ಸೋಮವಾರ ಮುನ್ನವೇ 'ಅತೃಪ್ತ' ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ನಿರ್ಧಾರ ಸಾಧ್ಯತೆ

ಸೋಮವಾರ ಜುಲೈ 29 ರಂದು ನಡೆಯಲಿರುವ ರಾಜ್ಯ ವಿಧಾನಸಭೆಯ ನಿರ್ಣಾಯಕ ಅಧಿವೇಶನದಲ್ಲಿ ನೂತನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸಮತ ಯಾಚಿಸಲಿದ್ದು, ಹಣಕಾಸು ಮಸೂದೆಗೆ ಕೆಳಮನೆಯ ಒಪ್ಪಿಗೆಯನ್ನೂ ಪಡೆದುಕೊಳ್ಳುವ ಸಾಧ್ಯತೆಯಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಸೋಮವಾರ ಜುಲೈ 29 ರಂದು ನಡೆಯಲಿರುವ ರಾಜ್ಯ ವಿಧಾನಸಭೆಯ ನಿರ್ಣಾಯಕ ಅಧಿವೇಶನದಲ್ಲಿ ನೂತನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸಮತ ಯಾಚಿಸಲಿದ್ದು, ಹಣಕಾಸು ಮಸೂದೆಗೆ ಕೆಳಮನೆಯ ಒಪ್ಪಿಗೆಯನ್ನೂ ಪಡೆದುಕೊಳ್ಳುವ ಸಾಧ್ಯತೆಯಿದೆ.
ಕಳೆದ ಮಂಗಳವಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತಯಾಚನೆಯಲ್ಲಿ ಸೋಲು ಕಂಡ ನಂತರ ಕೇವಲ ಒಂದು ವಾರದಲ್ಲಿ ರಾಜ್ಯ ವಿಧಾನಸಭೆ ಎರಡನೇ ಬಾರಿಗೆ ವಿಶ್ವಾಸ ಮತಯಾಚನೆ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಿದೆ. ವಿಧಾನಸಭಾ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ 13 ಕಾಂಗ್ರೆಸ್ – ಜೆಡಿಎಸ್ ಬಂಡಾಯ ಶಾಸಕರ ಹಣೆಬರಹವನ್ನು ನಿರ್ಧರಿಸಬೇಕಿದೆ. ಸೋಮವಾರ ಮಂಡನೆಯಾಗಲಿರುವ ಮಹತ್ವದ ವಿಶ್ವಾಸಮತದ ವೇಳೆ ಸ್ಪೀಕರ್ ಕೈಗೊಳ್ಳಬಹುದಾದ ಸಂಭವನೀಯ ತೀರ್ಮಾನ ಛಾಯೆ ಪ್ರಭಾವ ಬೀರುವ ಸಾಧ್ಯತೆಗಳು ನಿಚ್ಚಳವಾಗಿವೆ.
ಹೆಚ್ .ಡಿ. ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸ ನಿರ್ಣಯದ ಮೇಲೆ ನಾಲ್ಕು ದಿನಗಳ ಬಿರುಸಿನ ಚರ್ಚೆಯ ನಂತರ ಮೈತ್ರಿ ಸರ್ಕಾರಕ್ಕೆ ಸೋಲಾಗಿದ್ದು, 225 ಸದಸ್ಯ ಬಲದ ವಿಧಾನಸಭೆಯಲ್ಲಿ ಕೇವಲ 99 ಮತಗಳನ್ನು ಪಡೆಯಲಷ್ಟೇ ಸಾಧ್ಯವಾಯಿತು. ನಿರ್ಣಯದ ವಿರುದ್ದ 105 ಮತಗಳು ಚಲಾವಣೆಗೊಂಡಿದ್ದವು. ಸ್ಪೀಕರ್ ರಮೇಶ್ ಕುಮಾರ್, ಕಾಂಗ್ರೆಸ್ ಸಲ್ಲಿಸಿದ ದೂರುಗಳನ್ನು ಪರಿಗಣಿಸಿ ಸಂವಿಧಾನದ 10ನೇ ಪರಿಚ್ಛೇದದಡಿ ಲಭ್ಯವಾಗಿರುವ ಅಧಿಕಾರ ಬಳಸಿ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿ ಹೊಳಿ, ಮಹೇಶ್ ಕುಮಠಹಳ್ಳಿ ಹಾಗೂ ಪಕ್ಷೇತರ ಶಾಸಕ ಶಂಕರ್ ಅವರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದಾರೆ. ಉಳಿದ 10 ಕಾಂಗ್ರೆಸ್ ಹಾಗೂ ಮೂವರು ಜೆಡಿಎಸ್ ಸೇರಿದಂತೆ ಇತರ ಬಂಡಾಯ ಶಾಸಕರ ಸಂಬಂಧ ತಾವು ಸದ್ಯದಲ್ಲೇ ತೀರ್ಮಾನ ಕೈಗೊಳ್ಳುವುದಾಗಿ ಪ್ರಕಟಿಸಿದ್ದಾರೆ.
ಮೈತ್ರಿ ಸರ್ಕಾರದ ಪತನ ಹಾಗೂ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಕುಮಠಹಳ್ಳಿ ಹಾಗೂ ಪಕ್ಷೇತರ ಶಾಸಕ ಶಂಕರ್ ಸದಸ್ಯತ್ವವನ್ನು ಅನರ್ಹಗೊಳಿಸಿ ಸ್ಪೀಕರ್ ನಿರ್ಧಾರ ಪ್ರಕಟಿಸಿದ ತಕ್ಷಣ ಸಕ್ರೀಯಗೊಂಡ ಬಿಜೆಪಿ ನಾಯಕರು, ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸುವ ಹಕ್ಕನ್ನು ಮಂಡಿಸಿದ್ದರು. ಮೈತ್ರಿ ಸರ್ಕಾರದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿನ್ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಸೋಮವಾರ ವಿಧಾನಸಭಾ ಅಧಿವೇಶನದಲ್ಲಿ ವಿಶ್ವಾಸಮತಕೋರುವುದಾಗಿ, ಹಣಕಾಸು ವಿಧೇಯಕ ಮಂಡಿಸಿವುದಾಗಿ ಪ್ರಕಟಿಸಿದರು. ಸಿಬ್ಬಂದಿಯ ವೇತನ ಮತ್ತಿತರ ಸರ್ಕಾರಿ ವೆಚ್ಚಗಳಿಗೆ ಹಣಪಡೆಯಲು ವಿಧಾನಸಭೆ ಜುಲೈ 31ರೊಳಗೆ ಹಣಕಾಸು ವಿಧೇಯಕ ಅಂಗೀಕರಿಸಬೇಕಿದೆ.
ಸ್ಪೀಕರ್ ರಮೇಶ್ ಕುಮಾರ್ ಶೀಘ್ರದಲ್ಲಿಯೇ ಉಳಿದ ಬಂಡಾಯ ಶಾಸಕರ ರಾಜೀನಾಮೆಗೆ ಸಂಬಂಧಿಸಿದ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಸೋಮವಾರ ನಡೆಯಲಿರುವ ನಿರ್ಣಾಯಕ ವಿಧಾನಸಭಾ ಅಧಿವೇಶನಕ್ಕೂ ಮುನ್ನವೇ ಸ್ಪೀಕರ್ ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳು ಹೆಚ್ಚಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com