ಮಂಗಳೂರು: ಮಾಜಿ ಸಿಎಂ ಎಸ್ ಎಂ ಕೃಷ್ಣ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ನಾಪತ್ತೆ

ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ ಅವರ ಅಳಿಯ ಖ್ಯಾತ ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರು ನಾಪತ್ತೆಯಾಗಿದ್ದು,...
ಸಿದ್ಧಾರ್ಥ್ (ಸಂಗ್ರಹ ಚಿತ್ರ)
ಸಿದ್ಧಾರ್ಥ್ (ಸಂಗ್ರಹ ಚಿತ್ರ)
ಮಂಗಳೂರು: ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ ಅವರ ಅಳಿಯ ಖ್ಯಾತ ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರು ದಿಢೀರ್‌ ನಾಪತ್ತೆಯಾಗಿದ್ದು, ಕುಟುಂಬ ಹಾಗೂ ಆಪ್ತ ವಲಯದಲ್ಲಿ ಆತಂಕ ಮನೆ ಮಾಡಿದೆ. ರಾಜ್ಯಾದ್ಯಂತ ಸುದ್ದಿಯಾಗಿದೆ. 
ಸಿದ್ಧಾರ್ಥ್ ನಿನ್ನೆ ಸಂಜೆ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತಮ್ಮ ಇನ್ನೊವಾ ಕಾರಿನಲ್ಲಿ ಚಾಲಕನ ಜೊತೆ ತೆರಳಿದ್ದರು. ಅಲ್ಲಿಂದ, ಮಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಮಂಗಳೂರಿನಿಂದ ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನ ಮೊಗರು ಎಂಬಲ್ಲಿ ಕಾರು ಚಾಲಕನಿಗೆ ಹೇಳಿ ಕೆಳಗಿಳಿದಿದ್ದರು.
ಚಾಲಕನಿಗೆ, ಇಲ್ಲೇ ಇರು, ಈಗ ವಾಪಸ್‌ ಬರುತ್ತೇನೆ ಎಂದು ಹೇಳಿ ಮೊಬೈಲ್‌ನಲ್ಲಿ ಮಾತನಾಡುತ್ತ ತೆರಳಿದ್ದರು. ಅರ್ಧ ಗಂಟೆ ಕಳೆದರೂ ವಾಪಸ್‌ ಬರದಿದ್ದುದರಿಂದ ಸಿದ್ಧಾರ್ಥ ಅವರ ಮೊಬೈಲ್‌ಗೆ ಚಾಲಕ ಕರೆ ಮಾಡಿದ್ದಾರೆ. ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಗಾಬರಿಯಾಗಿ ಮನೆಯವರಿಗೆ ತಿಳಿಸಿದ್ದಾರೆ. 
ಜಪ್ಪಿನ ಮೊಗರು ಎಂಬ ಸ್ಥಳ ನೇತ್ರಾವತಿ ನದಿ ತಟದಲ್ಲೇ ಇದ್ದು, ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಕುಟುಂಬಸ್ಥರ ಆತಂಕ ಹೆಚ್ಚಾಗಿದೆ. 
ಕಾರು ಚಾಲಕನಿಂದ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸಿದ್ಧಾರ್ಥ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್‌ ನೇತೃತ್ವದಲ್ಲಿ ಭಾರೀ ಸಂಖ್ಯೆಯ ಪೊಲೀಸರು ದೋಣಿ ಸಹಾಯದಿಂದ ಶೋಧ ಮುಂದುವರಿಸಿದ್ದಾರೆ. 
ಘಟನಾ ಸ್ಥಳಕ್ಕೆ ಶಾಸಕ, ಮಾಜಿ ಸಚಿವ ಯು ಟಿ ಖಾದರ್ ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸಹ ಆಗಮಿಸಿದ್ದಾರೆ. ಸಿದ್ಧಾರ್ಥ ಅವರು ಸೇತುವೆಯ ಮಧ್ಯಭಾಗದಿಂದ ನದಿಗೆ ಹಾರಿರಬಹುದೆಂದು ಶಂಕೆ ಹಿನ್ನೆಲೆಯಲ್ಲಿ ದೇಹಕ್ಕಾಗಿ ಬೋಟ್ ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. 
ಕೆಫೆ ಕಾಫಿ ಡೇ ಸೇರಿದಂತೆ ಹಲವು ಉದ್ಯಮಗಳಲ್ಲಿ ಸಿದ್ಧಾರ್ಥ್ ತೊಡಗಿಸಿಕೊಂಡಿದ್ದರು. ಚಿಕ್ಕಮಗಳೂರು ಮೂಲದ ಸಿದ್ಧಾರ್ಥ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರ ಮಗಳನ್ನು ಮದುವೆಯಾಗಿದ್ದಾರೆ. 
ತಮ್ಮ ಸ್ನಾತಕೋತ್ತರ ಪದವಿ ಮುಗಿಸಿ ಸಿದ್ಧಾರ್ಥ್ ಮುಂಬೈಯಲ್ಲಿ ಜೆಎಂ ಫೈನಾನ್ಷಿಯಲ್ ಲಿಮಿಟೆಡ್ ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಬೆಂಗಳೂರಿಗೆ ತಮ್ಮ ಕಾರ್ಯಕ್ಷೇತ್ರವನ್ನು ವರ್ಗಾಯಿಸಿಕೊಂಡು ಸಿವನ್ ಸೆಕ್ಯುರಿಟೀಸ್ ಎಂಬ ಹೆಸರಿನಲ್ಲಿ ಕಂಪೆನಿ ಆರಂಭಿಸಿ ಷೇರು ವಹಿವಾಟು ನಡೆಸುತ್ತಿದ್ದರು. ನಂತರ 200ನೇ ಇಸವಿಯಲ್ಲಿ ಕಂಪೆನಿ ಹೆಸರನ್ನು ಗ್ಲೋಬಲ್ ಟೆಕ್ನಾಲಜಿ ವೆಂಚುರ್ಸ್ ಎಂದು ಮರು ನಾಮಕರಣ ಮಾಡಲಾಗಿತ್ತು. 

ಇದರ ಜೊತೆಯಲ್ಲಿಯೇ ಕೆಫೆ ಕಾಫಿ ಡೇ ಸರಣಿ ಔಟ್ ಲೆಟ್ ಗಳನ್ನು ಆರಂಭಿಸಿ ಆ ಮೂಲಕ ಖ್ಯಾತರಾದರು. ತಮ್ಮ ಊರಾದ ಚಿಕ್ಕಮಗಳೂರಿನ ಕಾಫಿಯನ್ನು ಜಗತ್ತಿಗೆ ಈ ಮೂಲಕ ಪರಿಚಯಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com