ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡಲು ಸಂಪುಟ ಅನುಮೋದನೆ

ಸರ್ಕಾರಿ ಕಾಲೇಜುಗಳಲ್ಲಿ ಪ್ರಥಮ ವರ್ಷದ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ನೀಡುವ ಯೋಜನೆಯನ್ನು ಮತ್ತೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸರ್ಕಾರಿ ಕಾಲೇಜುಗಳಲ್ಲಿ ಪ್ರಥಮ ವರ್ಷದ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ನೀಡುವ ಯೋಜನೆಯನ್ನು ಮತ್ತೆ ಮುಂದುವರಿಸಲು ಸಂಪುಟ ನಿರ್ಧರಿಸಿದೆ.
ಪ್ರಥಮ ವರ್ಷದ ಸರ್ಕಾರಿ ಪದವಿ ಕಾಲೇಜುಗಳಲ್ಲಿ 1,9,9016 ಮಕ್ಕಳಿಗೆ ಲ್ಯಾಪ್‌ ಟಾಪ್‌ ನೀಡಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ. 311 ಕೋಟಿ ರೂ. ವೆಚ್ಚದ  ಯೋಜನೆ ಇದಾಗಿದೆ.
2016-17ನೇ ಸಾಲಿನಲ್ಲಿ ಕೇವಲ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ ಮಾಡಿದ್ದ ಹಿಂದಿನ ಸರ್ಕಾರವು 2018-19ನೇ ಸಾಲಿನಿಂದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ‘ಲ್ಯಾಪ್‌ಟಾಪ್‌ ಭಾಗ್ಯ’ ಕಲ್ಪಿಸಲಾಗುವುದು ಎಂದು ಘೋಷಿಸಿತ್ತು. ಆದರೆ, ಮೂರು ವರ್ಷದಿಂದ ಎಸ್‌ಸಿ, ಎಸ್‌ಟಿ ಹಾಗೂ ಸಾಮಾನ್ಯ ವರ್ಗ ಸೇರಿದಂತೆ ಯಾವ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್‌ ವಿತರಣೆ ಮಾಡಿಲ್ಲ.
ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ-ಅನುದಾನಿತ ಕಾಲೇಜುಗಳ 1,09,916 ವಿದ್ಯಾರ್ಥಿಗಳಿಗೆ 311 ಕೋಟಿ ರು. ವೆಚ್ಚದಲ್ಲಿ ಲ್ಯಾಪ್‌ಟಾಪ್‌ ವಿತರಣೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗಾಗಲೇ ಲ್ಯಾಪ್‌ಟಾಪ್‌ ಪೂರೈಕೆಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಲ್ಯಾಪ್‌ಟಾಪ್‌ ಸರಬರಾಜುದಾರರ ಆಯ್ಕೆಯೂ ಮುಗಿದಿದೆ. ಸದ್ಯದಲ್ಲೇ ಲ್ಯಾಪ್‌ಟಾಪ್‌ ವಿತರಣೆ ಕಾರ್ಯ ಶುರುವಾಗಲಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ನೀಡದಿರುವುದರಿಂದ ಈ ವರ್ಷ ಎರಡನೇ ವರ್ಷದಲ್ಲಿ ಓದುತ್ತಿರುವ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ನೀಡಲಾಗುವುದು. ಈ ವರ್ಷ ಮಾತ್ರ 2 ನೇ ವರ್ಷದ ಮಕ್ಕಳಿಗೆ ಲ್ಯಾಪ್‌ ಟಾಪ್‌ ನೀಡಲಾಗುತ್ತದೆ ಎಂದು ಹೇಳಿದರು.
2017-18ರಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಹಾಗೂ ಲ್ಯಾಪ್‌ಟಾಪ್‌ ವಿತರಣೆ ಆಸೆ ಹೊಂದಿದ್ದ ವಿದ್ಯಾರ್ಥಿಗಳು ಪ್ರಸ್ತುತ ಮೂರನೇ ವರ್ಷದ ಪದವಿಯಲ್ಲಿದ್ದಾರೆ. ಇವರಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡುವುದಿಲ್ಲ ಎಂದು ತಿಳಿದುಬಂದಿದೆ. ಇನ್ನು ಪ್ರಸ್ತುತ ನಿರ್ಧಾರದಿಂದ ಲ್ಯಾಪ್‌ಟಾಪ್‌ ವಿತರಣೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೂ ನ್ಯಾಯ ಒದಗಿಸಬೇಕು ಎಂದು ಸಚಿವ ಸಂಪುಟದಲ್ಲಿ ಕೆಲವು ಸಚಿವರು ಹೇಳಿದ್ದಾರೆ
ಗ್ರಾಮೀಣ ಸುಮಾರ್ಗ ಯೋಜನೆ: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ಗ್ರಾಮೀಣ ಪ್ರದೇಶದ ಮುಖ್ಯ ರಸ್ತೆಗಳ ಅಭಿವೃದ್ಧಿ ಹಾಗೂ ಸುಸ್ಥಿತಿಯಲ್ಲಿಡಲು “ಮುಖ್ಯಮಂತ್ರಿ ಗ್ರಾಮೀಣ ಸುಮಾರ್ಗ ಯೋಜನೆ” ಜಾರಿಗೆ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. 24 ಸಾವಿರ ಕಿ.ಮೀ ರಸ್ತೆಯಲ್ಲಿ 4 ಸಾವಿರ ರಸ್ತೆಗಳು ಸುಸ್ಥಿತಿಯಲ್ಲಿವೆ. ಉಳಿದ 20 ಸಾವಿರ ಕಿ.ಮಿ.ರಸ್ತೆಗಳಿಗೆ ಮರು ಡಾಂಬರೀಕರಣ, ಮೇಲುಸ್ತುವಾರಿ ಮಾಡಲು ಐದು ವರ್ಷಗಳ ಅವಧಿಗೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ 7182 ಕೋಟಿ ಅಂದಾಜು ಮಾಡಲಾಗಿದೆ. ಅದರಲ್ಲಿ ಈ ವರ್ಷ 600 ಕೋಟಿ ಹೆಚ್ಚುವರಿ ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ. 3 ಹಂತದಲ್ಲಿ.ರಸ್ತೆಗಳ ನಿರ್ಮಾಣ ಕಾರ್ಯ ನಡೆಸಲಾಗುವುದು ಎಂದರು.
ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ಅಡಿಯಲ್ಲಿ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ಇತರ 3500 ಸಿಬ್ಬಂದಿಗೆ ವೇತನ ಪರಿಷ್ಕರಣೆ ಮಾಡಲು ಸಂಪುಟ ತೀರ್ಮಾನಿಸಿದೆ ಎಂದು ಹೇಳಿದರು. 
ಮಾನವೀಯ ದೃಷ್ಟಿಯಿಂದ ದೇವಸ್ಥಾನದ ಆದಾಯದ ಶೇ.35ರ ಅನುಪಾತಕ್ಕೆ ಒಳಪಟ್ಟು ಎ ಗ್ರೇಡ್‌ ದೇವಸ್ಥಾನಗಳಲ್ಲಿ 11,600 ಸಾವಿರದಿಂದ 24,600 ರ ವರೆಗೆ, ಬಿ ಗ್ರೇಡ್‌ 7250-17250 ರವರೆಗೆ ವೇತನ ಹೆಚ್ಚಿಸಲು ತೀರ್ಮಾನಿಸಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com