ಚಾಮರಾಜನಗರ: ದೇವಸ್ಥಾನದಲ್ಲಿ ದಲಿತ ವ್ಯಕ್ತಿ ಮೆರವಣಿಗೆ, ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಮಾಡಲು ಸಿಎಂ ಸೂಚನೆ

ದೇವರ ಮೂರ್ತಿಯನ್ನು ನಾಶಪಡಿಸಲು ಹೊರಟಿದ್ದ ಎಂಬ ಆರೋಪದ ಮೇಲೆ...
ದೇವಸ್ಥಾನದ ಅರ್ಚಕ ಚಂದ್ರಪ್ಪ
ದೇವಸ್ಥಾನದ ಅರ್ಚಕ ಚಂದ್ರಪ್ಪ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲು ಪೇಟೆ ತಾಲೂಕಿನಲ್ಲಿ ದಲಿತ ವ್ಯಕ್ತಿಯನ್ನು ಥಳಿಸಿ ಅರೆಬೆತ್ತಲೆ ಮಾಡಿ ಮೆರವಣಿಗೆ ಮಾಡಿದ ವ್ಯಕ್ತಿಗಳ ವಿರುದ್ಧ ಕೂಡಲೇ ಕ್ರಮ  ಜರುಗಿಸಬೇಕು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. 

ಈ ಘಟನೆ ಕುರಿತು ಟ್ವೀಟ್ ಮಾಡಿರುವ ಅವರು, ಇದು ನಿಜಕ್ಕೂ ಮನಕಲಕುವ ಮತ್ತು ಅಮಾನವೀಯ ಘಟನೆ ಎಂಬುದರಲ್ಲಿ  ಬೇರೆ ಮಾತೇ ಇಲ್ಲ, ಇದಕ್ಕೆ ಕಾರಣರಾದವರು ಎಷ್ಟೇ ದೊಡ್ಡವರಿರಲಿ, ಅವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾರೆ. 

ಈ ಘಟನೆಗೆ ಸಂಬಂಧಪಟ್ಟಂತೆ  ಚಾಮರಾಜನಗರ ಜಿಲ್ಲಾ ಪೊಲೀಸರು ದೇವಸ್ಥಾನದ ಅರ್ಚಕ ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ.  

ದೇವಾಲಯಗಳ ವಿಗ್ರಹಗಳನ್ನು ಹಾನಿ ಮಾಡಿದ್ದಾನೆ ಎಂಬ ಕಾರಣದಿಂದ ದಲಿತ ಯುವಕ  ಪ್ರತಾಪ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ನಂತರ ಆತನನ್ನು ಅರೆಬೆತ್ತಲೆ ಮಾಡಿ ಮರವಣಿಗೆ  ಮಾಡಿರುವುದಕ್ಕೆ ನಾಡಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಶನೀಶ್ವರ ದೇವಸ್ಥಾನದ ಅರ್ಚಕ ಚಂದ್ರಪ್ಪ, ಆತ ದೇವಸ್ಥಾನ ಹತ್ತಿರ ಬಂದಾಗ ನಾನು ನೀರು ಕೊಟ್ಟೆ. ಆತ ದೇವಸ್ಥಾನದೊಳಗೆ ಬರಲು ಕೇಳಿದ್ದ. ಆತನನ್ನು ಬರಲು ಹೇಳಿದಾಗ ಹಠಾತ್ತಾಗಿ ನನ್ನ ಅಂಗಿ ಕಾಲರ್ ಹಿಡಿದು ಬಾಯಿಗೆ ಬಂದಂತೆ ನಿಂದಿಸಲು ಆರಂಭಿಸಿದ. ಆತ ದೇವಸ್ಥಾನಕ್ಕೆ ಬರುವಾಗಲೇ ಮೈ ಮೇಲೆ ಬಟ್ಟೆ ಇರಲಿಲ್ಲ. ಆತನಿಗೆ ನಾವು ಲುಂಗಿ ಕೊಟ್ಟೆವು. ಆತ ಮಾನಸಿಕವಾಗಿ ಸ್ಥಿಮಿತ ಹೊಂದಿಲ್ಲ ಎಂದು ಅನಿಸುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com