ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಿದ್ದ ಮನ್ಸೂರ್ ಖಾನ್: ಎಸ್ಐಟಿ ತನಿಖೆಯಿಂದ ಬಹಿರಂಗ

ಐಎಂಎ ಜ್ಯುವೆಲ್ಸ್ ನ ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ)...
ಶಿವಾಜಿನಗರದ ವಿ ಕೆ ಒಬೈದುಲ್ಲಾ ಸರ್ಕಾರಿ ಶಾಲೆ ಎದುರು ಪೋಷಕರು ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ
ಶಿವಾಜಿನಗರದ ವಿ ಕೆ ಒಬೈದುಲ್ಲಾ ಸರ್ಕಾರಿ ಶಾಲೆ ಎದುರು ಪೋಷಕರು ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ
ಬೆಂಗಳೂರು: ಐಎಂಎ ಜ್ಯುವೆಲ್ಸ್  ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ಕೋಟ್ಯಂತರ ರೂಪಾಯಿಗಳನ್ನು ಕ್ರಿಪ್ಟೊ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿ ಹವಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ಬಹಿರಂಗಪಡಿಸಿದೆ.
ಮನ್ಸೂರ್ ಖಾನ್ ಹವಾಲಾ ದಂಧೆಯಲ್ಲಿ ಭಾಗಿಯಾಗಿದ್ದು ಕೋಟ್ಯಂತರ ರೂಪಾಯಿಗಳನ್ನು ಬಿಟ್ ಕಾಯಿನ್ ವಹಿವಾಟಿನಲ್ಲಿ ಹೂಡಿಕೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.
ಬಿಟ್ ಕಾಯಿನ್ ಎಂಬುದು ಡಿಜಿಟಲ್ ಕರೆನ್ಸಿಯಾಗಿದ್ದು ಸಂಪೂರ್ಣವಾಗಿ ಎಲೆಕ್ಟ್ಪಾನಿಕ್ ವಿಧಾನದಲ್ಲಿ ವ್ಯವಹಾರವಾಗುತ್ತದೆ. ಮನ್ಸೂರ್ ಖಾನ್ ನಿಯೋಜಿಸಿದ್ದ ತಂಡ ನಗರದಲ್ಲಿ ಬಿಟ್ ಕಾಯಿನ್ ತಜ್ಞರುಗಳ ಜೊತೆ ಸೇರಿಕೊಂಡು ವ್ಯವಹಾರ ಮಾಡುತ್ತಿದ್ದಾರೆ. ನಗರಗಲ್ಲಿನ ಹವಾಲಾ ದಂಧೆಕೋರರ ಜೊತೆ ಮನ್ಸೂರ್ ಖಾನ್ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಮನ್ಸೂರ್ ಖಾನ್ ನ ಮೂರನೇ ಪತ್ನಿಯನ್ನು ವಿಚಾರಣೆ ನಡೆಸುವಾಗ ಈ ವಿಷಯ ಗೊತ್ತಾಗಿದ್ದು ಆಕೆ ಅಧಿಕಾರಿಗಳಿಗೆ ನೀಡಿದ ಲ್ಯಾಪ್ ಟಾಪ್ ನಲ್ಲಿ ಮನ್ಸೂರ್ ಖಾನ್ ನ ಮಹತ್ವದ ಮಾಹಿತಿಗಳು ಸಿಕ್ಕಿವೆ. ಆ ಮೂಲಕ ಮನ್ಸೂರ್ ಖಾನ್ ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಿರುವುದು ಬಹಿರಂಗವಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಕಳೆದ ಮಂಗಳವಾರ ಮನ್ಸೂರ್ ಖಾನ್ ನ ಕೆಲವು ಮಳಿಗೆಗಳು ಮತ್ತು ಮಾಜಿ ಪತ್ನಿಯರ ನಿವಾಸಗಳನ್ನು ಶೋಧಿಸಿದಾಗ ಕೆಲವು ಪ್ರಮುಖ ದಾಖಲೆಗಳು ಮತ್ತು ಐಎಂಎ ಸಂಸ್ಥೆ ಮತ್ತು ರಾಜಕೀಯ ನಾಯಕರೊಬ್ಬರ ಸೋದರನ ಸ್ನೇಹಿತನ ಮಧ್ಯೆ ನಡೆದ ಹಣಕಾಸಿನ ವಹಿವಾಟುಗಳ ದಾಖಲೆಗಳು ಸಿಕ್ಕಿವೆ. ಐಎಂಎಯಿಂದ ಲೋಕೇಶ್ ಎಂಬುವವರಿಗೆ ದುಬಾರಿ ಕಾರು ಗಿಫ್ಟ್ ಆಗಿ ಸಿಕ್ಕಿದ್ದು ಈತ ಕಾಂಗ್ರೆಸ್ ನಾಯಕರೊಬ್ಬರ ಸೋದರನ ಸ್ನೇಹಿತನಾಗಿದ್ದಾನೆ. ಆತನನ್ನು ತನಿಖೆಗೆ ಕರೆಯುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.
ಇದೀಗ ಬೆಂಗಳೂರಿಗರ ದೂರು ಕಡಿಮೆಯಾಗುತ್ತಿದ್ದಂತೆ ಮನ್ಸೂರ್ ಖಾನ್ ಮತ್ತು ಐಎಂಎ ಸಂಸ್ಥೆ ವಿರುದ್ಧ ಬೇರೆ ರಾಜ್ಯಗಳಿಂದ ದೂರುಗಳು ಬಂದಿದ್ದು ಎಲ್ಲಾ ದೂರುಗಳ ಸಂಖ್ಯೆ ಸುಮಾರು 39 ಸಾವಿರದಷ್ಟಾಗಿದೆ. ಹಣ ಹೂಡಿಕೆ ಮಾಡಿದವರಲ್ಲಿ ತನಗೆ ಮುಂದೆ ಹೆಚ್ಚಿನ ಕಾನೂನು ಸಮಸ್ಯೆಗಳು ಎದುರಾಗಬಾರದೆಂದು ಮನ್ಸೂರ್ ಖಾನ್ ಅವರನ್ನು ಪಾಲುದಾರ ಎಂದೇ ದಾಖಲೆಗಳಲ್ಲಿ ನಮೂದಿಸಿದ್ದ. 2006ರ ಕರ್ನಾಟಕ ಹಣ ಹೂಡಿಕೆದಾರರ ಹಿತಾಸಕ್ತಿ ಕಾಯ್ದೆ ಪ್ರಕಾರ ಸಂಸ್ಥೆಯ ಪಾಲುದಾರರನ್ನು ಹೂಡಿಕೆದಾರರು ಎಂದು ಪರಿಗಣಿಸುವುದಿಲ್ಲ. ಐಎಂಎ ಕೇಸಿನಲ್ಲಿ ಮೂಲ ಬಾಂಡ್ ಗಳಲ್ಲಿ ಪ್ರತಿ ಹೂಡಿಕೆದಾರರನ್ನು ಪಾಲುದಾರರು ಎಂದು ನಮೂದು ಮಾಡಲಾಗಿದೆ.
ನವೆಂಬರ್ ನಲ್ಲಿಯೇ ಪರಾರಿಯಾಗಲು ಪ್ಲಾನ್?: ಕಳೆದ ವರ್ಷ ನವೆಂಬರ್ ನಲ್ಲಿಯೇ ಮನ್ಸೂರ್ ಖಾನ್ ದೇಶ ಬಿಟ್ಟು ಪರಾರಿಯಾಗಲು ಯೋಜನೆ ಹಾಕಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದವರಿಗೆ ನವೆಂಬರ್ ತಿಂಗಳಿನಿಂದಲೇ ಲಾಭಾಂಶ ಬರುವುದು ನಿಂತುಹೋಗಿತ್ತು. ಕಂಪೆನಿ ವಿರುದ್ಧ ಆರ್ ಬಿಐ ಹದ್ದಿನ ಕಣ್ಣಿರಿಸಿತ್ತು. 
ಕಂದಾಯ ಇಲಾಖೆ ತನಿಖೆ ನಡೆಸಲು ನಿರ್ಧರಿಸಿ ಐಎಂಎಯ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕ ನೊಟೀಸ್ ಜಾರಿ ಮಾಡಿತ್ತು. ಇದೇ ಸಮಯದಲ್ಲಿ ಇದೇ ರೀತಿಯ ಹವಾಲಾ ಹಣಕಾಸು ವ್ಯವಹಾರದಲ್ಲಿ ತೊಡಗಿದ್ದ ಆಂಬಿಡೆಂಟ್ ಮಾರ್ಕೆಟಿಂಗ್ ಕಂಪೆನಿಯ ಹೆಸರು ಕೇಳಿಬಂದಿತ್ತು. ಹೀಗಾಗಿ ಈ ಸಮಯದಲ್ಲಿ ಪರಾರಿಯಾಗಲು ಯತ್ನಿಸಿದ್ದ ಮನ್ಸೂರ್ ಖಾನ್ ಗೆ ಇದರಿಂದ ಹಿನ್ನಡೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com