ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎ.ಟಿ. ರಾಮಸ್ವಾಮಿ ರಾಜೀನಾಮೆ

ವಿಧಾನಸಭೆ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ಹಿರಿಯ ಶಾಸಕ...
ಎ ಟಿ ರಾಮಸ್ವಾಮಿ
ಎ ಟಿ ರಾಮಸ್ವಾಮಿ
ಬೆಂಗಳೂರು: ವಿಧಾನಮಂಡಲ ಕಲಾಪದಲ್ಲಿ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಲು ವಿಫಲವಾದ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮದ ವಿರುದ್ಧ ಅಸಮಾಧಾನಗೊಂಡು ವಿಧಾನಸಭೆ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ಹಿರಿಯ ಶಾಸಕ ಎ.ಟಿ. ರಾಮಸ್ವಾಮಿ ರಾಜೀನಾಮೆ ಸಲ್ಲಿಸಿದ್ದಾರೆ.
ಅವರು ನಿನ್ನೆ ಸಂಜೆ ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ  ಪತ್ರ ಸಲ್ಲಿಸಿದ್ದಾರೆ. ನಿನ್ನೆ  ಸರ್ಕಾರಿ ಭರವಸೆಗಳ ಸಮಿತಿಯ ಸಭೆ ಬಳಿಕ ಕೆಂಗೇರಿ ಹೋಬಳಿ ಬಿ. ಎಂ ಕಾವಲ್  ಸ.ನಂ 137ಕ್ಕೆ  ಭೇಟಿ ನೀಡಿ ಸಮಿತಿ ಸದಸ್ಯರು ಪರಿಶೀಲನೆ ನಡಿಸಿದ್ದರು. ವಿಪರ್ಯಾಸವೆಂದರೆ ಸಮಿತಿ  ಸಭೆಯಲ್ಲಿ ಬಿ. ಎಂ ಕಾವಲ್ ಪ್ರಕರಣ ಚರ್ಚೆಯ ವಿಷಯವಾಗಿತ್ತು. ಪ್ರಕರಣದಲ್ಲಿ ಅಕ್ರಮ  ನಡೆದಿರುವುದು ಸತ್ಯವಾದರೂ ಅಧಿಕಾರಿಗಳು ಹಾಗೂ ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳದ  ಹಿನ್ನೆಲೆಯಲ್ಲಿ ಬೇಸರಗೊಂಡು ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ  ಸಲ್ಲಿಸಿರುವುದಾಗಿ ಯುಎನ್ಐ ಸುದ್ದಿ ಸಂಸ್ಥೆಗೆ ಎ.ಟಿ. ರಾಮಸ್ವಾಮಿ ತಿಳಿಸಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಅವರು ಕೆಲ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. 2018ರ ಡಿಸೆಂಬರ್ 13ರಂದು ಬಿ.ಎಂ. ಕಾವಲ್ ಪ್ರದೇಶದ 310 ಎಕರೆ 18 ಗುಂಟೆ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿರುವ ಕುರಿತು ಪ್ರಸ್ತಾಪಿಸಿದ್ದೆ. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವರು,  ಈ ಸಂಬಂಧ ಜಿಲ್ಲಾಧಿಕಾರಿಗಳು ಮಾಡಿರುವ ಆದೇಶ ಕಾನೂನುಬಾಹಿರ  ಎಂದು ಒಪ್ಪಿಕೊಂಡಿದ್ದರು. ಆಗ ನೀವು, ಅವರನ್ನು ಅಮಾನತ್ತಿನಲ್ಲಿಡುವಂತೆ ಸಚಿವರಿಗೆ ಸೂಚಿಸಿದ್ದೀರಿ. ಅದಕ್ಕೆ ಕಂದಾಯ ಸಚಿವರು ಒಪ್ಪಿಗೆ ಸೂಚಿಸಿದ್ದರು. ಆದರೆ, ಇಲ್ಲಿಯವರೆಗೂ ಜಿಲ್ಲಾಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರಿ ಜಮೀನು ತೆರವಿಗೆ ಕೂಡ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ವಿಧಾನಮಂಡಲದಲ್ಲಿ ನೀಡಿದ ಭರವಸೆಗೆ ಕೂಡ ಯಾವುದೇ ಬೆಲೆ ಇಲ್ಲದಿರುವುದು ನನಗೆ ಬೇಸರ ತಂದಿದೆ. ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಿಗೆ ನೀಡಿದ ಭರವಸೆಗಳೇ ಈಡೇರಿಲ್ಲ ಎಂಬುದು ವಿಷಾದನೀಯ. ಇದರಿಂದ ಮನನೊಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. 
ಈ  ಹಿಂದೆ ಎ.ಟಿ ರಾಮಸ್ವಾಮಿ ಹಾಗೂ ಎಚ್ ಎಸ್ ದೊರೆಸ್ವಾಮಿ ಬಿ.ಎಂ.ಕಾವಲ್ ಭೂಮಿ ಅಕ್ರಮದ  ಬಗ್ಗೆ ನಿರಂತರ ಹೋರಾಟ ನಡೆಸಿದ್ದರು.ಆಗ ಅಕ್ರಮ ನಡೆದಿರುವುದು ಕಂಡು ಬಂದಿತ್ತು.ಈ  ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಸರ್ಕಾರದ  ನಡೆಯಿಂದ ಅಸಮಾಧಾನಗೊಂಡು  ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಮಸ್ವಾಮಿ ರಾಜೀನಾಮೆ  ಸಲ್ಲಿಸಿದ್ದಾರೆ. ಇದೇ ವಿಚಾರವನ್ನು ಅವರು ಬೆಳಗಾವಿ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದರು. ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಿರುವ ಕಾರಣ ಹುದ್ದೆಯಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಮನನೊಂದು ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ. 
ಎ.ಟಿ.ರಾಮಸ್ವಾಮಿ ಅವರು ಹಾಸನ ಜಿಲ್ಲೆ ಅರಕಲಗೂಡು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com