ಕಸ ವಿಲೇವಾರಿಗೆ ಕ್ವಾರಿಗಳನ್ನೇ ನಂಬಿಕೊಳ್ಳುವ ಕಾಲ ಮುಗಿಯಿತು: ಮಂಜುನಾಥ್ ಪ್ರಸಾದ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಘನತ್ಯಾಜ್ಯವನ್ನು ಮುಂದಿನ ದಿನಗಳಲ್ಲಿ ಕ್ವಾರಿಗಳಿಗೆ ಸಾಗಿಸಲು...
ಮಂಜುನಾಥ್ ಪ್ರಸಾದ್
ಮಂಜುನಾಥ್ ಪ್ರಸಾದ್
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಘನತ್ಯಾಜ್ಯವನ್ನು ಮುಂದಿನ ದಿನಗಳಲ್ಲಿ ಕ್ವಾರಿಗಳಿಗೆ ಸಾಗಿಸಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ ಜಿಟಿ) ಅವಕಾಶ ನೀಡುವುದಿಲ್ಲ. ಆದ್ದರಿಂದ ಕಸವನ್ನು ಮೂಲದಲ್ಲೇ ಬೇರ್ಪಡಿಸುವುದು ಅನಿವಾರ್ಯವಾಗಿದೆ ಎಂದು ಆಯುಕ್ತ ಎಂ.ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಬಿಬಿಎಂಪಿಯ ಮಾಸಿಕ ಸಭೆಯಲ್ಲಿ ಕಸ ವಿಲೇವಾರಿ ಸಮಸ್ಯೆಯ ಕುರಿತು ಮಾತನಾಡಿದ ಅವರು, ಇಲ್ಲಿಯವರೆಗೆ ನಗರದಲ್ಲಿ ಸಂಗ್ರಹಣೆಯಾಗುವ ಕಸವನ್ನು ಬೆಳ್ಳಳ್ಳಿ ಕ್ವಾರಿಗೆ ಸಾಗಿಸಲಾಗುತ್ತಿತ್ತು. ಆದರೆ, ಈಗ ಅದು ಭರ್ತಿಯಾಗಿರುವುದರಿಂದ ಬೇರೆ ಕ್ವಾರಿ ಆಯ್ಕೆ ಮಾಡಿಕೊಳ್ಳಬೇಕಿದೆ. ಸದ್ಯದ ಮಟ್ಟಿಗೆ ಬೆಳ್ಳಳ್ಳಿ ಕ್ವಾರಿ ಪಕ್ಕದಲ್ಲೇ ಜಾಗ ಗುರುತಿಸಿರುವುದರಿಂದ ಕೆಲ ತಿಂಗಳ ಕಾಲ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.
ಬೆಳ್ಳಳ್ಳಿ ಪಕ್ಕದಲ್ಲಿನ ಮಿಟಗಾನಹಳ್ಳಿಯ ಕ್ವಾರಿಗೆ ಕಸವನ್ನು ಸಾಗಿಸುವ ಟೆಂಡರ್ ಗೆ ಸರ್ಕಾರ ಕಳೆದ 15 ದಿನಗಳ ಹಿಂದೆ ಅನುಮೋದನೆ ನೀಡಿದೆ. ಮುಂದಿನ ಒಂದೆರಡು ವಾರಗಳಲ್ಲಿ ಅದರ ಟೆಂಡರ್ ಅನ್ನು ಅಂತಿಮಗೊಳಿಸಲಾಗುವುದು. ಆಗಸ್ಟ್ 7ರ ವೇಳೆಗೆ ಟೆಂಡರ್ ಅಂತಿಮಗೊಂಡು ಕಸ ವಿಲೇವಾರಿ ಪ್ರಕ್ರಿಯೆ ಆರಂಭಗೊಳ್ಳುವ ಭರವಸೆಯಿದೆ ಎಂದರು.
2016ರ ಏಪ್ರಿಲ್ ನಲ್ಲಿ ಕಸ ವಿಲೇವಾರಿಗೆ ಆರು ಕ್ವಾರಿಗಳನ್ನು ಗುರುತಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಅದರಲ್ಲಿ ಬೆಳ್ಳಳ್ಳಿ , ಬಾಗಲೂರು ಹಾಗೂ ಮಿಟಗಾನಹಳ್ಳಿ ಕ್ವಾರಿಗಳಿಗೆ ಮಾತ್ರ ಅನುದಾನ ಬಿಡುಗಡೆಯಾಗಿತ್ತು. ಆದರೆ, ಬಾಗಲೂರಿನ ಕ್ವಾರಿಗೆ ಕಸ ವಿಲೇವಾರಿ ಮಾಡದಂತೆ ಎನ್ ಜಿ ಟಿ ತಡೆಯಾಜ್ಞೆ ನೀಡಿದೆ. 2017ರ ವರೆಗೆ ಮಿಟಗಾನಹಳ್ಳಿಗೆ ಕಸ ಸಾಗಿಸಲಾಗುತ್ತಿದ್ದು, ನಂತರ ಅಲ್ಲಿನ ಸ್ಥಳೀಯರು ವಿರೋಧಿಸಿದ್ದರಿಂದ ತ್ಯಾಜ್ಯ ವಿಲೇವಾರಿ ಸ್ಥಗಿತಗೊಂಡಿತ್ತು ಎಂದರು.
ಸದ್ಯದ ತುರ್ತು ಅಗತ್ಯದ ಹಿನ್ನೆಲೆಯಲ್ಲಿ, ಮಿಟಗಾನಹಳ್ಳಿ, ಮಾರೇನಹಳ್ಳಿ, ಬಾಗಲೂರು ಹಾಗೂ ಬಳ್ಳಳ್ಳಿ ಕ್ವಾರಿಗಳಿಗೆ ಕಸ ವಿಲೇವಾರಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆಯಾದರೂ, ಇಲ್ಲಿಯವರೆಗೆ ಅದಕ್ಕೆ ಅನುಮೋದನೆ ದೊರೆತಿಲ್ಲ ಎಂದರು.
ಸದ್ಯ ನಗರದಲ್ಲಿ ಪ್ರತಿನಿತ್ಯ 4 ಸಾವಿರ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಅದರಲ್ಲಿ 2,500 ಟನ್ ಬೆಳ್ಳಳ್ಳಿ ಕ್ವಾರಿಗೆ, 500 ಟನ್ ಎಂಎಸ್ ಜಿಪಿ ಘಟಕ ಹಾಗೂ 500 ಟನ್ ಸಂಸ್ಕರಣಾ ಘಟಕಗಳಿಗೆ ಸಾಗಿಸಲಾಗುತ್ತಿದೆ. ಒಟ್ಟು ಸಂಗ್ರಹಣೆಯಾಗುವ ತ್ಯಾಜ್ಯದ ಪೈಕಿ 500 ಟನ್ ಮಾತ್ರ ಸಂಸ್ಕರಣೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕಸವನ್ನು ಕ್ವಾರಿಗೆ ಸಾಗಿಸಲು ಸಾಧ್ಯವಿಲ್ಲ. ಎನ್ ಜಿಟಿ ಆದೇಶದ ಪ್ರಕಾರ, ಕೆಲವೇ ತಿಂಗಳ ಕಾಲ ಮಾತ್ರ ಕ್ವಾರಿಗಳಿಗೆ ತ್ಯಾಜ್ಯ ರವಾನಿಸಲು ಅನುಮತಿ ದೊರೆತಿದೆ. ಈಗಾಗಲೇ ಕಸ ತುಂಬಿರುವ ಕ್ವಾರಿಯಿಂದಲೇ ಕಸವನ್ನು ಹೊರತೆಗೆದು ಬೇರ್ಪಡಿಸುವಂತೆ ಸೂಚನೆ ನೀಡಿದ್ದು, ಅದಕ್ಕಾಗಿ ದಂಡವನ್ನೂ ವಿಧಿಸಿದೆ. ಮುಂದಿನ ದಿನಗಳಲ್ಲಿ ಕ್ವಾರಿಗಳನ್ನು ಸಂಪೂರ್ಣ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಕಸ ವಿಂಗಡಣೆ ಅನಿವಾರ್ಯವಾಗಲಿದೆ. ಹಸಿ ಕಸವನ್ನು ಸಂಸ್ಕರಣೆ ಹಾಗೂ ಒಣ ಕಸವನ್ನು ಮರುಬಳಕೆ ಇಲ್ಲವೇ ತ್ಯಾಜ್ಯ ಇಂಧನ ಬಳಕೆಗೆ ಬಳಸಬೇಕಾಗುತ್ತದೆ ಎಂದರು.
ಇದೇ ವೇಳೆ ಕಬ್ಬನ್ ಪಾರ್ಕ್ ನಲ್ಲಿ ಎಲ್​ಇಡಿ ಜಾಹೀರಾತು ಅಳವಡಿಸುವ 100 ಕೋಟಿ ರುಪಾಯಿ ಟೆಂಡರ್ ಅನ್ನು ರದ್ದುಗೊಳಿಸಿರುವುದಾಗಿ ಮಂಜುನಾಥ್ ಪ್ರಸಾದ್ ಅವರು ತಿಳಿಸಿದರು.
ಮುಖ್ಯ ಇಂಜಿನಿಯರ್ ನನ್ನ ಗಮನಕ್ಕೆ ತರದೆ ಎಲ್ ಇಡಿ ಜಾಹೀರಾತು ಟೆಂಡರ್ ಕರೆದಿದ್ದರು. ಈಗ ಅದನ್ನು ರದ್ದುಗೊಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com