ಅಪಾಯ ಮಟ್ಟ ತಲುಪಿದ ಕೃಷ್ಣಾ ನದಿ, 14 ಗಂಟೆಯಿಂದ ವಾಹನ ಸಂಚಾರ ಬಂದ್

ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಆಲಮಟ್ಟಿ ಜಲಾಶಯದಿಂದ ಬೃಹತ್ ಪ್ರಮಾಣದ ನೀರು ಬಿಡುಗಡೆ ಮಾಡಿದ ನಂತರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆಲಮಟ್ಟಿ ಡ್ಯಾಮ್
ಆಲಮಟ್ಟಿ ಡ್ಯಾಮ್
ರಾಯಚೂರು: ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಆಲಮಟ್ಟಿ ಜಲಾಶಯದಿಂದ ಬೃಹತ್ ಪ್ರಮಾಣದ  ನೀರು ಬಿಡುಗಡೆ ಮಾಡಿದ ನಂತರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮತ್ತು ರಾಯಚೂರು ಜಿಲ್ಲೆಯ  ದೇವದುರ್ಗ ತಾಲ್ಲೂಕಿನ ಹೂವಿನ ಹಡಗಲಿ ಸೇತುವೆ ಮುಳುಗಡೆಗೊಂಡು 14 ತಾಸಿನಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಾಹನ ಸಂಚಾರವನ್ನು ಬೇರೆ ಮಾರ್ಗವಾಗಿ ತಿರುಗಿಸಲಾಗಿದೆ.
ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ಎಲ್) ಮೂಲಗಳಂತೆ, ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕಿನ ಶೀಲಹಳ್ಳಿ ಮತ್ತು ಹಂಚಿನಾಳ್‌ ಗ್ರಾಮಗಳ ನಡುವೆ ಕೃಷ್ಣ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮುಳುಗಿದೆ.
ರಾತ್ರಿ 11.30ಕ್ಕೆ ಜಲಾಶಯದಿಂದ ನದಿಗೆ 1.83 ಲಕ್ಷ ಕ್ಯೂಸೆಕ್ ಪ್ರಮಾಣದ ನೀರನ್ನು ಬಿಡುಗಡೆ  ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಬುಧವಾರ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ  ಜಲಾಶಯಕ್ಕೆ 1.56 ಲಕ್ಷ ಕ್ಯೂಸೆಕ್ ಒಳಹರಿವು ಬಂದಿದೆ. 
ಭಾರಿ ಪ್ರಮಾಣದ ನೀರು  ಬಿಡುಗಡೆಯಿಂದ ಸೇತುವೆ ಮುಳುಗಿದ್ದು ಇದರಿಂದ ಶೀಲಹಳ್ಳಿ ಮತ್ತು ಹಂಚಿನಾಳ, ಜಲದುರ್ಗ,  ಕಡದರಗದ್ದೆ, ಯರಗೋಡ ಮತ್ತು ಗೋನವಾಟ್ಲಾ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಂತ್ರಸ್ಥ ಗ್ರಾಮಗಳಿಗೆ ಭೇಟಿ ನೀಡಿ, ನದಿಯ ಬಳಿ ಹೋಗದಂತೆ ನಿವಾಸಿಗಳನ್ನು ಎಚ್ಚರಿಸಿದ್ದಾರೆ. ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಯ ಬಗ್ಗೆ ರಾಯಚೂರು ಮತ್ತು ಯಾದಗಿರಿ ಜಿಲ್ಲಾ ಆಡಳಿತಗಳು ಕೃಷ್ಣಾ ನದಿ ಜಲಾನಯನ ಪ್ರದೇಶದ ಜನರನ್ನು ಎಚ್ಚರಿಸಿವೆ.
ಪಶ್ಚಿಮ ಘಟ್ಟಗಳು ಮತ್ತು ಮಹಾರಾಷ್ಟ್ರದ ಕೃಷ್ಣಾ ನದಿಯ ಜಲಾನಯನ ಪ್ರದೇಶಗಳಲ್ಲಿ ಸಾಕಷ್ಟು  ಮಳೆಯಾಗುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ(ಆಲಮಟ್ಟಿ ಅಣೆಕಟ್ಟು) ಒಳಹರಿವು ಹೆಚ್ಚಾಗಿದೆ ಎಂದು ಕೆಬಿಜೆಎನ್ಎಲ್ ಮೂಲಗಳು ತಿಳಿಸಿವೆ.
ಸದ್ಯ, ಅಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ 111,319 ಟಿಎಂಸಿ ಇದೆ. ಒಟ್ಟು ಸಾಮರ್ಥ್ಯ 123.08 ಟಿಎಂಸಿ ಆಗಿದೆ ಎಂದು ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com