ಸಿದ್ಧಾರ್ಥ್‌ ನಾಪತ್ತೆ ಪ್ರಕರಣ: ಎನ್.ಡಿ.ಆರ್.ಎಫ್ ತಂಡದಿಂದ ತೀವ್ರ ಶೋಧ

ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ಅವರ ಅಳಿಯ ಉದ್ಯಮಿ ವಿ ಜಿ ಸಿದ್ದಾರ್ಥ್ ಮಂಗಳೂರು ಸಮೀಪ ನೇತ್ರಾವತಿ ನದಿ...
ಸಿದ್ಧಾರ್ಥ್
ಸಿದ್ಧಾರ್ಥ್
ಮಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಳಿಯ, ಕಾಫಿ ಡೇ ಉದ್ಯಮ ಸಂಸ್ಥೆಗಳ ನಿರ್ದೇಶಕ ಸಿದ್ದಾರ್ಥ ನಾಪತ್ತೆ ಹಿನ್ನಲೆಯಲ್ಲಿ ಇದೀಗ ನೇತ್ರಾವತಿ ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮಂಗಳವಾರ ಮುಂಜಾನೆಯಿಂದಲೇ ಆರಂಭಗೊಂಡಿದೆ.

ಸ್ಥಳೀಯ ಮುಳುಗು ತಜ್ಞರ ಒಂದು ತಂಡ ಹಾಗೂ ಅಗ್ನಿಶಾಮಕ ದಳದ ಒಂದು ತಂಡ ಈಗಾಗಲೇ ಎರಡು ಬೋಟ್ ಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿವೆ.

ಎನ್.ಡಿ.ಆರ್.ಎಫ್ ನ ಎರಡು ತುಕಡಿ ಈಗಾಗಲೇ ಸ್ಥಳಕ್ಕೆ ಆಗಮಿಸಿದ್ದು, ನದಿಯ ಇನ್ನೊಂದು ಕಡೆಯಿಂದ ಹುಡುಕಾಟ ಆರಂಭಿಸಿದೆ. ಉಳ್ಳಾಲ ಸೇತುವೆಯಲ್ಲಿ ಸಿದ್ಧಾರ್ಥ್ ನಿನ್ನೆ ನಾಪತ್ತೆಯಾಗಿದ್ದು, ನೇತ್ರಾವತಿ ನದಿಯು ಸಮುದ್ರ ಸೇರುವ ಪ್ರದೇಶದಲ್ಲೇ ಈ ಘಟನೆ ನಡೆದಿದೆ. 

ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಮೃತ ಶರೀರ ಕಡಲು ಸೇರುವ ಸಾಧ್ಯತೆಯೂ ಇದೆ‌. ಅಲ್ಲದೆ ಎರಡು ಅಥವಾ ಮೂರು ದಿನದ ಬಳಿಕವೇ ಶವ ಮತ್ತೆ ದಡಕ್ಕೆ ಬರುವ ಸಾಧ್ಯತೆಯೂ ಹೆಚ್ಚಾಗಿದೆ. ಅಳಿವೆ ಬಾಗಿಲು ಆಗಿರುವ ಪ್ರದೇಶವಾಗಿರುವುದರಿಂದ  ಸಮುದ್ರ ಹಾಗೂ ನದಿಯ ನೀರಿನ ಒತ್ತಡವೂ ಹೆಚ್ಚಿರುವ ಕಾರಣ, ಪತ್ತೆ ಕಾರ್ಯಚರಣೆಗೂ ತೊಂದರೆಯಾಗುತ್ತಿದೆ.

ಹುಡುಕಾಟ ಕಾರ್ಯಚರಣೆಯನ್ನು ನೋಡಲು ಸಾರ್ವಜನಿಕರು ನೇತ್ರಾವತಿ ನದಿಯ ಸೇತುವೆಯಲ್ಲಿ ಭಾರೀ ಸಂಖ್ಯೆಯ ಜನ ನೆರೆದಿರುವುದರಿಂದ ಹೆದ್ದಾರಿ 66 ರಲ್ಲಿ ಸೇತುವೆ ಎರಡೂ ಕಡೆಯೂ ಕಿ.ಮೀನ ಉದ್ದಕ್ಕೂ ಸಂಚಾರ ದಟ್ಟಣೆ ಉಂಟಾಗಿದೆ. 

ಪೊಲೀಸ್ ಮೂಲಗಳಿಂದ ಆತ್ಮಹತ್ಯೆ ಸಂಶಯ:  
ಐಟಿ, ಡಿಜಿ ತೀವ್ರ ಕಿರುಕುಳು ನೀಡಿದ್ದರು. ಹಣಕಾಸು ಸಮಸ್ಯೆಯಿಂದ ಹೊರಬರಲು ಸಾಕಷ್ಟು ಪ್ರಯತ್ನ ಪಟ್ಟರೂ ಷೇರುಗಳನ್ನು ಮಾರಾಟ ಮಾಡಲು ಯತ್ನಿಸಿದರೂ ಐಟಿ ಅಧಿಕಾರಿಗಳು ಸಹಕಾರ ನೀಡಲಿಲ್ಲ.
ಕಂಪನಿಯ ಆಡಳಿತ ಮಂಡಳಿಯ ನಿರ್ದೇಶಕರಿಗೆ ತಿಳಿಯದೆ ಸಾಕಷ್ಟು ಹಣದ ವಹಿವಾಟು ನಡೆಸಿದ್ದೇನೆ. ತುಂಬಾ ಸಾಲವನ್ನು ಪಡೆದಿದ್ದೇನೆ. ಆಸ್ತಿ, ದಾಖಲೆಗಳು ಪ್ರಸ್ತುತ ಮೌಲ್ಯ ಮತ್ತು ಷೇರುಗಳ, ಬಂಡವಾಳ ಹೂಡಿಕೆಗಳ ಬಗ್ಗೆ ಪತ್ರದಲ್ಲಿ ಸಿದ್ಧಾರ್ಥ್ ಉಲ್ಲೇಖಿಸಿದ್ದಾರೆ. ಅಲ್ಲದೇ, ನನ್ನ ಆಸ್ತಿ ಮಾರಿ ಸಾಲಗಾರರಿಗೆ, ಹೂಡಿಕೆದಾರರಿಗೆ ಅವರ ಹಣವನ್ನು ನೀಡಿ ಎಂದು ಪತ್ರದಲ್ಲಿ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ಇನ್ನೊಂದೆಡೆ ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ಅವರ ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದ ಮುಂದೆ ಜನರು ಸೇರಿದ್ದಾರೆ. ಇಂದು ನಸುಕಿನ ಜಾವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕಾಂಗ್ರೆಸ್ ನಾಯಕರಾದ ಡಿ ಕೆ ಶಿವಕುಮಾರ್, ಬಿ ಎಲ್ ಶಂಕರ್ ಭೇಟಿ ನೀಡಿ ಎಸ್ ಎಂ ಕೃಷ್ಣ ಅವರ ಜೊತೆ ಮಾತನಾಡಿದ್ದಾರೆ. ಅವರ ಕುಟುಂಬ ವರ್ಗದವರಿಗೆ ಆತಂಕದ ಸಮಯದಲ್ಲಿ ಸಾಂತ್ವನ ಹೇಳಿದ್ದಾರೆ.
ಈ ಬಗ್ಗೆ ಸುದ್ದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಕಲೇಶಪುರಕ್ಕೆ ಹೋಗಿ ಬರುವುದಾಗಿ ಹೇಳಿ ನಿನ್ನೆ ಸಾಯಂಕಾಲ ಬೆಂಗಳೂರಿನಿಂದ ಹೊರಟಿದ್ದರು. ದಾರಿ ಮಧ್ಯೆ ಕಾರು ಚಾಲಕನಿಗೆ ಮಂಗಳೂರು ಕಡೆ ಹೋಗುವಂತೆ ಸೂಚಿಸಿದರು. ನೇತ್ರಾವತಿ ನದಿ ಸೇತುವೆ ಬಳಿ ತಲುಪಿದಾಗ ಕಾರು ನಿಲ್ಲಿಸುವಂತೆ ಚಾಲಕನಿಗೆ ಹೇಳಿ ಮೊಬೈಲ್ ನಲ್ಲಿ ಮಾತನಾಡುತ್ತಾ ಕಾರಿನಿಂದಿಳಿದು ಈಗ ಬರುತ್ತೇನೆಂದು ಹೇಳಿ ನಡೆದುಕೊಂಡು ಸೇತುವೆ ಮೇಲೆ ಒಬ್ಬರೇ ಹೋಗಿದ್ದಾರೆ. ಎಷ್ಟು ಹೊತ್ತಾದರೂ ಬಾರದಿದ್ದಾಗ ಕಾರು ಚಾಲಕ ಫೋನ್ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಆ ಹೊತ್ತಿನಿಂದ ಸಿದ್ದಾರ್ಥ್ ಕಾಣೆಯಾಗಿದ್ದಾರೆ ಎಂದು ವಿವರಿಸಿದರು.
ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ದೋಣಿಗಳ ಮೂಲಕ ಸ್ಥಳೀಯ ಮೀನುಗಾರರ ಸಹಾಯದಿಂದ ನೇತ್ರಾವತಿ ನದಿಯಲ್ಲಿ ತೀವ್ರ ಶೋಧ ಮುಂದುವರಿದಿದೆ. ಈ ಮಧ್ಯೆ ಸಿದ್ಧಾರ್ಥ್ ಕಡೆಯ ಬಾರಿಗೆ ಮೊಬೈಲ್ ನಲ್ಲಿ ಯಾರ ಜೊತೆ ಮಾತನಾಡಿದ್ದರು ಎಂದು ತಪಾಸಣೆ ನಡೆಸುತ್ತಿದ್ದಾರೆ.
ಅಗ್ನಿ ಶಾಮಕ ಸಿಬ್ಬಂದಿ, ಮೀನುಗಾರರು, ರಬ್ಬರ್ ಬೋಟ್ ಮೂಲಕ ಮತ್ತು ಮುಳುಗು ತಜ್ಞರ, ನೌಕಾಪಡೆ ನೆರವಿನಿಂದ ಹುಡುಕಾಟ ನಡೆಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com