ಶತಮಾನದ ಬಳಿಕ ಮಂಗಳೂರಿನ ಬುಡಕಟ್ಟು ಕಾಲೋನಿಯಲ್ಲಿ ಬೆಳಗಿತು ವಿದ್ಯುತ್ ದೀಪ

ಮಂಗಳೂರಿನಿಂದ 90 ಕಿ.ಮೀ. ದೂರದಲ್ಲಿರುವ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆಕುಡಿಯ ಕಾಲೋನಿಯ 47 ಬುಡಕಟ್ಟು ಕುಟುಂಬಗಳ...
ವಿದ್ಯುತ್ ಲೈನ್
ವಿದ್ಯುತ್ ಲೈನ್
ಮಂಗಳೂರು: ಮಂಗಳೂರಿನಿಂದ 90 ಕಿ.ಮೀ. ದೂರದಲ್ಲಿರುವ ಬೆಳ್ತಂಗಡಿ ತಾಲೂಕಿನ ಬಾಂಜಾರು ಮಲೆಕುಡಿಯ ಕಾಲೋನಿಯ 47 ಬುಡಕಟ್ಟು ಕುಟುಂಬಗಳ ಬಹು ದಿನಗಳ ಕನಸು ಇದೀಗ ನನಸಾಗಿದ್ದು, ಶತಮಾನದ ಬಳಿಕ ವಿದ್ಯುತ್ ಸಂಪರ್ಕ ಪಡೆದ ಸಂಭ್ರಮದಲ್ಲಿದ್ದಾರೆ.
ವಿದ್ಯುತ್ ಸಂಪರ್ಕಕ್ಕಾಗಿ ಬುಡಕಟ್ಟು ಜನರ ಎರಡು ದಶಕಗಳ ಹೋರಾಟದ ಬಳಿಕ ಮೆಸ್ಕಾಂ ಈ ಕಾಲೋನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ. 
ಈ ಬುಡಕಟ್ಟು ಕಾಲೋನಿಗೆ ವಿದ್ಯುತ್ ಪೂರೈಕೆಗಾಗಿ ಹಲವಾರು ಯೋಜನೆಯಡಿ ಕಾಮಗಾರಿ ಮಂಜೂರುಗೊಂಡರೂ ಅರಣ್ಯ ಹಾಗೂ ಖಾಸಗಿ ಜಮೀನಿನ ಕಾರಣದಿಂದಾಗಿ ವಿದ್ಯುತ್ ಸಂಪರ್ಕ ಸಾಧ್ಯವಾಗಲಿಲ್ಲ.
ವಿದ್ಯುತ್ ಪೂರೈಕೆ ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಸೋಲಾರ್ ಪ್ಲಾಂಟ್ ಮಂಜೂರುಗೊಂಡರೂ ಸರ್ಕಾರಿ ಜಮೀನಿನ ಕೊರತೆಯಿಂದ ಅದೂ ಕೈಗೂಡಲಿಲ್ಲ. ಉಜಿರೆ , ಬೆಳ್ತಂಗಡಿ, ಬಂಟ್ವಾಳ , ಮಂಗಳೂರು ಮೆಸ್ಕಾಂ ಇಲಾಖೆ ಸೇರಿದಂತೆ ಬೆಂಗಳೂರು ವಿಧಾನಸೌಧದ ಬಾಗಿಲು ತಟ್ಟಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಛಲ ಬಿಡದ 47 ಮಲೆಕುಡಿಯ ಕುಟುಂಬಗಳು ನಿರಂತರ ಹೋರಾಟದ ಫಲವಾಗಿ ಅಂತಿಮವಾಗಿ ವಿದ್ಯುತ್ ಸಂಪರ್ಕ ಕಾಣುವಂತಾಗಿದೆ.
ಕೇಂದ್ರ ಸರ್ಕಾರದ ಸೌಭಾಗ್ಯ ಯೋಜನೆಯಡಿ ಬಾಂಜಾರು ಮಲೆಕುಡಿಯ ಕಾಲನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆ ಮೂಲಕ 47 ಕುಟುಂಬಗಳಲ್ಲಿ ಸೌಭಾಗ್ಯದ ಬೆಳಕು ಚೆಲ್ಲುವ ಕೆಲಸ ಪೂರ್ಣಗೊಂಡಿದೆ.
ಯಾವುದೇ ಮರ ಕಡಿಯದೆ, ಖಾಸಗಿ ಜಮೀನಿನ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಖಾಸಗಿ ಜಮೀನಿನ ಮಾಲೀಕರು ಎಚ್ ಟಿ ಲೈನ್ ಗೆ ಅವಕಾಶ ನೀಡುವುದಿಲ್ಲ. ಆದರೆ ಇಬ್ಬರು ಎಸ್ಟೇಟ್ ಮಾಲೀಕರು ತಮ್ಮ ಜಮೀನಿನಲ್ಲಿ ಉಚಿತವಾಗಿ ವಿದ್ಯುತ್ ಕಂಬ ಹಾಕಲು ಅವಕಾಶ ನೀಡಿದರು. ಒಟ್ಟು 1.2 ಕೋಟಿ ರುಪಾಯಿ ವೆಚ್ಚದಲ್ಲಿ ಮೂರು ವಿದ್ಯುತ್ ಟ್ರಾನ್ಸಫಾರ್ಮರ್ ಗಳು ಹಾಗೂ 450 ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. 6.4 ಕಿಲೋಮೀಟರ್ ದೂರ ಹೈಟೆನ್ಶನ್ ವಿದ್ಯುತ್ ಲೈನ್ ಹಾಗೂ 5.3 ಕಿಲೋಮೀಟರ್ ದೂರ ಲೋ ಟೆನ್ಶನ್ ಲೈನ್ ತಂತಿ ಎಳೆಯಲಾಗಿದೆ ಎಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com