ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಡಿಯೋ ಮಾಡಿಟ್ಟು ಐಎಂಎ ಜ್ಯುವೆಲ್ಸ್ ಮಾಲೀಕ ನಾಪತ್ತೆ

ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪ್ರತಿಷ್ಠಿತ ಐಎಂಎ ಆಭರಣ ಮಳಿಗೆ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಅವರು ಆಡಿಯೋ ಮಾಡಿಟ್ಟು...
ಮೊಹಮ್ಮದ್ ಮನ್ಸೂರ್ ಖಾನ್
ಮೊಹಮ್ಮದ್ ಮನ್ಸೂರ್ ಖಾನ್
ಬೆಂಗಳೂರು: ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪ್ರತಿಷ್ಠಿತ ಐಎಂಎ ಆಭರಣ ಮಳಿಗೆ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಅವರು ಆಡಿಯೋ ಮಾಡಿಟ್ಟು ನಿಗೂಢವಾಗಿ ನಾಪತ್ತೆಯಾಗಿದ್ದು, ಆತಂಕಗೊಂಡ ಸಾವಿರಾರು ಹೂಡಿಕೆದಾರರು ಆಭರಣ ಮಳಿಗೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿರುವ ಮನ್ಸೂರ್ ಖಾನ್ ಕುಟುಂಬ ಸಮೇತ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದು, ಅಲ್ಲಿಂದಲೇ ಆಡಿಯೋವನ್ನು ನಗರ ಪೊಲೀಸ್ ಆಯುಕ್ತರಿಗೆ ಕಳುಹಿಸಿಕೊಟ್ಟಿದ್ದಾರೆ.
ಮೊಹಮ್ಮದ್ ಮನ್ಸೂರ್ ಖಾನ್ ಆಡಿಯೋ ವೈರಲ್ ಆಗುತ್ತಿದ್ದಂತೆ ಐಎಂಎ ಜ್ಯುವೆಲ್ಸ್ ನಲ್ಲಿ ಹೂಡಿಕೆ ಮಾಡಿದ್ದ ಸಾವಿರಾರು ಜನ ಮಳಿಗೆ ಎದುರು ಸೇರಿ ಪ್ರತಿಭಟನೆ ಮಾಡುತ್ತಿದ್ದಾರೆ.
ಆಡಿಯೋದಲ್ಲೇನಿದೆ…
ಆಡಿಯೋದಲ್ಲಿ ಮಾತನಾಡಿರುವ ಮನ್ಸೂರ್ ಖಾನ್ 'ಈ ಸಂದೇಶವನ್ನು ನೀವು ಕೇಳುವ ವೇಳೆಗೆ ನಾನು ನನ್ನ ಜೀವನವನ್ನು ಅಂತ್ಯಗೊಳಿಸಿರುತ್ತೇನೆ. 12-13 ವರ್ಷಗಳಲ್ಲಿ ನಾನು ಸಂಸ್ಥೆಯನ್ನು ಕಟ್ಟಲು ಬಹಳಷ್ಟು ಶ್ರಮ ಪಟ್ಟಿದ್ದೇನೆ. ಆದರೆ, ಅಧಿಕಾರಿಗಳು, ರಾಜಕಾರಣಿಗಳು, ಎಲ್ಲರಿಗೂ ಲಂಚ ನೀಡಿ, ನೀಡಿ ಸಾಕಾಗಿ ಹೋಗಿದೆ. ಶಿವಾಜಿನಗರದ ಶಾಸಕರಿಗೆ 400 ಕೋಟಿ ರೂ ನೀಡಿದ್ದೆ. ಆದರೆ ಅವರು ವಾಪಸ್ ನೀಡಿಲ್ಲ. ಅವರಿಂದ ನನಗೆ ವಂಚನೆಯಾಗಿದೆ. ನನಗೆ ಹಣ ವಾಪಸ್ ಮಾಡುವ ಬದಲು ರೌಡಿಗಳನ್ನ ನಮ್ಮ ಆಫೀಸ್ ಗೆ ಕಳುಹಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ನನ್ನ ಕುಟುಂಬಕ್ಕೆ ಪ್ರಾಣಾಪಾಯವಿದೆ. ಈ ಆಡಿಯೋ ನಿಮಗೆ ತಲುಪುವ ವರೆಗೆ ನಾನು ಇರುವುದಿಲ್ಲ. ನನ್ನ ಬಳಿ 500 ಕೋಟಿ ರೂ. ಆಸ್ತಿಯಿದೆ, ಚಿನ್ನ, ವಜ್ರ ಇದೆ. ಅದನ್ನು ಮಾರಿ ಸಂತ್ರಸ್ತ ಹೂಡಿಕೆದಾರರಿಗೆ ನೀಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಬಿಡಿಎ ಕುಮಾರ್ ಬಳಿ ನನ್ನ 5 ಕೋಟಿ ರೂ.ಇದೆ. ಶಿವಾಜಿ ನಗರದ ಶಾಸಕರ ಬಳಿ ಇರುವ ಹಣವನ್ನು ಜನರಿಗೆ ಹಂಚಿಕೆ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ' ಎಂದು ಪೊಲೀಸ್ ಆಯುಕ್ತರಿಗೆ ಬಂದಿರುವ ಆಡಿಯೋದಲ್ಲಿ ಮನವಿ ಮಾಡಲಾಗಿದೆ.
ಇನ್ನು ಮನ್ಸೂರ್ ಖಾನ್ ಗಾಗಿ ಪೊಲೀಸರು ಬಲೆ ಬೀಸಿದ್ದು ಇವರೆಗೆ ಮನ್ಸೂರ್ ಖಾನ್ ಎಲ್ಲಿದ್ದಾನೆ ಎಂದು ತಿಳಿದು ಬಂದಿಲ್ಲ. ಶಿವಾಜಿ ನಗರದಲ್ಲಿರುವ ಐಎಂಎ ಆಭರಣ ಮಳಿಗೆ ಸೇರಿದಂತೆ ಅವರ ಕಚೇರಿಗಳಿಗೆ ಬೀಗ ಜಡಿಯಲಾಗಿದೆ. ಆಡಿಯೋ ಸಂದೇಶದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನ ಐಎಂಎ ಕಚೇರಿ ಬಳಿ ಜಮಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com