ಕುಂದಗೋಳ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ತರಾಟೆ

'ನಾವು ಇಲ್ಲಿ ಹಾರ ತುರಾಯಿ ಹಾಕಿಸಿಕೊಳ್ಳಲು, ಜೈಕಾರ ಕೇಳಲು ಬಂದಿಲ್ಲ. ಅಭಿವೃದ್ಧಿ ಬಗ್ಗೆ ಸಭೆ ಮಾಡೋಕೆ ಬಂದಿದ್ದೇನೆ. ಸರ್ಕಾರದ 6 ಜನ ಮಂತ್ರಿಗಳು ಬಂದಿದ್ದೇವೆ....
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್
ಕುಂದಗೋಳ: 'ನಾವು ಇಲ್ಲಿ ಹಾರ ತುರಾಯಿ ಹಾಕಿಸಿಕೊಳ್ಳಲು, ಜೈಕಾರ ಕೇಳಲು ಬಂದಿಲ್ಲ. ಅಭಿವೃದ್ಧಿ ಬಗ್ಗೆ ಸಭೆ ಮಾಡೋಕೆ ಬಂದಿದ್ದೇನೆ. ಸರ್ಕಾರದ 6 ಜನ ಮಂತ್ರಿಗಳು ಬಂದಿದ್ದೇವೆ. ಗೈರಾಗಿರುವ ಅಧಿಕಾರಿಗಳು ಅರ್ಧ ಗಂಟೆಯಲ್ಲಿ ಇಲ್ಲಿರಬೇಕು. ಹಿರಿಯ ಅಧಿಕಾರಿಗಳು ಅವರನ್ನು ಕರೆಸಬೇಕು ಎಂದು ಸಭೆಯಲ್ಲಿ ಭಾಗವಹಿಸದ ಅಧಿಕಾರಿಗಳಿಗೆ ಖಡಕ್ಕಾಗಿ ಸಚಿವ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.
ಉಪ ಚುನಾವಣೆ ಪ್ರಚಾರದ ವೇಳೆ ಕುಂದಗೋಳ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯ ಜವಾಬ್ದಾರಿ ತನ್ನದೇ ಎಂದು ಮಾತು ಕೊಟ್ಟಿದ್ದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಇಂದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು ಸಭೆಯಲ್ಲಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಸಚಿವರು, ಕೆಲಸ ಮಾಡದವರಿಗೆ ಬೆವರಿಳಿಸಿದರು.
ಕುಂದಗೋಳ ಪಟ್ಟಣದ ಸವಾಯಿ ಗಂಧರ್ವ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಅವರ ಜತೆಗೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ವಸತಿ ಸಚಿವ ಎಂ.ಟಿ.ಬಿ. ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲ, ಶಂಕರ್ ಅವರು ಭಾಗವಹಿಸಿದ್ದರು. 
ಇನ್ನು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೊರವರ್ ಹಾಗೂ ಜಿಲ್ಲಾ ಮಟ್ಟದ ನರೇಗಾ, ವಸತಿ ಯೋಜನೆ ಅಧಿಕಾರಿಗೆ ಬೆವರಿಳಿಸಿದ ಸಚಿವರು, ‘ನೀನು ಜಿಲ್ಲಾ ಮಟ್ಟದ ಅಧಿಕಾರಿಯಾಗೋಕೆ‌ ನಾಲಾಯಕ್. ನಾವು ಹೊರಗಿನಿಂದ ಬಂದವರು, ನೀನು ಹೇಳುವುದು ನಮಗೆ ತಿಳಿಯಬೇಕು, ಜನರಿಗೂ ಅರ್ಥವಾಗೋ ಹಾಗೇ ಹೇಳಿ. ಮಾಹಿತಿ ನೀಡುವಾಗ ನೀವ್ಯಾರು ಗಾಬರಿಯಾಗಬೇಡಿ. ಸರಿಯಾಗಿ‌ ಮಾಹಿತಿ ನೀಡಿ. ನೀವು ಗಾಬರಿಯಾದ್ರೆ ನಾವು ಗಾಬರಿಯಾಗುತ್ತೆವೆ. ನೀವು ವೀಕ್‌ ಆದ್ರೆ ನಾವು ವೀಕ್ ಆಗುತ್ತೆವೆ. ನಾನು ಮಾಧ್ಯಮದ ಎದಿರು ನಿಮ್ಮ ಮರ್ಯಾದೆ ತೆಗೆಯೊಲ್ಲ. ನಿಮ್ಮನ್ನ ರೀಪೇರಿ ಮಾಡೋ ಜಾಗನೇ ಬೇರೆಯಿದೆ. ಹೆದರಬೇಡಿ ಸರಿಯಾಗಿ ಮಾಹಿತಿ‌ ನೀಡಿ ಎಂದರು.
ಸರಿಯಾದ ಮಾಹಿತಿ ಇಟ್ಟು ಕೊಂಡು ಮಾತನಾಡಬೇಕು. ನಾನು ಗ್ರಾಮಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ನಂತರ ಸಚಿವನಾಗಿದ್ದೇನೆ. ನಂಗೆ ಎಲ್ಲಾ ಇಲಾಖೆಗಳ ಬಗ್ಗೆ ಗೊತ್ತು. ಹೀಗಾಗಿ ನೀವು ತಪ್ಪು ಮಾಹಿತಿ ಕೊಡಬಾರದು. ಅಧಿಕಾರಿಗಳು ಫಲಾನುಭವಿಗಳ ಅಂಕಿ ಸಂಖ್ಯೆ ಸಹಿತ ಮಾಹಿತಿ ಕೊಡಬೇಕು. ಎಚ್ಚರಿಕೆಯಿಂದ ಮಾಹಿತಿ ‌ಕೊಡಿ. ಮಾಧ್ಯಮದವರು ಇಲ್ಲೇ ಇದ್ದಾರೆ ಎಂದು ಎಚ್ಚರಿಸಿದರು.
ನಿವೇಶನ ರಹಿತರಿಗೆ ನಿವೇಶನ ದೊರೆಯುವಂತೆ ಮಾಡಬೇಕು. ಕುಂದಗೋಳ ತಾಲೂಕಿನಲ್ಲಿ ಮನೆ ಇಲ್ಲದವರು ಹೆಚ್ಚಿಗೆ ಇದ್ದಾರೆ. ಹೀಗಾಗಿ ಆದಷ್ಡು ಬೇಗ ಅಂತಹವರಿಗೆ  ಮನೆಗಳನ್ನು ಕಟ್ಟಿಸಿ ಕೊಡಬೇಕು. ವಸತಿ ಸಚಿವರೇ ಇಲ್ಲಿಗೆ ಬಂದಿದ್ದಾರೆ. ಅವರು ಎಲ್ಲ ರೀತಿಯ ಸಹಕಾರ ನೀಡುತ್ತಾರೆ. ಹೀಗಾಗಿ ನೀವು ಒಂದು ತಿಂಗಳಲ್ಲಿ ವಸತಿ ಯೋಜನೆ ಅಡಿಯಲ್ಲಿ 10 ಸಾವಿರ ಮನೆ ನಿರ್ಮಾಣ ಮಾಡಬೇಕು. ಬೇಕಾದರೆ ನನ್ನ ತಾಲೂಕಿನ ಮನೆಗಳನ್ನು ಕೂಡ ಕುಂದಗೋಳಕ್ಕೆ ನೀಡುತ್ತೆನೆ. ವಸತಿ ಯೋಜನೆಯಲ್ಲಿ ಕುಂದಗೋಳ ಕ್ಷೇತ್ರ ಮಾದರಿಯಾಗಿ ನಿಲ್ಲಬೇಕು ಎಂದು ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕುಂದಗೋಳ ತಾಲೂಕಿಗೆ ಕರೆ ತರುತ್ತೇವೆ. ತಾಲೂಕಿನಾದ್ಯಂತ ಕುಂಠಿತಗೊಂಡಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಚುರುಕುಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಸಿ.ಎಸ್ ಶಿವಳ್ಳಿ ಮತ್ತು ಅವರ ಪತ್ನಿ ಹಸು ಇದ್ದಾಗೆ. ಇಷ್ಟು ದಿನ ನೀವು ಹೇಳಿದ್ದಕ್ಕೆಲ್ಲಾ ಹೂಂ ಹೂಂ‌ ಎನ್ನುತ್ತಿದ್ದರು. ಆದರೆ ನಾನು ಹಾಗಲ್ಲ. ನಂಗೆ ಎಲ್ಲದಕ್ಕೂ ಲೆಕ್ಕ ಬೇಕು. ನಾವು ಈಗ ಕುಸುಮಾ ಶಿವಳ್ಳಿಯವರನ್ನು ರೆಡಿ ಮಾಡುತ್ತಿದ್ದೇವೆ. ಸಮಾಜ ಕಲ್ಯಾಣ ಇಲಾಖೆ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಸಂಜೆ ವೇಳೆಗೆ ಕೊಡಬೇಕು ಎಂದು ನಿರ್ದೇಶನ ನೀಡಿದರು.
ಇನ್ನು ಯಾರ್ಯಾರು, ಎಷ್ಟೆಷ್ಟು ಕಮೀಷನ್ ತಗೋತರ ಎಲ್ಲವೂ ಹೇಳಬೇಕು‌. ಕಮೀಷನ್ ಪಡೀತಿರಾ ಎಂದು ಸಚಿವರು ಕೇಳಿದಾಗ ಅಧಿಕಾರಿಗಳು ಹೌದು ಎಂದು ಅಧಿಕಾರಿ ಒಪ್ಪಿಕೊಂಡರು. ಆಗ ಸಚಿವರು, 'ಅವರು ಸತ್ಯ ಹೇಳುತ್ತಿದ್ದಾರೆ' ಎಂದು ಚಟಾಕಿ ಹಾರಿಸಿದರು‌.
ಕುಂದಗೋಳದಲ್ಲಿ ಎಷ್ಟು ನ್ಯಾಯ ಬೆಲೆ ಅಂಗಡಿ ಇವೆ ಎಂದು ಪ್ರಶ್ನಿಸಿದರು. ಅದಕ್ಕೆ ಅಧಿಕಾರಿಯಿಂದ ಉತ್ತರ ಬರಲಿಲ್ಲ. ನಿಮ್ಮಲ್ಲಿ ಎಷ್ಟೊತ್ತಿಗೆ ನ್ಯಾಯ ಬೆಲೆ ಅಂಗಡಿಗಳು ತೆಗೆಯುತ್ತವೆ...? ಆ ಅಂಗಡಿ ಮಾಲೀಕರಿಗೆ ಕರೆ ಮಾಡಿ, ನನ್ನೇದುರಿಗೆ ಪೋನ್ ಮಾಡಿ. ಅವರು ಎಷ್ಟೊತ್ತಿಗೆ ನ್ಯಾಯ ಬೆಲೆ ಅಂಗಡಿ ಓಪನ್ ಮಾಡುತ್ತಾರೆ ಕೇಳಿ. ನಾನು ಸ್ಥಳ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು. ಎಲ್ಲರ ಎದುರು ಫೋನ್ ಸ್ಪೀಕರ್ ಆನ್‌ ಮಾಡಲು ಸೂಚಿಸಿದರು. ಸಚಿವರ ಸೂಚನೆಗೆ ಅಧಿಕಾರಿಗಳು ಕಂಗಾಲಾಗಿ ಪೋನ್‌ ಮಾಡಲು ಹೆಣಗಾಡಿದರು.
ನಂತರ ಸಚಿವೆ ಜಯಮಾಲಾ ಅವರು 'ನಂಬರ್ ಕೊಟ್ರೆ ನಾನೇ ಕಾಲ್ ಮಾಡ್ತೀನಿ?' ಎಂದು ಪ್ರಶ್ನೆ ಮಾಡಿದರು.15 ನಿಮಿಷ ಕಳೆದರು ಅಧಿಕಾರಿಗೆ ಪೋನ್ ಮಾಡಲು ಆಗಲಿಲ್ಲ. ಅಧಿಕಾರಿಯ ಬೇಜವಾಬ್ದಾರಿಗೆ ಗರಂ ಆದ ಸಚಿವರು 'ಯಾರನ್ನು ಸಸ್ಪೆಂಡ್ ಮಾಡೋಣ...? ಇರೋ 40 ನ್ಯಾಯ ಬೆಲೆ ಅಂಗಡಿಯ ಮಾಲೀಕರ ನಂಬರ್ ಇಲ್ಲಾಂದ್ರೆ ಹೇಗೆ...? ನಾನೇನು ಕಿವಿಯಲ್ಲಿ ಹೂ ಇಟ್ಟುಕೊಂಡು ಬಂದಿಲ್ಲ. ನಮ್ಮನ್ನ ನೋಡಿ ಮಾಧ್ಯಮದವರು ನಗುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com