ಜಿಂದಾಲ್ ಗೆ 3,667 ಎಕರೆ ಜಮೀನು ಮಾರಾಟ ಕೈಬಿಡಲು ಮೈತ್ರಿ ಸರ್ಕಾರ ನಿರ್ಧಾರ

ಜಿಂದಾಲ್ ಸ್ಟೀಲ್ ಕಂಪನಿಗೆ ಗುತ್ತಿಗೆ ನೀಡಿದ್ದ 3,667 ಎಕರೆ ಜಮೀನು ಮಾರಾಟ ಕೈಬಿಡಲು ಮೈತ್ರಿ ಸರ್ಕಾರ ತೀರ್ಮಾನಿಸಿದೆ.
ಜಿಂದಾಲ್ ಕಚೇರಿ
ಜಿಂದಾಲ್ ಕಚೇರಿ
ಬೆಂಗಳೂರು: ಜಿಂದಾಲ್ ಸ್ಟೀಲ್ ಕಂಪನಿಗೆ ಗುತ್ತಿಗೆ ನೀಡಿದ್ದ 3,667 ಎಕರೆ ಜಮೀನು ಮಾರಾಟ ಕೈಬಿಡಲು ಮೈತ್ರಿ ಸರ್ಕಾರ ತೀರ್ಮಾನಿಸಿದೆ.
ಸರ್ಕಾರದ ಉನ್ನತ ಮೂಲಗಳು ಈ ಮಾಹಿತಿ ದೃಢಪಡಿಸಿದ್ದು. ಮೇ 27 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿಯ ತೋರಣಗಲ್ಲು ಹಾಗೂ ಕುರೆಕುಪ್ಪ ಗ್ರಾಮಗಳಲ್ಲಿನ 2000 ಎಕರೆ ಹಾಗೂ ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿಯ1666.73 ಎಕರೆ ಜಮೀನನ್ನು 2006 ಮತ್ತು 2007 ರಲ್ಲಿ ಗುತ್ತಿಗೆ ಮತ್ತು ಮಾರಾಟದ ಆಧಾರದ ಮೇಲೆ ಸರ್ಕಾರ ಜಿಂದಾಲ್ ಸ್ಟೀಲ್ ಕಂಪನಿಗೆ ನೀಡಿತ್ತು. ಗುತ್ತಿಗೆ ಅವಧಿ ಮುಗಿದ ಹಿನ್ನಲೆಯಲ್ಲಿ ಎರಡು ಒಪ್ಪಂದಗಳಂತೆ 3667 ಎಕರೆ ಜಮೀನನ್ನು ಜಿಂದಾಲ್ ಸ್ಟೀಲ್ ಕಂಪನಿಗೆ ಪರಭಾರೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು.
ಆದರೆ ಸಂಪುಟ ಸಭೆಗೆ ಮುನ್ನ ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ಅವರು, ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಜೆಎಸ್ ಡಬ್ಯ್ಲು ಸ್ಟೀಲ್ ಗೆ ಭೂಮಿ ಮಾರಾಟ ಮಾಡುವ ನಿರ್ಣಯವನ್ನು ಸಚಿವ ಸಂಪುಟ ಅಂಗೀಕರಿಸದಂತೆ ಮನವಿ ಮಾಡಿದ್ದರು. ಆದರೂ ಸಚಿವ ಸಂಪುಟ ಸಭೆಯಲ್ಲಿ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಅವರ ಒತ್ತಡಕ್ಕೆ ಮಣಿದು ಪರಬಾರೆಗೆ ಸಂಪುಟ ಸಮ್ಮತಿ ನೀಡಿತ್ತು ಎನ್ನಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿ ಅನುಮೋದನೆ ನೀಡಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಪುಟ ನಿರ್ಣಯಕ್ಕೆ ಅಂಗೀಕಾರ ನೀಡಿರಲಿಲ್ಲ ಎನ್ನಲಾಗಿದೆ. ಸಚಿವ ಸಂಪುಟ ತೀರ್ಮಾನದ ಬಳಿಕ ಮಾಜಿ ಸಚಿವ ಎಚ್ ಕೆ ಪಾಟೀಲ್ ಮುಖ್ಯಮಂತ್ರಿ ಹಾಗೂ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಪತ್ರ ಬರೆದು ಜಿಂದಾಲ್ ಸಂಸ್ಥೆ ಸರ್ಕಾರದ ಅಧೀನ ಸಂಸ್ಥೆಯಾದ ಎಂಎಂಎಲ್ ಗೆ 2000 ಕೋಟಿ ರೂ ಬಾಕಿ ಪಾವತಿಸಬೇಕಿದೆ ಹಾಗೂ ಸಂಸ್ಥೆಯ ಮೇಲೆ ಲೋಕಾಯುಕ್ತ ಅಕ್ರಮ ಗಣಿಗಾರಿಕೆ ವರದಿಯ 23ನೇ ಅಧ್ಯಾಯದಲ್ಲಿ ಲಕ್ಷಾಂತರ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಸಾಗಾಣಿಕೆ ಮಾಡಿರುವ ಆರೋಪ ಹೊರಿಸಲಾಗಿದ್ದು, ಈ ಪ್ರಕರಣ ತಾರ್ಕಿಕ ಅಂತ್ಯವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಜಿಂದಾಲ್ ಸಂಸ್ಥೆಯ ಮೇಲೆ ಅಕ್ರಮ ಅದಿರು ಸಾಗಾಣಿಕೆ ಆರೋಪವಿದ್ದು ರಾಜ್ಯ ಸರ್ಕಾರಕ್ಕೆ 342 ಕೋಟಿ ರೂ ನಷ್ಟ ಸಂಭವಿಸಿದೆ ಎಂಬ ವರದಿಯಿದೆ. ಸಂಸ್ಥೆಯ ವಿರುದ್ದ ಸಮಾಜ ಪರಿವರ್ತನಾ ಸಮಾಜದ ಎಸ್ ಆರ್ ಹಿರೇಮಠ್ ಅವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದಾರೆ. ಈ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದರು. ಅಲ್ಲದೆ ಅಡ್ವೋಕೇಟ್ ಜನರಲ್ ಅವರು ಪೂರ್ಣ ಮಾಹಿತಿ ಪರಿಶೀಲನೆ ನಡೆಸದೆ ಜಿಂದಾಲ್ ಸಂಸ್ಥೆಗೆ ಭೂಮಿ ಮಾರಾಟ ಮಾಡಲು ಕಾನೂನು ಸಲಹೆ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಎಚ್ ಕೆ ಪಾಟೀಲ್ ನಿರಂತರ ಪತ್ರದಲ್ಲಿ ಆರೋಪಿಸಿದ್ದರು.
ಎಚ್ ಕೆ ಪಾಟೀಲ್ ಜಿಂದಾಲ್ ವಿರುದ್ದ ಪತ್ರ ಸಮರ ನಡೆಸಿದ ಬಳಿಕ ವಿಪಕ್ಷ ಬಿಜೆಪಿ ನಾಯಕರು ಭೂಮಿ ಪರಭಾರೆ ಸಂಪುಟ ನಿರ್ಣಯವನ್ನು ಕೈಬಿಡಬೇಕು. ಗುತ್ತಿಗೆ ಅವಧಿಯನ್ನು ಮುಂದುವರೆಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಅಲ್ಲದೆ ಬಿಜೆಪಿ ಸಂಸದರು, ಶಾಸಕರು ವಿಧಾನ ಪರಿಷತ್ ಸದಸ್ಯರು ಜೂನ್ 14 ರಿಂದ 16 ರವರಗೆ ಮೂರು ದಿನ ಅಹೋರಾತ್ರಿ ಧರಣಿಗೆ ನಿರ್ಧರಿಸಿದ್ದು, ಇದು ಮೈತ್ರಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ನಡುವೆ ಎಚ್ ಕೆ ಪಾಟೀಲರ ಮನವೊಲಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಂದಾನ ಸಭೆ ನಡೆಸಲಾಯಿತು. ಭೂಮಿ ಪರಭಾರೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ಬರಲಿದೆ ಎಂಬ ಕಾರಣಕ್ಕೆ ಮಾರಾಟ ಕೈಬಿಡುವ ಬಗ್ಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅಂತಿಮ ನಿರ್ಣಯ ಕೈಗೊಳ್ಳುವ ಬಗ್ಗೆ ಈ ನಾಯಕರ ನಡುವೆ ಸಹಮತ ಮೂಡಿಸಿದರು.
ಆದರೆ ಎಚ್ ಕೆ ಪಾಟೀಲ್ ಹಠ ಹಾಗೂ ಬಿಜೆಪಿ ಹೋರಾಟದ ಎಚ್ಚರಿಕೆಯಿಂದಾಗಿ ಸಚಿವ ಸಂಪುಟದಲ್ಲಿ ತೆಗೆದುಕೊಂಡ ಜಿಂದಾಲ್ ಸಂಸ್ಥೆಗೆ 3667 ಎಕರೆ ಜಮೀನು ಮಾರಾಟವನ್ನು ಕೈಬಿಡಲು ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ ತೀರ್ಮಾನಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಅವರ ಜೊತೆ ಇಂದು ಅಥವಾ ನಾಳೆ ಚರ್ಚಿಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಹಿಂಪಡೆಯಲಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಜಿಂದಾಲ್ ಸ್ಟೀಲ್ ಸಂಸ್ಥೆಗೆ ಭೂಮಿ ನೀಡಲು ಕುಮಾರಸ್ವಾಮಿ -ಯಡಿಯೂರಪ್ಪ ನೇತೃತ್ವದ ಮೈತ್ರಿ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿದ ಸರ್ಕಾರ ಭೂಮಿ ಪರಬಾರೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಸಚಿವ ಸಂಪುಟ ನಿರ್ಣಯ ಹಿಂಪಡೆಯುವ ಸಾಧ್ಯತೆ ಹೆಚ್ಚಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com