ಐಟಿ ದಾಳಿ ಪ್ರಕರಣ; ಹೈಕೋರ್ಟ್ ಮೆಟ್ಟಿಲೇರಿದ ಡಿ.ಕೆ.ಶಿವಕುಮಾರ್

ಆದಾಯಕ್ಕೂ ಮೀರಿ ಅಪರಿಮಿತ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಹಿರಿಯ ಕಾಂಗ್ರೆಸ್ ಮುಖಂಡ, ಶಾಸಕ ಡಿ.ಕೆ.ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
ಬೆಂಗಳೂರು: ಆದಾಯಕ್ಕೂ ಮೀರಿ ಅಪರಿಮಿತ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಹಿರಿಯ ಕಾಂಗ್ರೆಸ್ ಮುಖಂಡ, ಶಾಸಕ ಡಿ.ಕೆ.ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 
ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಆದಾಯ ತೆರಿಗೆ ಇಲಾಖೆಯನ್ನು ಪ್ರತಿವಾದಿಯನ್ನಾಗಿಸಲಾಗಿದೆ. 
2017ರಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಅವರ ಆಪ್ತರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದ ಐಟಿ  ಅಧಿಕಾರಿಗಳು, ಸಚಿವರಿಗೆ ಸೇರಿದ ದೆಹಲಿಯ ನಿವಾಸದ ಮೇಲೂ ದಾಳಿ ನಡೆಸಿ 8.60 ಕೋಟಿ ರೂ.ವಶಕ್ಕೆ ಪಡೆದುಕೊಂಡಿದ್ದರು. 
ಈ ಸಂಬಂಧ ವಿಶೇಷ ನ್ಯಾಯಾಲಯದಲ್ಲಿ ಐಟಿ ಅಧಿಕಾರಿಗಳು, ಸಚಿವ ಡಿ.ಕೆ.ಶಿವಕುಮಾರ್‌,  ಅವರ ಆಪ್ತರಾದ ಸಚಿನ್‌ ನಾರಾಯಣ್‌, ಸುನಿಲ್‌ ಕುಮಾರ್‌ ಶರ್ಮಾ, ಎನ್‌.ರಾಜೇಂದ್ರ, ಆಂಜನೇಯ ಹಾಗೂ ಇತರರನ್ನು ಆರೋಪಿಗಳನ್ನಾಗಿ ಮಾಡಿ ಪ್ರಕರಣ ದಾಖಲಿಸಿದ್ದರು.
 ಈ  ಹಿನ್ನೆಲೆಯಲ್ಲಿ  ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಆರೋಪಿಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ  ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ  ಡಿ. ಹುದ್ದಾರ ಅರ್ಜಿಯನ್ನು ವಜಾಗೊಳಿಸಿ ಜೂನ್ 25ರಂದು ಆದೇಶಿಸಿದ್ದರು. 
ವಿಶೇಷ ನ್ಯಾಯಾಲಯದ ಆದೇಶ ಕಾನೂನುಬಾಹಿರವಾಗಿದ್ದು, ಅದನ್ನು ತಡೆಹಿಡಿದು, ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡಬೇಕು ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com