ಸದನದಲ್ಲಿ ಗದ್ದಲಕ್ಕೆ ಕಾರಣವಾದ ಟಿಪ್ಪು ಜಯಂತಿ: ಸದನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ರದ್ದು ವಿಚಾರ ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.
ಸದನದಲ್ಲಿ ಗದ್ದಲಕ್ಕೆ ಕಾರಣವಾದ ಟಿಪ್ಪು ಜಯಂತಿ: ಸದನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಸದನದಲ್ಲಿ ಗದ್ದಲಕ್ಕೆ ಕಾರಣವಾದ ಟಿಪ್ಪು ಜಯಂತಿ: ಸದನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಬೆಂಗಳೂರು: ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ರದ್ದು ವಿಚಾರ ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.  ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಟಿಪ್ಪು ಜಯಂತಿ ಮಾರ್ಧನಿಸಿತು. ನೂತನ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು, ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಯಿತು.
ಬುಧವಾರ ಸದನ ಸಮಾವೇಶಗೊಂಡಾಗ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಗೇರಿ ಅವರನ್ನು ಚುನಾಯಿಸುವಂತೆ ಪ್ರಸ್ತಾವ ಮಂಡಿಸಿದರು. ಪ್ರಸ್ತಾವಕ್ಕೆ ಶಾಸಕ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದಾಗ ಸ್ಪೀಕರ್ ಆಯ್ಕೆ ಪ್ರಸ್ತಾವವನ್ನು ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಪ್ರಸ್ತಾವವನ್ನು ಮತಕ್ಕೆ ಹಾಕಿದರು. ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ  ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಧ್ವನಿಮತದ ಮೂಲಕ ಒಪ್ಪಿಗೆ ದೊರೆತಿದ್ದರಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಕಲಾಪ ಆರಂಭದಲ್ಲಿ  ಉದ್ಯಮಿ ಸಿದ್ದಾರ್ಥ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು.
ಬಳಿಕ ನೂತನ ಸಭಾಧ್ಯಕ್ಷರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪೀಠದ ಬಳಿ ಗೌರವಪೂರ್ವಕ ಕರೆತಂದರು. ಬಳಿಕ ಸಭಾಧ್ಯಕ್ಷರ ಆಯ್ಕೆ ಮೇಲೆ ಯಡಿಯೂರಪ್ಪ ಮಾತನಾಡಿ, ಸ್ಪೀಕರ್ ಹುದ್ದೆಗೆ ಕಾಗೇರಿ ಅವರು ಅವಿರೋಧವಾಗಿ ಆಯ್ಕೆಯಾಗಿರುವುದು ಸ್ವಾಗತಾರ್ಹ.ಇದಕ್ಕಾಗಿ ಸದನದಲ್ಲಿ ಅಭಿನಂದನೆ ಸಲ್ಲಿಸಿದರು.
ಎಬಿವಿಪಿ ಸಕ್ರಿಯ ಕಾರ್ಯಕರ್ತರಾಗಿ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿರುವ ಕಾಗೇರಿ ಅವರು, 6 ಬಾರಿ ಶಾಸನಸಭೆಯನ್ನು ಪ್ರತಿನಿಧಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರಾಗಿಯೂ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಪಕ್ಷಾತೀತವಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ಸಹಕಾರ ಪಡೆದು ಪೀಠಕ್ಕೆ ಗೌರವ ತರುತ್ತಾರೆ ಎಂದು  ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಉದ್ಯಮಿ ಸಿದ್ದಾರ್ಥ್ ಅವರ ಅಂತ್ಯಕ್ರಿಯೆಯಲ್ಲಿ ತಾವು ಪಾಲ್ಗೊಳ್ಳಬೇಕಿದ್ದು, ಆದಷ್ಟು ಬೇಗ ಸದನ ಮುಗಿಸುವಂತೆ ಪೀಠಕ್ಕೆ ಅವರು ಮನವಿ ಮಾಡಿದ ಅವರು, ಸಭಾಧ್ಯಕ್ಷರ ಅನುಮತಿ ಪಡೆದು ಸದನದಿಂದ ಚಿಕ್ಕಮಗಳೂರಿಗೆ ತೆರಳುತ್ತಿರುವುದಾಗಿ ಹೇಳಿದರು. ಸಿದ್ದರಾಮಯ್ಯ ಮಾತನಾಡಿ,  ಇಂದಿನ ದಿನಗಳಲ್ಲಿ ಸಂಸದೀಯ ಪ್ರಜಾತಂತ್ರ ವ್ಯವಸ್ಥೆ ಕ್ಷೀಣಿಸುತ್ತಿದ್ದು,  ಕಲಾಪಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಭಾವನೆಯಿದೆ. ಯಾವುದೇ ಕಾರಣಕ್ಕೂ ಸದನಕ್ಕಿರುವ ಪರಂಪರೆ ಕಳೆಯಬಾರದು ಎಂದು ಕಿವಿ ಮಾತು ಹೇಳಿದರು.
ನೂತನ ಸಭಾಧ್ಯಕ್ಷರು ಸಜ್ಜನಿಕೆಯ ವ್ಯಕ್ತಿ, ಹೋರಾಟದಿಂದ ಬಂದವರು ಎಂಬ ಮಾಹಿತಿ ಇದೆ. ಎಬಿವಿಪಿ, ಆರ್ ಎಸ್;ಎಸ್ ಸೋಂಕು ಪೀಠಕ್ಕೆ ತಗಲಾರಬಾರದು. ಸಭಾಧ್ಯಕ್ಷರು ಸದನದ ಗೌರವ ಎತ್ತಿ  ಹಿಡಿಯುತ್ತಾರೆ ಎಂಬ ವಿಶ್ವಾಸವಿರೋದಾಗಿ ಅವರು ಹೇಳಿದರು. ಸ್ಪೀಕರ್ ಚುನಾವಣೆ ಅವಿರೋಧವಾಗಿ ಆಯ್ಕೆಯಾದಾಗ ಮಾತ್ರ ಪೀಠಕ್ಕೆ ಬೆಲೆ ಬರುವುದು ಎಂದ ಸಿದ್ದರಾಮಯ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಸಿದ್ದರಾಮಯ್ಯ ಸದನದಲ್ಲಿ ಟಿಪ್ಪು ಜಯಂತಿ ರದ್ದು ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ  ಯಡಿಯೂರಪ್ಪ ಪೀಠದ ಅನುಪತಿ ಪಡೆದು ಸದನದಿಂದ ತೆರಳಲು ಮುಂದಾದಾಗ, ಮುಖ್ಯಮಂತ್ರಿಗಳು ಐದು ನಿಮಿಷ ತಮ್ಮ ಮಾತನ್ನು ಕೇಳಬೇಕು ಎಂದು ಒತ್ತಾಯಿಸಿದರು. 
ನಿಕಟಪೂರ್ವ ಸಭಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಸದಸ್ಯ ರಮೇಶ್ ಕುಮಾರ್ ಮಾತನಾಡಿ, ಯಾರನ್ನು ಮಂತ್ರಿ ಮಾಡಲು; ಸಾಧ್ಯವಿಲ್ಲವೋ  ಅಂತಹವರನ್ನು ಮೇಲೆ ಕಳುಹಿಸಲಾಗುತ್ತದೆ ಎನ್ನುವ ಮೂಲಕ ಸಚಿವಾಕಾಂಕ್ಷಿಯಾಗಿದ್ದ ಕಾಗೇರಿ ಅವರಿಗೆ ಸ್ಪೀಕರ್ ಸ್ಥಾನ ನೀಡಲಾಗಿದೆ ಹಾಗೂ ಮೈತ್ರಿ ಸರ್ಕಾರದಲ್ಲಿ ಸಚಿವಾಕಾಂಕ್ಷಿಯಾಗಿದ್ದ ತಮಗೂ ಇದೇ ಕಾರಣಕ್ಕಾಗಿ ಸ್ಪೀಕರ್ ಹುದ್ದೆ ನೀಡಲಾಗಿತ್ತು ಎಂಬುದನ್ನು ಅವರು ಪರೋಕ್ಷವಾಗಿ ಅವರು ಸ್ಪಷ್ಟಪಡಿಸಿದರು.
1935  ರಲ್ಲಿ; ಸೆಂಟ್ರಲ್ ಲೆಜಿಸ್ಲೇಟಿವ್ ಕೌನ್ಸಿಲ್ ಅಲೆಕ್ಸಾಂಡರ್  ಅವರ ಬಳಿಕ ಗಣೇಶ್ ವಾಸುದೇವ್ ಅವರು ಮೊದಲ ಸ್ಪೀಕರ್ ಆಗಿದ್ದರು. ಮೌಲಂಕರ್ ಉತ್ತಮ ಸಭಾಧ‍್ಯಕ್ಷರು ಎಂದು ರಮೇಶ್ ಕುಮಾರ್ ಸದನದಲ್ಲಿ ಇತಿಹಾಸ ಬಿಚ್ಚಿಟ್ಟರು. ಮನುವಾದ ಮತ್ತು ಮಾನವೀಯತೆ ನಡುವೆ ಸಂಘರ್ಷವಾಗುತ್ತಲೇ ಇರುತ್ತದೆ. ಶೂದ್ರರ ಬಗ್ಗೆ ಉಲ್ಲೇಖವೇ ಆಗುವುದಿಲ್ಲ. ಆಚಾರ ವಿಚಾರದ ಬಗ್ಗೆ ಚರ್ಚೆ ಮಾಡುವುದು ಬೇರೆ. ಅಸಮಾನತೆಯಿಂದ ನಡೆದುಕೊಳ್ಳುವುದು ಬೇರೆ. ಸಂವಿಧಾನದ ಹೆಸರಿನಲ್ಲಿ ಅಸಮಾನತೆ ವಿಜೃಂಭಿಸಬಾರದು ಎಂದು ರಮೇಶ್ ಕುಮಾರ್ ಕರೆ ನೀಡಿದರು. 
ನೂತನ ಸಭಾಧ್ಯಕ್ಷರು ಮನುಸ್ಮೃತಿ ಮತ್ತು ಚಾತುರ್ವರ್ಣಪದ್ದತಿ ಮನಸ್ಥಿತಿಯುಳ್ಳವರು. ಹೀಗಾಗಿ ಅವರ ಮೇಲೆ ನ್ಯಾಯದ ತಕ್ಕಡಿ ಇದೆ. ಜಲಿಯನ್ ವಾಲಾಭಾಗ್ ರಕ್ತದ ಕಲೆ ಹಣೆಯ ಮೇಲೆ ಇಟ್ಟುಕೊಂಡು ಪ್ರಜಾಪ್ರಭುತ್ವ ಉಳಿದಿದೆ. ಎಲ್ಲಿಯವರೆಗೆ ಸಂಸದೀಯ ವೇದಿಕೆಯಲ್ಲಿ ಪ್ರಜೆಗಳಿಗಾಗಿ ಅವಕಾಶ ನೀಡುವುದಿಲ್ಲವೋ ಅಲ್ಲಿಯವರೆಗೆ ಜನರಿಗೆ ಸದನದ ಮೇಲೆ ನಂಬಿಕೆ ವಿಶ್ವಾಸ ಇರುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಅತಂತ್ರ ಮನಸ್ಥತಿ ಹಾಗೂ ವೈಚಾರಿಕತೆ ಈ ಎರಡರ ತತ್ವ ಸಿದ್ಧಾಂತಗಳನ್ನು ಒಟ್ಟಿಗೆ ಕೊಂಡೊಯ್ಯುವುದು ಕಷ್ಟ ಎಂದು ರಮೇಶ್ ಕುಮಾರ್ ಸದನದಲ್ಲಿ ವೇದಾಂತದ ಮಾತುಗಳನ್ನಾಡಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಗೊಳಿಸಿದ್ದ ಸಾರ್ವತ್ರಿಕ ಹಜರತ್ ಟಿಪ್ಪು ಜಯಂತಿ ಆಚರಣೆಯನ್ನು ಬಿಜೆಪಿ ಸರ್ಕಾರ ರದ್ದುಪಡಿಸಿದ್ದಕ್ಕೆ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸದ್ದುಗದ್ದಲದ ವಿರೋಧದ ನಡುವೆಯೇ ಯಡಿಯೂರಪ್ಪ ಸದನದಿಂದ ತೆರಳಿದರು. ಆಗ ಟಿಪ್ಪು ಜಯಂತಿ ರದ್ದು ವಿಚಾರ ಚರ್ಚೆಗೆ ನಿಲುವಳಿ ಸೂಚನೆ ನೀಡಿಲ್ಲ.  ಹೀಗಾಗಿ ಈ ಕುರಿತು ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಸಭಾಧ್ಯಕ್ಷರು ಹೇಳಿದರು. ಆಗ ಇದು ತುರ್ತು ವಿಚಾರ ಹೀಗಾಗಿ ನಿಲುವಳಿ ಸೂಚನೆ ನೀಡಲಾಗದು ಎಂದು ತಾಕೀತು ಮಾಡಿದರು. 
ಸದನ ಇಂದೇ ಮುಗಿಯುವುದರಿಂದ ಮುಂದೆ ಸದನದಲ್ಲಿ ಚರ್ಚಿಸಲು ತಡವಾಗುತ್ತದೆ. ಹೀಗಾಗಿ ಟಿಪ್ಪು ಜಯಂತಿ ರದ್ದು ಚರ್ಚೆಗೆ ಅವಕಾಶ ನೀಡುವಂತೆ ಸಿದ್ದರಾಮಯ್ಯ ಸಭಾಧ್ಯಕ್ಷರಿಗೆ ಆಗ್ರಹಿಸಿದರು. ಜಯಂತಿ ರದ್ದು ಆಚರಣೆ ಚರ್ಚೆ ಪ್ರತಿಪಕ್ಷ ಬಿಜೆಪಿ ಸದಸ್ಯರು ತೀವ್ರ ವಿರೋಧ ತೋರಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ಗದ್ದಲ ಏರ್ಪಟ್ಟ ಪರಿಣಾಮ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com