ಐಎಂಎ ವಂಚನೆ: ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ರೋಷನ್ ಬೇಗ್ ಒತ್ತಾಯ

ಅಮಾಯಕರಿಂದ ಹಣ ಸಂಗ್ರಹಿಸಿ ವಂಚನೆ ಎಸಗಿರುವ ಐಎಂಎ ಕಂಪೆನಿ ಅಕ್ರಮಗಳ ಬಗ್ಗೆ ಎಸ್ಐಟಿ ತನಿಖೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿರುವ ಮಾಜಿ...

Published: 12th June 2019 12:00 PM  |   Last Updated: 12th June 2019 06:31 AM   |  A+A-


Roshan Baig

ರೋಷನ್ ಬೇಗ್

Posted By : RHN RHN
Source : UNI
ಬೆಂಗಳೂರು: ಅಮಾಯಕರಿಂದ ಹಣ ಸಂಗ್ರಹಿಸಿ ವಂಚನೆ ಎಸಗಿರುವ ಐಎಂಎ ಕಂಪೆನಿ ಅಕ್ರಮಗಳ ಬಗ್ಗೆ ಎಸ್ಐಟಿ ತನಿಖೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿರುವ ಮಾಜಿ ಸಚಿವ ಹಾಗೂ ಅಕ್ರಮದಲ್ಲಿ ಹೆಸರು ಕೇಳಿ ಬಂದಿರುವ ರೋಷನ್ ಬೇಗ್, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಸಂಗತಿ ಬೆಳಕಿಗೆ ಬರಲಿದೆ. ಉಳಿದ ತನಿಖೆಗಳು ನೆಪ ಮಾತ್ರ. ಸಿಬಿಐ ಗೆ ಪ್ರಕರಣ ವಹಿಸಿದರೆ ರೆಡ್ ಅಲರ್ಟ್ ಜಾರಿಗೊಳಿಸಿ ಇಂಟರ್ ಪೋಲ್ ಗೆ ಮಾಹಿತಿ ನೀಡುತ್ತಾರೆ. ವಿದೇಶಗಳಿಗೆ ಪರಾರಿಯಾಗಿದ್ದರೆ ತ್ವರಿತವಾಗಿ ಪತ್ತೆ ಮಾಡಲು ಸಾಧ್ಯವಾಗುತ್ತದೆ. ಇದೊಂದು ಬಹುದೊಡ್ಡ ಹಗರಣವಾಗಿರುವುದರಿಂದ ಸಿಬಿಐ ತನಿಖೆಗೆ ಒಪ್ಪಿಸುವುದು ಸೂಕ್ತ ಎಂದರು. 

ಆರೋಪಿ ಮನ್ಸೂರ್ ಖಾನ್ ಒಂದು ಸಾವಿರ ಕೋಟಿ ರೂ ಹಣವನ್ನು ತನ್ನ ಸ್ವಂತ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಹೀಗಾಗಿ ತಕ್ಷಣ ಆತನ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಚಾಣಾಕ್ಷ ಕ್ರಮಗಳ ಮೂಲಕ ಮಾತ್ರ ಆತನ ಮೇಲೆ ನಿಯಂತ್ರಣ ಹೇರಲು ಸಾಧ್ಯ ಎಂದರು. 

ಆದಷ್ಟು ಬೇಗ ಹೂಡಿಕೆದಾರರಿಗೆ ಹಣ ವಾಪಸ್ ಮಾಡಬೇಕು ಎನ್ನುವ ಬದ್ಧತೆ ಸರ್ಕಾರಕ್ಕೆ ಇದ್ದರೆ ಮನ್ಸೂರ್ ತಲೆಮರೆಸಿಕೊಳ್ಳುವ ಮುನ್ನಾ ದಿನಗಳಲ್ಲಿ ಅದರಲ್ಲೂ ಪ್ರಮುಖವಾಗಿ 48 ಗಂಟೆಗಳ ಸಮಯದಲ್ಲಿ ಯಾರೊಂದಿಗೆ ಸಂಪರ್ಕದಲ್ಲಿದ್ದರು. ಯಾರಿಗೆ ದೂರವಾಣಿ ಕರೆ ಮಾಡಿದ್ದರು. ವಾಟ್ಸ್ ಅಪ್ ನಲ್ಲಿ ಅವರಿಗೆ ಬಂದಿರುವ, ಹೊರ ಹೋಗಿರುವ ಸಂದೇಶಗಳನ್ನು ತಪಾಸಣೆ ಮಾಡಿದರೆ ಯಾರು ತಪ್ಪಿತಸ್ಥರು. ಯಾರು ಆತನೊಂದಿಗೆ ಶಾಮೀಲಾಗಿದ್ದಾರೆ ಎನ್ನುವುದು ತಿಳಿಯಲಿದೆ ಎಂದರು. 

ತಾವಾಗಲೀ, ತಮ್ಮ ಸಹೋದರರು, ಪಾಲಿಕೆ ಸದಸ್ಯರು, ನನ್ನ ಬೆಂಬಲಿಗರು ಹಣ ಪಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ. ತಾವೇನು ಮನ್ಸೂರ್ ಅವರಿಂದ ಐದು ಕೋಟಿ, ಎರಡು ಕೋಟಿ, ಹೀಗೆ ಕೋಟಿಗಟ್ಟಲೆ ಹಣ ಪಡೆದಿಲ್ಲ. ಪಡೆದಿರುವ ಬಗ್ಗೆ ಲಿಖಿತ ದಾಖಲೆಗಳಿದ್ದರೆ ತೋರಿಸಲಿ ಎಂದ ಪರೋಕ್ಷವಾಗಿ ಜಮೀರ್ ಅಹಮದ್ ಖಾನ್ ಅವರನ್ನು ಕುಟುಕಿದ ರೋಷನ್ ಬೇಗ್, ಆದರೆ ತಕ್ಷಣ ಜಮೀರ್ ನನಗೆ ಕಿರಿಯ ಸಹೋದರನಂತೆ. ಅವರ ಮೇಲೆ ತಮಗೆ ಅಪನಂಬಿಕೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. 

ತಾವೂ ಕೂಡ ಪತ್ರಕರ್ತ ಎಂದ ರೋಷನ್ ಬೇಗ್, ಕಳೆದ 20 ವರ್ಷಗಳಿಂದ ಸಿಯಾಸತ್ ಉರ್ದು ದಿನಪತ್ರಿಕೆ ನಡೆಸುತ್ತಿದ್ದೇನೆ. ಆದರೆ ಮಾಧ್ಯಮದವರು ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ. ದಯಮಾಡಿ ಅಪ ಪ್ರಚಾರ ಮಾಡಬೇಡಿ. ನನಗೂ ಕುಟುಂಬವಿದೆ. ಬಂಧು ಬಳಗವಿದೆ ಎಂದರು. 

ಖಾಸಗಿ ವಿಮಾನದಿಂದ ಬೆಂಗಳೂರಿನಿಂದ ಯಾರು ಎಲ್ಲೆಲ್ಲಿ ಹೋಗಿದ್ದಾರೆ ಎಂಬುದನ್ನು ಪತ್ತೆ ಮಾಡಿದರೆ ಎಲ್ಲವೂ ತಿಳಿಯಲಿದೆ ಎಂದು ಬೇಗ್ ಮಾರ್ಮಿಕವಾಗಿ ಹೇಳಿದರು. 

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಂಪೆನಿಗಳು ಅಮಾಯಕರಿಂದ ಹಣ ವಸೂಲಿ ಮಾಡಿ ವಂಚಿಸುತ್ತಿವೆ. ಐಎಂಎ ಜತೆಗೆ ಕ್ಯಾಪಿಟಲ್, ಅಲಾ, ಅಜ್ಮೇರಾ, ಅನಿಬೆಂಟ್ ನಂತಹ ಸಂಸ್ಥೆಗಳು ಜನರನ್ನು ಸುಲಿಗೆ ಮಾಡುತ್ತಿವೆ. ಇಂತಹ ಸಂಸ್ಥೆಗಳನ್ನು ಹತ್ತಿಕ್ಕಿ ಜನ ಸಾಮಾನ್ಯರನ್ನು ಉಳಿಸುವಂತಾಗಬೇಕು ಎಂದರು.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp