ಐಎಂಎ ಮಾಲೀಕನ ಪತ್ತೆಗೆ ಮುಂದುವರಿದ ಪೊಲೀಸರ ಶೋಧ: ಐಎಂಎ ಮೊಬೈಲ್ ಆ್ಯಪ್ ಸ್ಥಗಿತ!

ಪ್ರತಿಷ್ಠಿತ ಐಎಂಎ ಜ್ಯುವೆಲ್ಲರ್ಸ್ ಮಾಲೀಕ ಮುಹಮ್ಮದ್ ಮನ್ಸೂರ್ ಖಾನ್ ನಾಪತ್ತೆ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಪೊಲೀಸರು, ಖಾನ್ ಅವರ ಪತ್ತೆಗೆ .,..
ಮುಹಮ್ಮದ್ ಮನ್ಸೂರ್ ಖಾನ್
ಮುಹಮ್ಮದ್ ಮನ್ಸೂರ್ ಖಾನ್
ಬೆಂಗಳೂರು: ಪ್ರತಿಷ್ಠಿತ ಐಎಂಎ ಜ್ಯುವೆಲ್ಲರ್ಸ್ ಮಾಲೀಕ ಮುಹಮ್ಮದ್ ಮನ್ಸೂರ್ ಖಾನ್ ನಾಪತ್ತೆ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಪೊಲೀಸರು, ಖಾನ್ ಅವರ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಮನ್ಸೂರ್ ಖಾನ್ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತರಿಗೆ ಕಳುಹಿಸಿದ್ದ ಧ್ವನಿ ಸುರುಳಿಯಲ್ಲಿ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರೊಬ್ಬರಿಗೆ 5 ಕೋಟಿ ರೂಪಾಯಿ ನೀಡಿದ್ದೇನೆ ಎಂದು ಹೇಳಿಲ್ಲ, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರುವಾದುದು. ಯಾವುದೇ ಮಾಧ್ಯಮದ ಮುಖ್ಯಸ್ಥರಿಗೆ ಅವರು ಹಣ ನೀಡಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಆದರೆ ಬಿಡಿಎ ಕುಮಾರ್ ಎಂಬುವವರಿಗೆ 5 ಕೋಟಿ ರೂಪಾಯಿ ನೀಡಿದ್ದೇನೆ ಎಂದು ಖಾನ್ ಧ್ವನಿಸುರುಳಿಯಲ್ಲಿ ಹೇಳಿರುವುದಾಗಿ ವರದಿಯಾಗಿದೆ.
ಶಿವಾಜಿನಗರ ಶಾಸಕ ರೋಷನ್ ಬೇಗ್ ತಮ್ಮ ಬಳಿಯಿಂದ 400 ಕೋಟಿ ರೂ. ಹಣ ಪಡೆದಿದ್ದರು. ಹಣ ವಾಪಸ್ ಕೇಳಿದಾಗ ರೌಡಿಗಳನ್ನು ಕಳುಹಿಸಿ ಹೆದರಿಸಿದ್ದಾರೆ. ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಇರುವುದರಿಂದ ಹಳ್ಳಿಯೊಂದರಲ್ಲಿ ಬಚ್ಚಿಟ್ಟುಕೊಳ್ಳಬೇಕಿದೆ. ಅಲ್ಲದೇ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಸ್ಲಿಂ ರಾಜಕಾರಣಿ ಹಾಗೂ ಅಧಿಕಾರಿಗಳಿಗೆ ಲಂಚ ಕೊಟ್ಟು ಸಾಕಾಗಿದೆ.
 ನನ್ನಿಂದ ಹಣ ಪಡೆಯಲು ಸುಳ್ಳು ಆರೋಪಗಳನ್ನು ಮಾಡಿ ಪಿಎಂ ಕಚೇರಿ ಮತ್ತು ಆರ್ ಬಿಐಗೂ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ನನ್ನ ಬಳಿ ಇರುವ 500 ಕೋಟಿ ರೂ.ಮೌಲ್ಯದ ಆಸ್ತಿ ಮಾರಿ, 30 ಸಾವಿರ ಕ್ಯಾರೆಟ್ ವಜ್ರ, ಚಿನ್ನಾಭರಣ ತಮ್ಮ ಕಸ್ಟಡಿಗೆ ಪಡೆದು ಹೂಡಿಕೆದಾರರಿಗೆ ಹಣ ವಾಪಸ್ ಮಾಡಿ ಎಂದು ಮುಹಮ್ಮದ್ ಮನ್ಸೂರ್ ಖಾನ್ ಅಜ್ಞಾನ ಸ್ಥಳದಿಂದ ಆಡಿಯೋ ಬಿಡುಗಡೆ ಮಾಡಿ ನಾಪತ್ತೆಯಾಗಿದ್ದಾರೆ. 
ಇಂದು ಕೂಡ ಐಎಂಎಯಲ್ಲಿ ಹೂಡಿಕೆ ಮಾಡಿರುವ ಸಾರ್ವಜನಿಕರು ಸಂಸ್ಥೆಯ ಕಚೇರಿಯ ಎದುರು ಜಮಾಯಿಸಿದ್ದರು. ಸಂತ್ರಸ್ತರ ದೂರುಗಳನ್ನು ದಾಖಲಿಸಲು ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ.
ಈ ಮಧ್ಯೆ, ಐಎಂಎ ಹೆಸರಲ್ಲಿದ್ದ ಮೊಬೈಲ್ ಆ್ಯಪ್ ಕೂಡ ಸ್ಥಗಿತಗೊಂಡಿದೆ. ಆ್ಯಪ್‌ನಲ್ಲಿ ಹೂಡಿಕೆ, ಬಡ್ಡಿ, ತಿಂಗಳ ರಿಟರ್ನ್ಸ್ ಮಾಹಿತಿ ಲಭ್ಯವಾಗುತ್ತಿತ್ತು. ಆದರೆ ಈಗ ಆ್ಯಪ್ ಸ್ಥಗಿತಗೊಂಡಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com