2000 ಕೋಟಿ ರೂ. ಮೊತ್ತದ ಐಎಂಎ ಜ್ಯುವೆಲ್ಸ್ ಹಗರಣದ ರೂವಾರಿ ಮೊಹಮ್ಮದ್ ಮನ್ಸೂರ್ ಖಾನ್ ಯಾರು?

ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಭಾರತದ ಗಮನ ಸೆಳೆಯುವ ಮತ್ತೊಂದು ಹೂಡಿಕೆ ವಂಚನೆ ಪ್ರಕರಣ ಸದ್ದು ಮಾಡುತ್ತಿದ್ದು, ಅದು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಲ್ಲಿರುವ ...
ಐಎಂಎ ಜ್ಯುವೆಲ್ಸ್ ಮಾಲಿಕ ಮೊಹಮ್ಮದ್ ಮನ್ಸೂರ್ ಖಾನ್
ಐಎಂಎ ಜ್ಯುವೆಲ್ಸ್ ಮಾಲಿಕ ಮೊಹಮ್ಮದ್ ಮನ್ಸೂರ್ ಖಾನ್
ಬೆಂಗಳೂರು: ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಭಾರತದ ಗಮನ ಸೆಳೆಯುವ ಮತ್ತೊಂದು ಹೂಡಿಕೆ ವಂಚನೆ ಪ್ರಕರಣ ಸದ್ದು ಮಾಡುತ್ತಿದ್ದು, ಅದು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಲ್ಲಿರುವ ಐ ಮಾನಿಟರಿ ಅಡ್ವೈಸರ್ (ಐಎಂಎ) ಜ್ಯುವೆಲ್ಸ್ ವಂಚನೆ. ಸಾವಿರಾರು ಮಂದಿ ಲಕ್ಷಾಂತರ ರೂಪಾಯಿಗಳನ್ನು ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದು ಅದರ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಇದ್ದಕ್ಕಿದ್ದಂತೆ ತಲೆಮರೆಸಿಕೊಂಡಿದ್ದಾನೆ.
ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಐಎಂಎ ಸಂಸ್ಥೆ ಸ್ಥಾಪಕ ಮೊಹಮ್ಮದ್ ಮನ್ಸೂರ್ ಖಾನ್ ಆಡಿಯೋ ಮಾಡಿಟ್ಟು ನಿಗೂಢವಾಗಿ ನಾಪತ್ತೆಯಾಗಿದ್ದು, ಆತಂಕಗೊಂಡ ಸಾವಿರಾರು ಹೂಡಿಕೆದಾರರು ಆಭರಣ ಮಳಿಗೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಡೀ ರಾಜ್ಯಾದ್ಯಂತ ಸುದ್ದಿಯಾಗಿರುವ ಐಎಂಎ ವಂಚನೆ ಬಳಿಕ ಈ ಮೊಹಮ್ಮದ್ ಮನ್ಸೂರ್ ಖಾನ್ ಯಾರು, ಆತ ಎಲ್ಲಿಂದ ಬಂದವನು, ಅವನ ಹಿನ್ನಲೆಯೇನು ಎಂಬ ಕುತೂಹಲ ಮನೆಮಾಡಿದೆ.
ಯಾರೀತ: ಮೊಹಮ್ಮದ್ ಮನ್ಸೂರ್ ಖಾನ್ ನ ಪೂರ್ವಾಪರ ತಿಳಿದುಕೊಂಡಾಗ ಹಲವು ಅಂಶಗಳು ತಿಳಿದುಬಂದಿದೆ. ಈತ ಐಎಂಎ ಜ್ಯುವೆಲ್ಸ್ ಸಂಸ್ಥೆಯನ್ನು ಆರಂಭಿಸಿದ್ದು 2016ರಲ್ಲಿ, ಖಾನ್ ಅದರ ಪ್ರವರ್ತಕ ಮತ್ತು ಎಂ ಡಿ. ಈತನಿಗೆ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಾದ ಜಯನಗರ,  ರಿಚ್ ಮಂಡ್ ಟೌನ್ ಗಳಲ್ಲಿ ಸ್ವಂತ ಮನೆಗಳಿವೆ. ಕಳೆದ ವರ್ಷ ಜಯನಗರದಲ್ಲಿ ಇನ್ನೊಂದು ಜ್ಯುವೆಲ್ಲರಿ ಮಳಿಗೆಯನ್ನು ಆರಂಭಿಸಿದ್ದ.
ಇದರ ಅಂಗ ಸಂಸ್ಥೆ ಐಎಂಎ ಅಡ್ವೈಸರಿ ಪ್ರೈವೇಟ್ ಲಿಮಿಟೆಡ್ 13 ವರ್ಷಗಳ ಹಿಂದೆ ಆರಂಭವಾದ ಕಂಪೆನಿ ಎಂದು ಅದರ ವೆಬ್ ಸೈಟ್ ನಲ್ಲಿ ನಮೂದಿಸಲಾಗಿದೆ. ಮನ್ಸೂರ್ ಖಾನ್ ಹೇಳುವ ಪ್ರಕಾರ ಬೆಂಗಳೂರಿನಲ್ಲಿ ಐಎಂಎ ಗ್ರೂಪ್ ಸುಮಾರು 1,050 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದೆ. ಸುಮಾರು 8 ಸಾವಿರ ಗ್ರಾಹಕರು ಸಂಸ್ಥೆಯಡಿ ಇದ್ದಾರೆ.
ನಾಸಿರ್ ಹುಸೇನ್, ನವೀದ್ ಅಹ್ಮದ್ ನಟ್ಟಮ್ ಕರ್, ನಿಜಾಮುದ್ದೀನ್ ಅಜೀಮುದ್ದೀನ್, ಅಫ್ಶಾನ್ ತಬಸ್ಸುಮ್, ಅಫ್ಸರ್ ಪಾಶಾ ಮತ್ತು ಅರ್ಶದ್ ಖಾನ್ ಎಂಬುವವರು ಸಂಸ್ಥೆಯ ಮಂಡಳಿ ನಿರ್ದೇಶಕರಾಗಿದ್ದಾರೆ.ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದವರಿಗೆ ಕೆಲವು ಸಮಯ ಬಡ್ಡಿ ಸಮೇತ ಹಣ ವಾಪಸ್ಸು ನೀಡಲಾಗುತ್ತಿತ್ತು. ಆದರೆ ಕೆಲ ತಿಂಗಳ ಹಿಂದೆ ಅದು ನಿಂತಿದೆ.
ವಹಿವಾಟು ವಿಸ್ತಾರ: ಮೊಹಮ್ಮದ್ ಮನ್ಸೂರ್ ಖಾನ್ ಕೇವಲ ಜ್ಯುವೆಲ್ಲರಿ ಮಳಿಗೆಗಳನ್ನು ಹೊಂದಿದ್ದು ಮಾತ್ರವಲ್ಲದೆ, ಚಿನ್ನದ ಗಟ್ಟಿ ವ್ಯಾಪಾರ, ಔಷಧ ಮಳಿಗೆ, ಹಲವು ಸೂಪರ್ ಮಾರ್ಕೆಟ್ ಗಳ ವ್ಯಾಪಾರವನ್ನು ಹೊಂದಿದ್ದಾನೆ. ನಂದಿದುರ್ಗ ರಸ್ತೆಯಲ್ಲಿ ಸದ್ಯದಲ್ಲಿಯೇ ಮತ್ತೊಂದು ಬೃಹತ್ ಮಳಿಗೆ ತೆರೆಯುವ ಉದ್ದೇಶ ಹೊಂದಿದ್ದ. 
ಹೆಲ್ತ್ ಕೇರ್ ಸರ್ವಿಸ್, ಹೈಪರ್ ಮಾರ್ಕೆಟ್, ಮೂಲಭೂತ ಸೌಕರ್ಯ ಮತ್ತು ರಿಯಲ್ ಎಸ್ಟೇಟ್ ಉದ್ಯಮ, ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್, ಚಿನ್ನ, ಬೆಳ್ಳಿ, ವಜ್ರ, ಪ್ಲಾಟಿನಂ ಆಭರಣಗಳ ಚಿಲ್ಲರೆ ಉದ್ಯಮಗಳಲ್ಲಿ ತೊಡಗಿಸಿಕೊಳ್ಳುವ ಇರಾದೆ ಕೂಡ ಅವನಿಗಿತ್ತು.
ಐಎಂಎ ವೆಬ್ ಸೈಟ್ ನಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ ಪೂರ್ವ ಪ್ರಾಥಮಿಕದಿಂದ ಹೈಸ್ಕೂಲ್ ವರೆಗಿನ ಶಿಕ್ಷಣ ಸಂಸ್ಥೆಯನ್ನು ಮನ್ಸೂರ್ ನಡೆಸುತ್ತಿದ್ದಾನೆ. ಮನ್ಸೂರ್ ಖಾನ್ 2017ರಲ್ಲಿ ಸರ್ಕಾರಿ ವಿಕೆ ಒಬೈದುಲ್ಲಾ ಶಾಲೆಯನ್ನು ದತ್ತು ಪಡೆದು ಅದರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದ. ಈ ಶಾಲೆಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು.
ಇನ್ನು ಐಎಂ ಡಿಜಿಟಲ್, ಐಎಂ ಟ್ರೆಂಡ್, ಐಎಂ ಎಂಟರ್ಟೈನ್ ಮೆಂಟ್, ಐಎಂ ಜಯೀ, ಐಎಂಎಐಪಿ ಬುಲ್ಲಿಯನ್ ಅಂಡ್ ಟ್ರೇಡಿಂಗ್, ಎಂಎಂಕೆ ಇನ್ಸ್ ಟಿಟ್ಯೂಟ್ ಆಫ್ ಎಜುಕೇಶನ್, ಐಎಂಎಡಬ್ಲ್ಯು ಜ್ಯುವೆಲ್ಲರಿ, ಐಎಂಎ ಮಹಿಳಾ ಸಶಕ್ತೀಕರಣ ಉದ್ಯಮ ಮೊದಲಾದವುಗಳಲ್ಲಿ ಮನ್ಸೂರ್ ಖಾನ್ ನ ಸಹ ಮಾಲೀಕತ್ವವಿದೆ.
ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಗಳಿಸಿರುವ ಮನ್ಸೂರ್ ಖಾನ್ ಚೆನ್ನೈಯ ಮಿಯಾಸಿ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೆಜ್ ಮೆಂಟ್ ನಲ್ಲಿ ಕೂಡ ಶಿಕ್ಷಣ ಗಳಿಸಿದ್ದಾನೆ.
ಮನ್ಸೂರ್ ಗೆ ಬೆಂಗಳೂರಿನಲ್ಲಿರುವ ಮುಸ್ಲಿಂ ತತ್ವಜ್ಞಾನಿಗಳು, ಮೌಲ್ವಿಗಳ ಪರಿಚಯವಿದೆ, ಮುಫ್ತಿ ಮೊಹಮ್ಮದ್ ಶೋಯೆಬುಲ್ಲಾ ಖಾನ್ ಮಿಫ್ತಾಹಿ ಉರ್ದುವಿನಲ್ಲಿ ಬರೆದ ಪುಸ್ತಕದಲ್ಲಿ ಐಎಂಎ ಜ್ಯುವೆಲ್ಸ್ ಬಗ್ಗೆ ಪ್ರಸ್ತಾಪಿಸಿದ್ದಾನೆ.
ಇಲ್ಲಿ ಇನ್ನೊಂದು ಆಸಕ್ತಿಕರ ವಿಷಯವೆಂದರೆ ಮನ್ಸೂರ್ ತನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಿದವರನ್ನು ಪಾರ್ಟ್ನರ್ಸ್ ಎಂದು ಸಂಬೋಧಿಸುತ್ತಾನೆ. ಐಎಂಎ ವೆಬ್ ಸೈಟ್ ನಲ್ಲಿ ಕಂಪೆನಿಯಲ್ಲಿ ಸುಮಾರು 3,500 ಪಾರ್ಟ್ನರ್ ಗಳಿದ್ದಾರೆ ಎಂದು ನಮೂದಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com