ಐಎಂಎ ವಂಚನೆ ಪ್ರಕರಣ: ಡಿಐಜಿಪಿ ಬಿ.ಆರ್. ರವಿಕಾಂತೇಗೌಡ ನೇತೃತ್ವದಲ್ಲಿ ಎಸ್‍ಐಟಿ ತಂಡ ರಚನೆ

ಐಎಂಎ ಜ್ಯುವೆಲ್ಸ್ ಬಹುಕೋಟಿ ವಂಚನೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಡಿಐಜಿ ಬಿ ಆರ್ ರವಿಕಾಂತೇಗೌಡ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು...
ರವಿಕಾಂತೇಗೌಡ
ರವಿಕಾಂತೇಗೌಡ
ಬೆಂಗಳೂರು: ರಾಜ್ಯವಲ್ಲದೇ ಇಡೀ ದೇಶದ ಗಮನ ಸೆಳೆದಿರುವ ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಎಸ್ಐಟಿ ವಹಿಸಿರುವ ಸರ್ಕಾರ, ಅಗ್ನಿಶಾಮಕ ದಳದ ಡಿಐಜಿಪಿ ಬಿ.ಆರ್.ರವಿಕಾಂತೇಗೌಡ ನೇತೃತ್ವದಲ್ಲಿ ಎಸ್‍ಐಟಿ ತಂಡ ರಚಿಸಿದೆ. ಆದರೆ ಎಷ್ಟು ದಿನಗಳಲ್ಲಿ ವರದಿ ನೀಡಬೇಕೆಂಬುದನ್ನೂ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿಲ್ಲ.

ಬುಧವಾರ 10 ಅಧಿಕಾರಿಗಳ ತಂಡ ರಚಿಸಲಾಗಿದ್ದು, ತಂಡದಲ್ಲಿ ಬೆಂಗಳೂರು ನಗರ ಅಪರಾಧ ವಿಭಾಗದ ಪೊಲೀಸ್ ಉಪ ಆಯುಕ್ತ ಎಸ್.ಗಿರೀಶ್, ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಬಾಲರಾಜು, ಸಿಐಡಿ ಡಿವೈಎಸ್‍ಪಿ ಕೆ.ರವಿಶಂಕರ್, ರಾಜ್ಯ ಗುಪ್ತಚರ ದಳ ಡಿವೈಎಸ್‍ಪಿ ರಾಜ ಇಮಾಮ್ ಖಾಸಿಂ, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಎಸ್‍ಐಟಿ ದಳದ ಡಿವೈಎಸ್‍ಪಿ ಅಬ್ದುಲ್ ಖಾದರ್, ಕರ್ನಾಟಕ ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಸಿ.ಆರ್.ಗೀತಾ, ಬಿಡಿಎ ಪೊಲೀಸ್ ಇನ್ಸ್ ಪೆಕ್ಟರ್ ಎಲ್.ವೈ.ರಾಜೇಶ್, ಬೆಂಗಳೂರು ನಗರ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಅಂಜನ್ ಕುಮಾರ್, ಬೆಂಗಳೂರು ಎಸ್‍ಸಿಆರ್ ಬಿ ಪೊಲೀಸ್ ಇನ್ಸ್ ಪೆಕ್ಟರ್ ಎನ್.ತನ್ವೀರ್ ಅಹ್ಮದ್, ಬೆಂಗಳೂರು ನಗರ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಕೆ.ಶೇಖರ್ ಇದ್ದಾರೆ.

ವಂಚನೆ ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆಯನ್ನು ಎಸ್‌ಐಟಿ ನಡೆಸಲಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಐಎಂಎ ಗುಂಪಿನ ವಂಚನೆ ಸಂಬಂಧ ಇದುವರೆಗೂ ಸುಮಾರು 8 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಈ ಎಲ್ಲವನ್ನೂ ಎಸ್‌ಐಟಿ ತನಿಖೆ ನಡೆಸಲಿದೆ.

ರವಿಕಾಂತೇಗೌಡ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ಅವರಿಗೆ ಅಪರಾಧ ವಿಭಾಗದ ಎಡಿಜಿಪಿ ಹಾಗೂ ತಾಂತ್ರಿಕ ವಿಭಾಗದ ಮುಖ್ಯಸ್ಥರು ಎಲ್ಲಾ ರೀತಿಯ ಸಹಕಾರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಐಎಂಎ ವಂಚನೆ ಪ್ರಕರಣದ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ನದ್ದು ಎನ್ನಲಾದ ಧ್ವನಿಸುರುಳಿ ನೈಜತೆ ಅರಿಯಲು ಇದುವರೆಗೂ ಧ್ವನಿಸುರುಳಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಅಥವಾ ಈ ಬಗ್ಗೆ ತನಿಖೆ ಕೈಗೊಂಡ ಬಗ್ಗೆ ಗೃಹಸಚಿವರಿಂದಾಗಲೀ ಸರ್ಕಾರದಿಂದಾಗಲೀ ಇನ್ನೂ ಸ್ಪಷ್ಟನೆ ಹೊರಬಿದ್ದಿಲ್ಲ. ಅಲ್ಲದೇ ಮನ್ಸೂರ್ ದುಬೈಗೆ ಪರಾರಿಯಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ಹೂಡಿಕೆ ವಂಚನೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಗೃಹ ಸಚಿವ ಎಂ.ಬಿ.ಪಾಟೀಲ್ ಪೊಲೀಸ್ ಹಾಗೂ ಅಪರಾಧ ವಿಭಾಗಗಳ ಪೊಲೀಸ್ ಮುಖ್ಯಸ್ಥರೊಂದಿಗೆ ಮಂಗಳವಾರ ಸರಣಿ ಸಭೆ ನಡೆಸಿದ್ದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಕರಣವನ್ನು ಎಸ್‍ಐಟಿಗೆ ವಹಿಸುವಂತೆ ಸೂಚಿಸಿದ್ದರು.

ತಮಿಳುನಾಡಿನ ಪೊಲೀಸ್ ಇಲಾಖೆಗೆ ವಂಚನೆ ಪ್ರಕರಣದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರವಿರುವಂತೆ ರಾಜ್ಯದ ಪೊಲೀಸ್ ಇಲಾಖೆಗೂ ಅಧಿಕಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಗೃಹಸಚಿವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆ ಕಾನೂನು ತಿದ್ದುಪಡಿ ಮಾಡುವ ಸಂಬಂಧ ಚರ್ಚಿಸಿದ್ದರು.

ಹಣಕಾಸು ಹೂಡಿಕೆ ಮಾಡುವ ಕಂಪೆನಿಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಸಂಬಂಧಪಟ್ಟ ಕಂದಾಯ, ಬಿಬಿಎಂಪಿ, ಸಹಕಾರ, ನೋಂದಣಿ ಇಲಾಖೆ, ಆರ್ ಬಿಐ ಸೇರಿದಂತೆ ಬಹು ಇಲಾಖೆಗಳ ಒಪ್ಪಿಗೆ ಪಡೆದು ಈ ಸಮಿತಿ ರಚಿಸಲು ತೀರ್ಮಾನಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com