ದುಷ್ಕರ್ಮಿಗಳಿಂದ ಧ್ವಂಸಗೊಂಡಿದ್ದ ವ್ಯಾಸರಾಜ ವೃಂದಾವನ ಭಕ್ತರ ನೆರವಿನಿಂದ ಮರು ಪ್ರತಿಷ್ಠಾಪನೆ

ದುಷ್ಕರ್ಮಿಗಳಿಂದ ಧ್ವಂಸಗೊಂಡಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿಯ ...
ಧ್ವಂಸಗೊಂಡ ವ್ಯಾಸರಾಜ ವೃಂದಾವನ ಮತ್ತು ಮರು ನಿರ್ಮಾಣ ಹಾಗೂ ಪೇಜಾವರ ಶ್ರೀಗಳ ಚಿತ್ರಗಳು
ಧ್ವಂಸಗೊಂಡ ವ್ಯಾಸರಾಜ ವೃಂದಾವನ ಮತ್ತು ಮರು ನಿರ್ಮಾಣ ಹಾಗೂ ಪೇಜಾವರ ಶ್ರೀಗಳ ಚಿತ್ರಗಳು
ಕೊಪ್ಪಳ: ದುಷ್ಕರ್ಮಿಗಳಿಂದ ಧ್ವಂಸಗೊಂಡಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿಯ ವ್ಯಾಸರಾಜ ವೃಂದಾವನವನ್ನು ಸಾವಿರಾರು ಭಕ್ತರು ಸೇರಿ ನಿನ್ನೆ ಪುನರ್ ನಿರ್ಮಾಣ ಮಾಡಿ ಶುದ್ಧ ಕಾರ್ಯ ನಡೆಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. 
ವ್ಯಾಸರಾಜ ಮಠದ ಶ್ರೀಗಳಾದ ವಿದ್ಯಾಶ್ರೀಶ ತೀರ್ಥ, ರಾಯರ ಮಠದ ಸುಭದೀಂದ್ರ ತೀರ್ಥ ಶ್ರೀಗಳು ಮತ್ತು ಉತ್ತರಾದಿ ಮಠದ ಸತ್ಯಾತ್ಮ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ ವೃಂದಾವನ ಪುನರ್ ನಿರ್ಮಾಣ ಮಾಡುವ ಕೆಲಸ ನಿನ್ನೆ ಪೂರ್ಣಗೊಂಡಿತು. ಇದಕ್ಕೆ ಚೆನ್ನೈಯಿಂದ ನಿರ್ಮಾಣ ಉದ್ದೇಶಕ್ಕೆ ವಾಸ್ತುಶಿಲ್ಪಿಗಳನ್ನು ಕರೆಸಿಕೊಳ್ಳಲಾಯಿತು. 
ಈ ಮಧ್ಯೆ ಸ್ಥಳಕ್ಕೆ ಆಗಮಿಸಿದ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಗಂಗಾವತಿಯಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿ, ವೃಂದಾವನದ ಕಲ್ಲಿನ ಕಂಬಗಳು , ವ್ಯಾಸರಾಜರ ಸಮಾಧಿಗಳನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದು ಅವುಗಳ ಪುನರ್ ನಿರ್ಮಾಣ ಕಾರ್ಯ ನಡೆದಿದೆ. ಧಾರ್ಮಿಕ ಕಾರ್ಯ ಎಂದಿನಂತೆ ಸಾಗಲಿದೆ ಎಂದರು.
ನಿನ್ನೆ ಕೊಪ್ಪಳದಲ್ಲಿ ಬ್ರಾಹ್ಮಣ ಸಮುದಾಯದ ಸದಸ್ಯರು ಮೆರವಣಿಗೆ ಸಾಗಿ ನಡೆದ ಘಟನೆಯನ್ನು ಖಂಡಿಸಿದರು. ಕೊಪ್ಪಳ ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವ್ಯಾಸರಾಜ ಶ್ರೀಗಳ ವೃಂದಾವನ ಮಠ ಹಂಪಿ ವಿಶ್ವ ಪರಂಪರೆ ತಾಣ ಮತ್ತು ನಿರ್ವಹಣಾ ಪ್ರಾಧಿಕಾರದ ಆಡಳಿತದಡಿಯಲ್ಲಿ ಬರುತ್ತದೆ. ನಿನ್ನೆ ಪ್ರಾಧಿಕಾರದ ಆಯುಕ್ತ ಮೋತಿಲಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸ್ಥಳವನ್ನು ಖಾಸಗಿ ಜಾಗ ಎಂದು ಪರಿಗಣಿಸಲಾಗಿದ್ದು ಹೀಗಾಗಿ ವೃಂದಾವನದ ಭಕ್ತರು ಪುನರ್ ನಿರ್ಮಾಣ ಮಾಡುತ್ತಿದ್ದಾರೆ ಎಂದರು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯದಲ್ಲಿಯೇ ದುಷ್ಕರ್ಮಿಗಳನ್ನು ಪತ್ತೆಹಚ್ಚುವ ವಿಶ್ವಾಸದಲ್ಲಿದ್ದಾರೆ.
ವೃಂದಾವನ ಆನೆಗುಂದಿ ಎಂಬಲ್ಲಿದ್ದು ಇಲ್ಲಿಗೆ ಹೋಗಲು ಮೂರು ದಾರಿಗಳಿವೆ ಅವುಗಳಲ್ಲಿ ಎರಡು ತುಂಗಭದ್ರಾ ನದಿ ಮೂಲಕ ದೋಣಿಯಲ್ಲಿ ಸಾಗುವ ಮಾರ್ಗಗಳು. ಮೂರನೇ ಹಾದಿ ರಸ್ತೆಯ ಮೂಲಕವಾಗಿದ್ದು ಆ ಮೂಲಕವೇ ದುಷ್ಕರ್ಮಿಗಳು ವೃಂದಾವನಕ್ಕೆ ಹೋಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಏಕೆಂದರೆ ಸಾಯಂಕಾಲ ಹೊತ್ತಿಗೆ ದೋಣಿ ಮೂಲಕ ಯಾನ ಕೊನೆಯಾಗುತ್ತದೆ. ಈ ಘಟನೆ ಕಳೆದ ಬುಧವಾರ ರಾತ್ರಿ ನಡೆದಿದ್ದಾಗಿರಬೇಕು ಎಂದು ಪೊಲೀಸರು ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com