದ ಮನ್ಸೂರ್‌ ಖಾನ್‌ನ ಮನವೊಲಿಸಿ ವಿಶೇಷ ತನಿಖಾ ತಂಡದ (ಎಸ್‌ಐಟಿ)  ಅಧಿಕಾರಿಗಳು ಶುಕ್ರವಾರ ಮುಂಜಾನೆ 1.50ಕ್ಕೆ ದೆಹಲಿಗೆ ಕರೆತರುತ್ತಿದ್ದಂತೆ ವಶಕ್ಕೆ  ಪಡೆದ ಇ.ಡಿ.ಅಧಿಕಾರಿಗಳು  ದೆಹಲಿಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಶನಿವಾರ  ಬೆಂಗಳೂರಿಗೆ ಕರೆತಂದಿದ್ದರು.  ನಂತರ, ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ  ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿದರು. ನಂತರ ಶಾಂತಿನಗರದ ಇ.ಡಿ. ಕಚೇರಿಗೆ  ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದರು. 
ಐಎಂಎ ಸಮೂಹ ಕಂಪನಿಗಳನ್ನು  ಮುಚ್ಚಿ ಸಾರ್ವಜನಿಕರಿಗೆ ಹಣ ನೀಡದೆ ಮನ್ಸೂರ್‌ ಖಾನ್‌ ಪರಾರಿಯಾದ ಬಳಿಕ ಆಡಿಯೊ  ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿದ್ದ. ಅದರಲ್ಲಿ ತಮ್ಮಿಂದ ಹಣ ಪಡೆದ ಕೆಲವರ  ಹೆಸರನ್ನು ಬಹಿರಂಗಪಡಿಸಿದ್ದ. ಆನಂತರ ಬಿಡುಗಡೆ ಮಾಡಿದ್ದ ಇನ್ನೊಂದು ಆಡಿಯೋದಲ್ಲಿ ಹಲವರು  ತಮಗೆ ವಂಚಿಸಿರುವ ಬಗ್ಗೆ ಮಾಹಿತಿ ನೀಡಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com