ಕಳಚಿತು ಸಾಹಿತ್ಯದ ಮತ್ತೊಂದು ಕೊಂಡಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಇನ್ನಿಲ್ಲ

ಹಿರಿಯ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದಾರೆ. ನಟ ಹಾಗೂ ಸಾಹಿತಿ...
ಗಿರೀಶ್ ಕಾರ್ನಾಡ್
ಗಿರೀಶ್ ಕಾರ್ನಾಡ್
ಬೆಂಗಳೂರು: ಹಿರಿಯ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದಾರೆ. ನಟ ಹಾಗೂ ಸಾಹಿತಿ (81) ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಗಿರೀಶ್ ಕಾರ್ನಾಡ್ 1938 ಮೇ 19 ರಂದು ಮಹಾರಾಷ್ಟ್ರದ ಮಥೇರಾನ್ ನಲ್ಲಿ ಜನಿಸಿದ್ದರು. 
ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿಪರ ಮನೋಭಾವದ ಡಾ.ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದು ಕೊ೦ಡರು. 

ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ 5 ವರ್ಷದ ಮಗ ವಸಂತನ ತಾಯಿ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು. ಸಮಾಜ ಏನೆನ್ನುತ್ತದೆ ಅನ್ನುವುದಕ್ಕಿಂತ ಆದರ್ಶ ಹಾಗೂ ಪ್ರಗತಿಪರತೆ ರಘುನಾಥ್ ಕಾರ್ನಾಡರಲ್ಲಿ ಕಂಡು ಬರುತ್ತದೆ. ಮುಂದೆ ಕಾರ್ನಾಡರಿಗೆ ತಂದೆಯ ಪ್ರಗತಿಪರ ವಾತಾವರಣವೇ ಅವರ ಬೆಳವಣಿಗೆಯಲ್ಲಿ ಸಹಾಯಕವಾಯಿತು.

ವಿದ್ಯಾಭ್ಯಾಸ: ಗಿರೀಶರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು. ಆ ಬಳಿಕ ರ್ಹೊಡ್ಸ್ ಸ್ಕಾಲರ್‌ಶಿಪ್‌ ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ್‌ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಆಗಿದ್ದಾರೆ.

ವಿದೇಶದಲ್ಲೂ ಕನ್ನಡ ನಾಟಕ ಮಾಡಿದ್ದರು:
ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರುತಿಸಿಕೊಂಡ ಕಾರ್ನಾಡ್ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು.

ಕಾರ್ನಾಡ್‌ರ ನಾಟಕ ವಿವಿಧ ಭಾಷೆಗಳಿಗೆ ಅನುವಾದ:
ಇವರು ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಭಾರತೀಯ ಹಲವು ಭಾಷೆಗಳಿಗೆ ತಮ್ಮ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡವು.

ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಸಂಪಾದಕರಾಗಿ ನೌಕರಿಯಲ್ಲಿದ್ದು, ಅದನ್ನು ತೊರೆದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು.

ಯು.ಆರ್.ಅನಂತಮೂರ್ತಿಯವರ ಕಾದಂಬರಿ ಆಧರಿತ ಹಾಗೂ ಪಟ್ಟಾಭಿರಾಮರೆಡ್ಡಿ ಅವರ ನಿರ್ದೇಶನದ "ಸಂಸ್ಕಾರ" ಚಲನಚಿತ್ರವು ಕನ್ನಡದ ಪ್ರಥಮ ಕಲಾತ್ಮಕ ಚಲನಚಿತ್ರವಾಗಿದ್ದು, ಈ ಚಲನಚಿತ್ರದಲ್ಲಿ ಗಿರೀಶ ಕಾರ್ನಾಡರದು ಪ್ರಮುಖ ಪಾತ್ರ ಮಾಡಿದ್ದರು. ಇದು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲವನ್ನು ತಂದು ಕೊಟ್ಟ ಚಿತ್ರ.

ನಂತರ ಗಿರೀಶ್‌ ಕಾರ್ನಾಡ್‌ ಅವರು ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿ ಆಧರಿತ ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರ ತಂದುಕೊಟ್ಟಿತು.

ಮುಂದೆ "ತಬ್ಬಲಿಯು ನೀನಾದೆ ಮಗನೆ", "ಕಾಡು", "ಒಂದಾನೊಂದು ಕಾಲದಲ್ಲಿ" ಚಿತ್ರಗಳನ್ನು ನಿರ್ದೇಶಿಸಿದರು. "ಕಾಡು" ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು. ನಂತರ "ಉತ್ಸವ", "ಗೋಧೂಳಿ"ಎಂಬ ಹಿಂದಿ ಚಿತ್ರಗಳನ್ನೂ ನಿರ್ದೇಶಿಸಿದರು.

ಬಳಿಕ ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಯನ್ನು ಆಧರಿಸಿ "ಕಾನೂರು ಹೆಗ್ಗಡಿತಿ" ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು.

ಇದಲ್ಲದೆ ಕನಕ ಪುರಂದರ, ದ.ರಾ.ಬೇಂದ್ರೆ ಹಾಗು ಸೂಫಿ ಪಂಥ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು. ಪರಿಸರ ವಿನಾಶ ಕುರಿತು ಚೆಲುವಿ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದರು. 2007 ರಲ್ಲಿ ತೆರೆಕಂಡ 'ಆ ದಿನಗಳು' ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರ ಜೊತೆಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ.
 
ರಂಗಭೂಮಿಯ ಜತೆಗೆ ಗಿರೀಶ್‌ ಕಾರ್ನಾಡರು ಸಿನಿಮಾ ರಂಗದಲ್ಲೂ ತೊಡಗಿದ್ದರು. ಧೀರ ರಣ ವಿಕ್ರಮ, ರುದ್ರ ತಾಂಡವ, ಸವಾರಿ-2, ಯಾರೇ ಕೂಗಾಡಲಿ. ಕಂಪೇಗೌಡ, ಆ ದಿನಗಳು, ತನನಂ ತನನಂ, ಎ.ಕೆ-47 ಮುಂತಾದ ಪ್ರಸಿದ್ಧ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೇ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳ ಸಿನಿಮಾಗಳಲ್ಲೂ ಗಿರೀಶ್‌ ಕಾರ್ನಾಡ್‌ ನಟಿಸಿ ದೇಶದಲ್ಲಿ ದೊಡ್ಡ ಹೆಸರು ಮಾಡಿದ್ದರು.

ರಂಗಭೂಮಿ, ಸಿನಿಮಾ, ನಾಟಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಕಾರ್ನಾಡರು ಮುಡಿಗೇರಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ(1974), ಪದ್ಮಭೂಷಣ(1992), ಜ್ಞಾನಪೀಠ(1998) , ಕಾಳಿದಾಸ ಸಮ್ಮಾನ್(1998) ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಗಿರೀಶ್‌ ಕಾರ್ನಾಡರ ಪ್ರಸಿದ್ಧ ನಾಟಕಗಳು:
 1. ಮಾ ನಿಷಾಧ - ಏಕಾಂಕ ನಾಟಕ
 2. ಯಯಾತಿ - 1961
 3. ತುಘಲಕ್ - 1964
 4. ಹಯವದನ - 1972
 5. ಅಂಜುಮಲ್ಲಿಗೆ - 1977
 6. ಹಿಟ್ಟಿನ ಹುಂಜ ಅಥವಾ ಬಲಿ - 1980
 7. ನಾಗಮಂಡಲ - 1990
 8. ತಲೆದಂಡ - 1990
 9. ಅಗ್ನಿ ಮತ್ತು ಮಳೆ - 1995
 10. ಟಿಪ್ಪುವಿನ ಕನಸುಗಳು - 1997
 11. ಒಡಕಲು ಬಿಂಬ - 2005
 12. ಮದುವೆ ಅಲ್ಬಮ್
 13. ಫ್ಲಾವರ್ಸ - 2012
 14. ಬೆಂದ ಕಾಳು ಆನ್ ಟೋಸ್ಟ- 2012

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com