ಜಿಂದಾಲ್ ಗೆ ಭೂಮಿ ಹಸ್ತಾಂತರ: ರಾಜಕೀಯಪ್ರೇರಿತ ಆಕ್ಷೇಪಕ್ಕೆ ಉತ್ತರಿಸಲ್ಲ ಎಂದ ಸಜ್ಜನ್ ಜಿಂದಾಲ್

ಬಳ್ಳಾರಿಯ ಜಿಂದಾಲ್ ಸಂಸ್ಥೆ ನೆಲದ ಕಾನೂನಿಗೆ ಬದ್ಧವಾಗಿದ್ದು, ಸರ್ಕಾರ ತನ್ನ ನಿಯಮದಂತೆ ಜಮೀನು ಮಾರಾಟ ಮಾಡುತ್ತಿದೆ. ಈ ಬಗ್ಗೆ ವ್ಯಕ್ತವಾಗಿರುವ ಆಕ್ಷೇಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ...
ಸಜ್ಜನ್ ಜಿಂದಾಲ್
ಸಜ್ಜನ್ ಜಿಂದಾಲ್
ಬಳ್ಳಾರಿ: ಬಳ್ಳಾರಿಯ ಜಿಂದಾಲ್ ಸಂಸ್ಥೆ ನೆಲದ ಕಾನೂನಿಗೆ ಬದ್ಧವಾಗಿದ್ದು, ಸರ್ಕಾರ ತನ್ನ ನಿಯಮದಂತೆ ಜಮೀನು ಮಾರಾಟ ಮಾಡುತ್ತಿದೆ. ಈ ಬಗ್ಗೆ ವ್ಯಕ್ತವಾಗಿರುವ ಆಕ್ಷೇಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಜಿಂದಾಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಸಜ್ಜನ್ ಜಿಂದಾಲ್ ಸ್ಪಷ್ಟಪಡಿಸಿದ್ದಾರೆ
ತೋರಣಗಲ್ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಸಂಸ್ಥೆ ಕಾನೂನುಬದ್ಧವಾಗಿ ನಡೆಯುತ್ತಿದೆ. ನಿಯಮ ಮೀರಿ ನಾವು ಭೂಮಿ ಖರೀದಿಸುತ್ತಿಲ್ಲ. ಸರ್ಕಾರ ಕೂಡ ನಿಯಮದಂತೆ ಭೂಮಿ ಮಾರಾಟ ಮಾಡುತ್ತಿದೆ. ಈ ಬಗ್ಗೆ ವ್ಯಕ್ತವಾಗಿರುವ ಆಕ್ಷೇಪಣೆಗಳಿಗೆ ಉತ್ತರಿಸಲು ಹೋಗುವುದಿಲ್ಲ ಎಂದರು. 
ಸರಕಾರದ ಆಡಳಿತ ನಿರ್ವಹಣೆ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ಇಷ್ಟಕ್ಕೂ ನಮ್ಮ ಸಂಸ್ಥೆ ಅಕ್ರಮವಾಗಿ ಜಮೀನು  ಪಡೆದಿಲ್ಲ. ಪಡೆಯುವ ಕೆಲಸವನ್ನೂ ಸಹ ಮಾಡುವುದಿಲ್ಲ. ರಾಜಕೀಯ  ಮಾಡುವ ಅಗತ್ಯ ಸಂಸ್ಥೆಗಿಲ್ಲ ಎಂದು ಸಜ್ಜನ್ ಜಿಂದಾಲ್ ಹೇಳಿದರು. 
  ಜಿಂದಾಲ್ ಸಂಸ್ಥೆಗೆ ಭೂಮಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಯಾರೆಂದು‌ ತಮಗೆ ಗೊತ್ತಿಲ್ಲ. ಕೆಲವರು ಮಾತ್ರ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ  ಮಾತನಾಡುವ ಹಕ್ಕಿದ್ದು, ಎಲ್ಲರೂ ಮಾತಾಡಬಹುದು ಎಂದರು. 
ಮೈಸೂರು ಮಿನರಲ್ಸ್ ಗೆ ಜಿಂದಾಲ್ ಸಂಸ್ಥೆ ಪಾವತಿಸ ಬೇಕಾಗಿರುವ ಬಾಕಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಈ ವಿಚಾರ ನ್ಯಾಯಾಲಯದಲ್ಲಿದ್ದು, ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದರು. 
ಇಂದು ವಾಣಿಜ್ಯದ್ಯೋಮ ಸಂಘದ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಇದೊಂದು ಒಳ್ಳೆಯ ಕಾರ್ಯಕ್ರಮ. ಉದ್ಯಮ ಮತ್ತು ರಾಜಕೀಯ ಬೇರೆ ಬೇರೆ. ವಿಷಾದವೆಂದರೆ ಟಿಆರ್ ಪಿ ಗಾಗಿ ಕೆಲವರು ನಕಾರಾತ್ಮಕವಾಗಿ  ಮಾತನಾಡುವುದನ್ನು ಆರಂಭಿಸಿದ್ದಾರೆ ಎಂದರು. 
ಎಫ್ ಕೆ ಸಿ ಸಿ ಐ ಅಧ್ಯಕ್ಷ ಸುಧಾಕರ ಶೆಟ್ಟಿ  ಜಿಂದಾಲ್ ಸಂಸ್ಥೆಗೆ ಸರಕಾರ ಕೊಟ್ಟ ಮಾತಿನಂತೆ ಜಮೀನು ಮಾರಾಟ ಮಾಡಬೇಕು. ಸರ್ಕಾರ ತನ್ನ ವಾಗ್ದಾನ ಈಡೇರಿಸದಿದ್ದರೆ ರಾಜ್ಯಕ್ಕೆ ಹರಿದು ಬರುವ ಬಂಡವಾಳದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಉದ್ಯಮ ವಲಯ ಬೇರೆ ಕಡೆ ವಲಸೆ ಹೋಗುವ ಅಪಾಯವಿದೆ ಎಂದರು. 
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚೆಗೆ ಜಿಂದಾಲ್ ಕಂಪೆನಿಗೆ 3,667 ಎಕರೆ ಭೂಮಿಯನ್ನು ಮಾರಾಟ ಮಾಡಲು ಒಪ್ಪಿಗೆ ನೀಡಿತ್ತು. ಮೊದಲು ಗುತ್ತಿಗೆ, ನಂತರ ಮಾರಾಟ ಮಾಡುವ ಒಪ್ಪಂದದ ಅನ್ವಯ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚೆಗೆ ಈ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಿ ಪ್ರತಿ ಎಕರೆಗೆ 1.22 ಲಕ್ಷ ರೂ ನಿಂದ 1.50 ಲಕ್ಷ ರೂಗೆ ಭೂಮಿ ಮಾರಾಟ ಮಾಡಲು ತೀರ್ಮಾನಿಸಲಾಗಿತ್ತು. 
ರಾಜ್ಯ ಸಚಿವ ಸಂಪುಟ ತೀರ್ಮಾನ ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಈ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಮೈತ್ರಿ ಸರ್ಕಾರ ಜಿಂದಾಲ್ ಕಂಪೆನಿಗೆ ಅನುಕೂಲ ಮಾಡಿಕೊಡಲು ಹೊರಟಿದೆ ಎಂದು ಆರೋಪಿಸಿದ್ದರು. 
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್, ಜಿಂದಾಲ್ ಗೆ ಭೂಮಿ ನೀಡುತ್ತಿರುವುದನ್ನು ತಮ್ಮದೇ ಸರ್ಕಾರದ ವಿರುದ್ಧ ಪತ್ರ ಸಮರ ಸಾರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com