ವಿ ಜಿ ಸಿದ್ದಾರ್ಥ ನಾಪತ್ತೆ ಪ್ರಕರಣ: ಗೊಂದಲಕ್ಕೆ ಸಿಲುಕಿದ ಪೊಲೀಸರು

ಕಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿ ಜಿ ಸಿದ್ದಾರ್ಥ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಪೊಲೀಸರು ಗೊಂದಲಕ್ಕೆ ಸಿಲುಕಿದ್ದಾರೆ. ತನಿಖೆ ಕೈಗೊಂಡ ಪೊಲೀಸರಿಗೆ ಐಟಿ ಇಲಾಖೆ ನೀಡಿದ ಸ್ಪಷ್ಟೀಕರಣದಿಂದ ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ.
ವಿ. ಜಿ. ಸಿದ್ಧಾರ್ಥ
ವಿ. ಜಿ. ಸಿದ್ಧಾರ್ಥ
ಬೆಂಗಳೂರು: ಕಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿ ಜಿ ಸಿದ್ದಾರ್ಥ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಪೊಲೀಸರು ಗೊಂದಲಕ್ಕೆ ಸಿಲುಕಿದ್ದಾರೆ. 
ಸಂಸ್ಥೆಯ ನಿರ್ದೇಶಕರಿಗೆ  ಸಿದ್ದಾರ್ಥ  ಬರೆದಿದ್ದರು ಎನ್ನಲಾದ ಪತ್ರವನ್ನು ಆಧರಿಸಿ ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಐಟಿ ಇಲಾಖೆ ನೀಡಿದ ಸ್ಪಷ್ಟೀಕರಣದಿಂದ ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ.
ನಿನ್ನೆ ತಡರಾತ್ರಿ ಬಂದ ದೂರನ್ನಾಧರಿಸಿ ರಾತ್ರಿ ಹಾಗೂ ಬೆಳಗ್ಗೆಯಿಂದಲೇ ನೇತ್ರಾವತಿ ನದಿ ಹಾಗೂ ಸಮುದ್ರ ಸೇರುವ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.ಸಿದ್ದಾರ್ಥ ತಮ್ಮ ಸಂಸ್ಥೆಯ ನಿರ್ದೇಶಕರಿಗೆ ಹಾಗೂ ಸಿಬ್ಬಂದಿಗೆ ಬರೆದ ಪತ್ರವನ್ನು ಆಧರಿಸಿ ಇದು ಆತ್ಮಹತ್ಯೆ ಇರಬಹುದು ಎಂಬ ದೃಷ್ಟಿಕೋನದಲ್ಲಿ ತನಿಖೆ ಆರಂಭಿಸಿದ್ದರೂ ಇದುವರೆಗೂ ಯಾವುದೇ ಫಲಕಾರಿಯಾಗಿಲ್ಲ.
 ಅಲ್ಲದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಲ್ಲಿಯೇ ಇಡೀ ನೇತ್ರಾವತಿ ನದಿಯನ್ನು ಮುಳುಗು ತಜ್ಞರು,ಅಗ್ನಿ ಶಾಮಕ ಸಿಬ್ಬಂದಿ, ನೌಕಾ ಸಿಬ್ಬಂದಿ, ಮೀನುಗಾರರ ಸಹಕಾರದಿಂದ ನಿರಂತರ ಶೋಧ ನಡೆಸಿದ್ದಾರೆ.
ಬೆಳಗಿನಿಂದ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗದ ಮತ್ತು ಐಟಿ ಇಲಾಖೆ ಸ್ಪಷ್ಟೀಕರಣದಿಂದಾಗಿ ತನಿಖೆಯ ದಾರಿಯನ್ನು ಬದಲಿಸಿದ್ದಾರೆ. ಸಿದ್ಧಾರ್ಥ ಅವರ ದೂರವಾಣಿಯ ಕರೆಗಳ ಮಾಹಿತಿಯನ್ನು ಸಂಗ್ರಹಿಸಿದಾಗ ಕೊನೆಯ ಕರೆಯೂ ನೇತ್ರಾವತಿ ನದಿಯ ಸೇತುವೆ ಮೇಲಿಂದಲೇ ಮಾಡಿರುವುದು ಕಂಡು ಬಂದಿದೆ. 
ಕಾಫಿ‌ ಡೇ ಕಂಪನಿ‌ ಮುಖ್ಯ ಹಣಕಾಸು ಅಧಿಕಾರಿ ರಾಮ್ ಮೋಹನ್ ಅವರಿಗೆ ಸಿದ್ದಾರ್ಥ  ಕೊನೆಯ ಬಾರಿಗೆ ಕರೆ ಮಾಡಿ 56 ಸೆಕೆಂಡ್ ಮಾತನಾಡಿ, ಬಳಿಕ ಕರೆಯನ್ನು ಸ್ಥಗಿತಗೊಳಿಸಿದ್ದಾರೆ. ಬಳಿಕ ದೂರವಾಣಿ ಸ್ವಿಚ್ಡ್ ಆಫ್ ಆಗಿದ್ದು ಅದೂ ಉಲ್ಲಾಳ ಸೇತುವೆಯ ಮೇಲೆಯೇ ಆಗಿದೆ ಎನ್ನಲಾಗಿದೆ. 
ಇದರಿಂದ ಗೊಂದಲಕ್ಕೆ ಒಳಗಾಗಿರುವ ಪೊಲೀಸರು ಇತರ ಆಯಾಮಗಳಿಂದ ತನಿಖೆ ಆರಂಭಿಸಿದ್ದಾರೆ.ಸಿದ್ಧಾರ್ಥ ದೂರವಾಣಿ ಸಂಖ್ಯೆಯ ಸಿಡಿಆರ್ ನಲ್ಲಿ  ಕಳೆದೊಂದು ವಾರದ ಕರೆ ಮಾಹಿತಿ ಪರಿಶೀಲಿಸಿದಾಗ ಜಾವೇದ್ ಎಂಬಾತನಿಗೆ ಸಿದ್ಧಾರ್ಥ್ ಹಲವಾರು ಬಾರಿ ಹೊರ-ಒಳ ಬರುವ ಕರೆಗಳನ್ನು ಮಾಡಿರುವುದು ಕಂಡು ಬಂದಿದೆ. ಜಾವೇದ್ ರನ್ನು ವಿಚಾರಣೆ ನಡೆಸಿ, ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮಂಗಳೂರು ಪೊಲೀಸರು ಮುಂದಾಗಿದ್ದಾರೆ.
ಇಡೀ ದಿನ ಶೋಧ ಕಾರ್ಯಾಚರಣೆ ನಡೆಸಿದರೂ ಯಾವುದೇ ಸುಳಿವು ಸಿಗುತ್ತಿಲ್ಲ. ಕತ್ತಲು ಆವರಿಸುತ್ತಿದ್ದರೂ ನೇತ್ರಾವತಿಯಲ್ಲಿ ವಿವಿಧ ತಂಡಗಳು ಶೋಧ ಕಾರ್ಯ ಮುಂದುವರೆಸಿವೆ. ನದಿ ತಟದಲ್ಲಿ ಹಾಗೂ ಸೇತುವೆಯ ಕೆಳ ಭಾಗಕ್ಕೆ ಜನರೇಟರ್ ಗಳನ್ನು ಬಳಸಿ ಲೈಟಿಂಗ್ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಕತ್ತಲು ಆವರಿಸುತ್ತಿದ್ದಂತೆಯೇ ಕೆಲ ಹೊತ್ತು ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಆದೇಶಿಸಿದ್ದರು.
ನದಿ ತಟದಲ್ಲಿ 15 ಅಡಿ ಎತ್ತರದ ಆಸ್ಕಾ ಲೈಟ್ಸ್ ಅಳವಡಿಕೆ ಹಾಗೂ ರಾತ್ರಿ ವೇಳೆ ಶೋಧಕ್ಕೆ ಬಳಸುವ ತೀವ್ರ ಬೆಳಕಿನ ದೀಪಗಳನ್ನು ಕಾರ್ಯಾಚರಣೆಗೆ ಅನುಕೂಲವಾಗುವಂತೆ ಅಳವಡಿಸಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ತನಿಖಾಧಿಕಾರಿಗಳ ಸೂಚನೆ ಮೇರಗೆ ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com