ಬೆಂಗಳೂರು: ನಿರ್ಮಾಣ ಹಂತದ ಟ್ಯಾಂಕ್ ಕುಸಿದು ಮೂವರ ಸಾವು: ಅವಶೇಷಗಳಡಿ ಹಲವರು

ನಿರ್ಮಾಣ ಹಂತದಲ್ಲಿ ನೀರಿನ ಟ್ಯಾಂಕರ್ ಸೆಂಟ್ರಿಂಗ್ ಕುಸಿದು ಬಿದ್ದ ಪರಿಣಾಮ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಲೇಔಟ್ ನಲ್ಲಿ ನಡೆದಿದೆ.

Published: 17th June 2019 12:00 PM  |   Last Updated: 17th June 2019 01:59 AM   |  A+A-


Water Tank collapse

ಕುಸಿದು ಬಿದ್ದ ವಾಟರ್ ಟ್ಯಾಂಕ್

Posted By : SD SD
Source : Online Desk
ಬೆಂಗಳೂರು: ನಿರ್ಮಾಣ ಹಂತದಲ್ಲಿ ನೀರಿನ ಟ್ಯಾಂಕರ್ ಸೆಂಟ್ರಿಂಗ್ ಕುಸಿದು ಬಿದ್ದ ಪರಿಣಾಮ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಲೇಔಟ್ ನಲ್ಲಿ ನಡೆದಿದೆ,

ಕಾಮಗಾರಿ ವೇಳೆ ನೀರು ಶುದ್ದೀಕರಣ ಘಟಕದ ಟ್ಯಾಂಕರ್ ನ ಸೆಂಟ್ರಿಂಗ್ ಗೆ ಅಳವಡಿಸಿದ್ದ ಕಂಬ ಕುಸಿದು ಅವಘಡ ಸಂಭವಿಸಿದೆ,  110 ಎಂಎಲ್ ಡಿ ಸಾಮರ್ಥ್ಯದ ಟ್ಯಾಂಕ್ ಇದಾಗಿದ್ದು, ಒಳಗಡೆ 8-12 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವಶೇಷಗಳಡಿ ಇನ್ನೂ 10 ಮಂದಿ ಸಿಲುಕಿರೋ ಶಂಕೆ ವ್ಯಕ್ತ ವಾಗಿದೆ.

ಘಟನೆ ನಡೆಯುತ್ತಿದಂತೆ ಮಾಹಿತಿ ಪಡೆದ ಅಗ್ನಿ ಶಾಮಕ ಸಿಬ್ಬಂದಿ, ಸ್ಥಳೀಯ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯವನ್ನು ನಡೆಸಿದ್ದಾರೆ. ಘಟನೆಯಲ್ಲಿ 20 ಜನರನ್ನು ರಕ್ಷಣೆ ಮಾಡಿದ್ದು, ಇನ್ನು ಹಲವು ಮಂದಿ ಸೆಂಟ್ರಿಂಗ್ ಕೆಳಗೆ ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯ ಮುಂದುವರಿದಿದ್ದು, ಈಗಾಗಲೇ ರಕ್ಷಣೆ ಮಾಡಿರುವ ಮಂದಿಯಲ್ಲಿ ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರು ಬಹುತೇಕ ಮಂದಿ ಉತ್ತರ ಕರ್ನಾಟಕ ಮೂಲದವರು ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಕೆಲ ಉತ್ತರ ಭಾರತದ ಕಾರ್ಮಿಕರು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.

ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರನ್ನು ಕೊಲಂಬಿಯ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಿರ್ಮಾಣ ಹಂತದಲ್ಲಿದ್ದ ವಾಟರ್ ಟ್ಯಾಂಕ್ ಬಿಡಬ್ಲೂಎಸ್‍ಎಸ್‍ಬಿ ಕಚೇರಿಗೆ ಸೇರಿದ್ದು ಎಂಬ ಮಾಹಿತಿ ಲಭ್ಯವಾಗಿದೆ.

 ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲು ಬೃಹತ್ 8 ವಾಟರ್ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿತ್ತು. ಸುಮಾರು 30 ಎಕರೆ ಪ್ರದೇಶದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಎನ್ ಡಿಆರ್ ಎಫ್ ತಂಡ ಕೂಡ ಆಗಮಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp