ಐಎಂಎ ವಂಚನೆ ಪ್ರಕರಣ; ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ತರಾಟೆ

ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಮಾಡಿದ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಹೈ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಮಾಡಿದ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಹೈ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯಪೀಠ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ವಿರುದ್ಧ ತೀವ್ರ ಕಿಡಿಕಾರಿದೆ. ಈ ವೇಳೆ 'ನವೆಂಬರ್‌ 2018 ರಿಂದಲೇ ಐಎಂಎ ಹಗರಣದ ಬಗ್ಗೆ ಸರ್ಕಾರದ ಅಧಿಕಾರಿಗಳಿಗೆ ಅರಿವಿತ್ತು. ಆದರೂ ಏನೂ ಕ್ರಮ ಕೈಗೊಂಡಿಲ್ಲ. ಈ ವಿಷಯದಲ್ಲಿ ಸರ್ಕಾರ ಅಮಾಯಕತೆ ಪ್ರದರ್ಶಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದೆ.
ಅಂತೆಯೇ 'ಕೆಪಿಐಡಿ ಕಾಯಿದೆಯಡಿ ಸಕ್ಷ ಮ ಪ್ರಾಧಿಕಾರಿಯ ನೇಮಕ ಮಾಡುವಾಗ ಅವರ ಹಿನ್ನೆಲೆ ಪರಿಶೀಲಿಸದೇ ಏಕೆ ನೇಮಕ ಮಾಡಲಾಯಿತು ಎಂದು ಪ್ರಶ್ನಿಸಿರುವ ನ್ಯಾಯಪೀಠ, ಸೋಮವಾರ ಕೋರ್ಟ್‌ ಪ್ರಶ್ನಿಸಿದ ಮೇಲೆ ಹೊಸ ಸಕ್ಷ ಮ ಅಧಿಕಾರಿ ನೇಮಿಸಲಾಗಿದೆ. ಆ ಹೊಸ ಸಕ್ಷ ಮ ಪ್ರಾಧಿಕಾರಿ ಐಎಂಎ ಆಸ್ತಿ ವಿವರ ಕಲೆ ಹಾಕಬೇಕು ಮತ್ತು ಫೋರೆನ್ಸಿಕ್‌ ಆಡಿಟರ್‌ ನೇಮಿಸಬೇಕು ಮತ್ತು ಕಾಲಮಿತಿಯಲ್ಲಿ ಆಸ್ತಿ ಜಪ್ತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದೆ.
ವಶಕ್ಕೆ ಪಡೆದಿರುವ ಆಸ್ತಿ ಮೌಲ್ಯ ಏನೇನೂ ಅಲ್ಲ
ಇದೇ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಐಎಂಎ ಸಂಸ್ಥೆಯ ಮತ್ತು ಕಿಂಗ್ ಪಿನ್ ಮನ್ಸೂರ್ ಖಾನ್ ನ ಆಸ್ತಿಗಳ ಕುರಿತು ಮಾತನಾಡಿದ ನ್ಯಾಯಪೀಠ, ವಶಕ್ಕೆ ಪಡೆದಿರುವ ಆಸ್ತಿ ಮೌಲ್ಯ ಏನೇನೂ ಅಲ್ಲ. ದೂರುಗಳ ಪ್ರಕಾರ ಒಟ್ಟು ಹಗರಣ 3 ಸಾವಿರ ಕೋಟಿಗೂ ಅಧಿಕ ಮೊತ್ತದ್ದಾಗಿದೆ. ಆದರೆ ಕೇವಲ 300 ಕೋಟಿಗೂ ಅಧಿಕ ಆಸ್ತಿಯನ್ನು ಎಸ್‌ಐಟಿ ವಶಕ್ಕೆ ಪಡೆದಿದೆ. ಇದು ಹಗರಣದ ಶೇ. 10 ರಷ್ಟು ಕೂಡಾ ಆಗುವುದಿಲ್ಲ ಸರ್ಕಾರ ಆಸ್ತಿ ಜಪ್ತಿ ಪ್ರಕ್ರಿಯೆಗೆ ವೇಗ ನೀಡಬೇಕು''ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.
ಪ್ರಕರಣದ ತನಿಖಾ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಆದೇಶ
ಇದೇ ವೇಳೆ ಕೋಟ್ಯಂತರ ರೂಪಾಯಿಗಳ ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ)ಈವರೆಗೆ ನಡೆಸಿರುವ ತನಿಖಾ ವರದಿಯನ್ನು ಜು.30ರಂದು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಎಸ್‌ಐಟಿಯಿಂದ ಈವರೆಗೆ ಆಗಿರುವ ತನಿಖೆಯ ವಿವರ ಪಡೆಯದೆ ತನಿಖೆಯನ್ನು ಸಿಬಿಐಗೆ ವಹಿಸಲು ಸಾಧ್ಯವಿಲ್ಲವೆಂದ "ಹೈಕೋರ್ಟ್, ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಹಿತರಕ್ಷಣಾ ಕಾಯಿದೆ ಪ್ರಕಾರ ನೇಮಿಸಿರುವ ಸಕ್ಷಮ ಪ್ರಾಧಿಕಾರದ ಅಧಿಕಾರಿಯೂ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಮಧ್ಯಾಂತರ ನಿರ್ದೇಶನ ನೀಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com