ಐಎಂಎ ಜ್ಯುವೆಲ್ಸ್ ಹಗರಣದ ಕಿಂಗ್ ಪಿನ್ ಮನ್ಸೂರ್ ಖಾನ್ ಬಂಧನವಾದದ್ದು ಹೇಗೆ?

ಬಹುಕೋಟಿ ರೂಪಾಯಿ ವಂಚನೆ ಪ್ರಕರಣದ ಮುಖ್ಯ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ...
ಮೊಹಮ್ಮದ್ ಮನ್ಸೂರ್ ಖಾನ್
ಮೊಹಮ್ಮದ್ ಮನ್ಸೂರ್ ಖಾನ್
ಬೆಂಗಳೂರು: ಬಹುಕೋಟಿ ರೂಪಾಯಿ ವಂಚನೆ ಪ್ರಕರಣದ ಕಿಂಗ್ ಪಿನ್ ಮೊಹಮ್ಮದ್ ಮನ್ಸೂರ್ ಖಾನ್ ಬೆಂಗಳೂರು ಬಿಟ್ಟು ಪರಾರಿಯಾದ ಕೆಲವು ವಾರಗಳ ನಂತರ ನಿನ್ನೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿತನಾಗಿದ್ದು ಪೊಲೀಸರು ಜಾರಿ ನಿರ್ದೇಶನಾಲಯದ ಕಸ್ಟಡಿಕೊಪ್ಪಿಸಿದ್ದಾರೆ.
ಮೊಹಮ್ಮದ್ ಮನ್ಸೂರ್ ಖಾನ್ ಬಂಧನ ಪ್ರಕ್ರಿಯೆ:
 ಕರ್ನಾಟಕ ವಿಶೇಷ ತನಿಖಾ ತಂಡದ ಇಬ್ಬರು ಸಹಾಯಕ ಪೊಲೀಸ್ ಆಯುಕ್ತರು(ಎಸಿಪಿ) ಕಳೆದ 20 ದಿನಗಳಿಂದ ದುಬೈಯಲ್ಲಿ ಕೇಸಿನ ತನಿಖೆಯನ್ನು ಸತತವಾಗಿ ನಡೆಸುತ್ತಿದ್ದರು. ಮನ್ಸೂರ್ ಗಾಗಿ ಚಾತಕ ಪಕ್ಷಿಯಂತೆ ಹುಡುಕಾಟ ನಡೆಸುತ್ತಿದ್ದರು.
ಮನ್ಸೂರು ಸಿಗುತ್ತಿದ್ದಂತೆ ಭಾರತಕ್ಕೆ ಹಿಂತಿರುಗುವಂತೆ ಈ ಅಧಿಕಾರಿಗಳೇ ಆತನ ಮನವೊಲಿಸಿದ್ದು. ಮನ್ಸೂರ್ ಖಾನ್ ಸಂಪರ್ಕದಲ್ಲಿದ್ದ ವ್ಯಕ್ತಿಯ ಮೂಲಕ ಇಬ್ಬರು ಸಹಾಯಕ ಪೊಲೀಸ್ ಆಯುಕ್ತರನ್ನು ಅನೌಪಚಾರಿಕವಾಗಿ ದುಬೈಗೆ ವಿಶೇಷ ತನಿಖಾ ತಂಡ ಕಳುಹಿಸಿತ್ತು. ದುಬೈಯಲ್ಲಿ ಖಾನ್ ತನ್ನ ಇರುವಿಕೆಯನ್ನು ಪದೇ ಪದೇ ಬದಲಾಯಿಸುತ್ತಿದ್ದ.
ಜುಲೈ 14ರಂದು ಎಸಿಪಿಗಳಿಗೆ ದೂರವಾಣಿ ಮೂಲಕ ಮನ್ಸೂರ್ ನ ಸಂಪರ್ಕ ಸಿಕ್ಕಿತು. ನಂತರ ಆತನನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಭಾರತಕ್ಕೆ ಬರುವಂತೆ ಮನವೊಲಿಸಿದರು.
ಆರಂಭದಲ್ಲಿ ಮನ್ಸೂರ್ ಒಪ್ಪಲಿಲ್ಲ. ಸೆಪ್ಟೆಂಬರ್ ನಲ್ಲಿ ಮನ್ಸೂರ್ ನ ವೀಸಾ ಅವಧಿ ಮುಗಿಯುವುದರಲ್ಲಿತ್ತು. ನಂತರ ಅಲ್ಲಿ ಉಳಿದುಕೊಂಡರೆ ಗಡೀಪಾರು ಆಗುತ್ತದೆ. ಇಲ್ಲಿ ಕುಳಿತು ಏನು ಮಾಡುತ್ತೀರಾ, ಭಾರತಕ್ಕೆ ಬಾ ಎಂದು ಎಸಿಪಿಗಳು ಮನವೊಲಿಸಿದರು.
ಮನ್ಸೂರ್ ಖಾನ್ ಬೇರೆ ದೇಶಕ್ಕೆ ಹೋಗುವ ಯೋಜನೆಯಲ್ಲಿದ್ದ. ಆದರೆ ಅವನ ಪಾಸ್ ಪೋರ್ಟ್ ವಜಾ ಮಾಡಲಾಗಿದ್ದು, ಎರಡು ಲುಕ್ ಔಟ್ ನೊಟೀಸ್ ಮತ್ತು ಬ್ಲೂ ಕಾರ್ನರ್ ನೊಟೀಸ್ ಜಾರಿ  ಮಾಡಲಾಗಿದೆ. ಇನ್ನು ತಪ್ಪಿಸಿಕೊಳ್ಳುವ ಅವಕಾಶವಿಲ್ಲ ಎಂದು ಮನದಟ್ಟಾಗಿ ಬರಲು ಒಪ್ಪಿದನು, ಆದರೆ ತಾನೇ ಸ್ವಯಂಪ್ರೇರಿತವಾಗಿ ಭಾರತಕ್ಕೆ ಬಂದಿದ್ದು ಪೊಲೀಸರ ಒತ್ತಡದಿಂದಲ್ಲ ಎಂದು ಬಿಂಬಿಸುವಂತೆ ಷರತ್ತು ಹಾಕಿದನು ಎಂದು ಅಧಿಕಾರಿಗಳು ಹೇಳುತ್ತಾರೆ.
ನಂತರ ವಿಶೇಷ ತನಿಖಾ ತಂಡದ ಉನ್ನತ ಅಧಿಕಾರಿಗಳು ಮನ್ಸೂರ್ ಜೊತೆ ವಿಡಿಯೊ ಕಾಲ್ ಮೂಲಕ ಸಂಭಾಷಣೆ ನಡೆಸಿ ಕಾನೂನು ಮುಂದೆ ಶರಣಾಗುವುದು ಮಾತ್ರ ಇರುವ ಏಕೈಕ ದಾರಿ ಎಂದು ವಿವರಿಸಿದರು. ಆಗ ಮೊಹಮ್ಮದ್ ಮನ್ಸೂರ್ ಒಪ್ಪಿ ಭಾರತಕ್ಕೆ ಬಂದನು ಎನ್ನುತ್ತಾರೆ ಅಧಿಕಾರಿಗಳು.
ನಂತರ ವಿಶೇಷ ತನಿಖಾ ತಂಡ ಅಧಿಕಾರಿಗಳು ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆರಂಭದಲ್ಲಿ ಮಂಗಳೂರಿಗೆ ಕರೆತಂದು ನಂತರ ಬೆಂಗಳೂರಿಗೆ ಬರುವ ಯೋಜನೆ ಮಾಡಲಾಗಿತ್ತು. ಆದರೆ ಹಲವು ಪ್ರಕ್ರಿಯೆಗಳಿದ್ದರಿಂದ ಮತ್ತು ನೊಟೀಸ್ಕ ಜಾರಿಯಾಗಿದ್ದರಿಂದ ದೆಹಲಿಗೆ ಕರೆತರಲಾಯಿತು.
ಇದೀಗ ಮೊಹಮ್ಮದ್ ಮನ್ಸೂರ್ ವಿರುದ್ಧ ತನಿಖೆ ನಡೆದು ಹೂಡಿಕೆದಾರರ ಹಣ ಕೈಸೇರಬಹುದು ಎಂಬ ಆಶಯ ಉಂಟಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com