ಸರ್ಕಾರದ ಅಭದ್ರತೆ ಬಗ್ಗೆ ಚರ್ಚೆ ನಡೆಸಬೇಡಿ: ಅಧಿಕಾರಿಗಳಿಗೆ ಪರಮೇಶ್ವರ್ ಸೂಚನೆ

ರಾಜ್ಯ ಸರ್ಕಾರ ಅಭದ್ರವಾಗಿದೆ ಎಂದು ಅಧಿಕಾರಿಗಳು ತಮಾಷೆಯಾಗಿಯೂ ಸಹ ಚರ್ಚೆ ಮಾಡಬಾರದು. ಸರ್ಕಾರ ಭದ್ರವಾಗಿ ಇಟ್ಟುಕೊಳ್ಳುವ ಬಗ್ಗೆ ನಾವು...
ಜಿ ಪರಮೇಶ್ವರ್
ಜಿ ಪರಮೇಶ್ವರ್
ಬೆಂಗಳೂರು: ರಾಜ್ಯ ಸರ್ಕಾರ ಅಭದ್ರವಾಗಿದೆ ಎಂದು ಅಧಿಕಾರಿಗಳು ತಮಾಷೆಯಾಗಿಯೂ ಸಹ ಚರ್ಚೆ ಮಾಡಬಾರದು. ಸರ್ಕಾರ ಭದ್ರವಾಗಿ ಇಟ್ಟುಕೊಳ್ಳುವ ಬಗ್ಗೆ ನಾವು ನೋಡಿಕೊಳ್ಳುತ್ತೇವೆ. ಆ ವಿಷಯ ಅಧಿಕಾರಿಗಳಿಗೆ ಬೇಕಿಲ್ಲ. ಈ ಬಗ್ಗೆ ನೀವು ಚರ್ಚೆ ಮಾಡಿದರೆ ಸುಲಲಿತ ಆಡಳಿತ ನೀಡಲು ಸಾಧ್ಯವಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಮುಖ್ಯಮಂತ್ರಿಗಳು ಕರೆದಿದ್ದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮೇಳನ ಸಭೆಯಲ್ಲಿ ಡಿಸಿಎಂ ಮಾತನಾಡಿದರು.
ಸರ್ಕಾರ ಸುಭದ್ರವಾಗಿಲ್ಲ ಎಂದು ಅಧಿಕಾರಿಗಳು ಚರ್ಚೆ ಮಾಡುತ್ತಿರುವ ಬಗ್ಗೆ ಗಮನಿಸಿದ್ದೇನೆ. ಈ ಬೆಳವಣಿಗೆ ಸರಿಯಲ್ಲ. ಈ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಳ್ಳದೇ ಕೆಲಸ ಮಾಡುವಂತೆ ಸೂಚನೆ ನೀಡಿದರು.
ರಾಜ್ಯದಲ್ಲಿ ಶೇ.90 ರಷ್ಟು ಜನ ಬಿಪಿಎಲ್‌ಪಡಿತರ ಚೀಟಿ ಹೊಂದಿದ್ದಾರೆ. ಅಭಿವೃದ್ಧಿಶೀಲ ರಾಜ್ಯವಾದ ಕರ್ನಾಟಕದಲ್ಲಿ ಇಷ್ಟು ಪ್ರಮಾಣದ ಬಡವರು ಇದ್ದಾರಾ? ಐಟಿಬಿಟಿ ಸಿಟಿ ಎಂದೇ ನಮ್ಮ ರಾಜ್ಯ ಖ್ಯಾತಿ ಹೊಂದುತ್ತಿದೆ. ಹೀಗಿರುವಾಗ ಇಷ್ಟು ಪ್ರಮಾಣದ ಬಡವರು ಇರಲು ಹೇಗೆ ಸಾಧ್ಯ? ಇಲಾಖೆ ಯಾವ ಮಾನದಂಡದಲ್ಲಿ ಬಿಪಿಎಲ್‌ ಕಾರ್ಡ್‌ ವಿತರಿಸುತ್ತಿದೆ ಎಂದು ಪ್ರಶ್ನಿಸಿದರು.
ಬಿಪಿಎಲ್‌ ಕಾರ್ಡ್‌ ನೀಡುವ ಮಾನದಂಡ ಹಾಗೂ ಕಾರ್ಡ್‌ ವಿತರಣೆ ಬಗ್ಗೆ ಮರುಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರಕಾರ ರೈತರ ನೆರವಿಗೆ ಧಾವಿಸಿ ಸಾಲಮನ್ನಾ ಮಾಡಿದೆ. ಈ ಫಲ ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದಿದೆ. ನೀವು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ಮಾತ್ರ ಸರ್ಕಾರದ ಈ ಕ್ರಮ ರೈತರಿಗೆ ಮುಟ್ಟಲು ಸಾಧ್ಯ. ಅದೇ ರೀತಿ ಮನೆ ನೀರ್ಮಾಣ, ಗಂಗಾಕಲ್ಯಾಣ ಯೋಜನೆ ಸೇರಿದಂತೆ ಆದ್ಯತಾ ಯೋಜನೆಗಳು ಶೀಘ್ರವಾಗಿ ಜನರಿಗೆ ತಲುಪುವ ವ್ಯವಸ್ಥೆ ಆಗಬೇಕು ಎಂದರು.
ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com