ಗಾಂಜಾ ಸೇದದಂತೆ ಮಹಿಳೆಗೆ ಬುದ್ದಿವಾದ ಹೇಳಿದ ಅಡ್ವೊಕೇಟ್ ಮೇಲೆ ಹಲ್ಲೆ, ದೂರು ದಾಖಲು

40 ವರ್ಷದ ಅಡ್ವೊಕೇಟ್ ರೊಬ್ಬರು ಬಾರ್ ನಲ್ಲಿ ಇಬ್ಬರು ಮಹಿಳೆಯರು ಮತ್ತು ಪುರುಷರೊಬ್ಬರು ಕುಳಿತಿದ್ದ ಟೇಬಲ್..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದ ಅಡ್ವೊಕೇಟ್ ರೊಬ್ಬರು ಬಾರ್ ನಲ್ಲಿ ಇಬ್ಬರು ಮಹಿಳೆಯರು ಮತ್ತು ಪುರುಷರೊಬ್ಬರು ಕುಳಿತಿದ್ದ ಟೇಬಲ್ ಬಳಿ ಹೋಗಿ ಮಹಿಳೆಯರು ಗಾಂಜಾ ಸೇದುತ್ತಿದ್ದಾರೆ ಎಂದು ಭಾವಿಸಿ ಅವರಿಗೆ ಗಾಂಜಾ ಸೇವಿಸದಂತೆ ಬುದ್ದಿವಾದ ಹೇಳಿದ್ದು, ಅದಕ್ಕೆ ಮಹಿಳೆ ಅಡ್ವೊಕೇಟ್ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ತಮಗೆ ಬುದ್ದಿ ಹೇಳಲು ಬಂದ ಅಡ್ವೊಕೇಟ್ ಮೇಲೆ ಕೂಗಾಡಿದ ಮಹಿಳೆಯರು ಬಾರ್ ಸಿಬ್ಬಂದಿಯನ್ನು ಕರೆದರು. ಮಾತಿಗೆ ಮಾತು ಬೆಳೆದು ಮಹಿಳೆ ಮತ್ತು ಬಾರ್ ಸಿಬ್ಬಂದಿ ಅಡ್ವೊಕೇಟ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. 
ಹಲ್ಲೆಗೀಡಾದ ವ್ಯಕ್ತಿ ಬಿಟಿಎಂ ಲೇ ಔಟ್ ನಿವಾಸಿ ಶಶಿಧರ್ ಜಿ ಎಂದಾಗಿದ್ದು ಅವರು ಹೈಕೋರ್ಟ್ ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳೆ ವಕೀಲರ ವಿರುದ್ಧ ಲೈಂಗಿಕ ಕಿರುಕುಳ ಪ್ರತಿ ಕೇಸು ದಾಖಲಿಸಿದ್ದಾರೆ. 
ಶಶಿಧರ್ ತಮ್ಮ ಇಬ್ಬರು ಸ್ನೇಹಿತರೊಂದಿಗೆ ರೆಸಿಡೆನ್ಸಿ ರಸ್ತೆಯಲ್ಲಿರುವ ಚಿನ್ ಲಂಗ್ ರೆಸ್ಟೊ ಬಾರ್ ನಲ್ಲಿ ಕಳೆದ ಬುಧವಾರ ಅಪರಾಹ್ನ ಪಾರ್ಟಿ ಮಾಡುತ್ತಿದ್ದರು. ಅಪರಾಹ್ನ 4 ಗಂಟೆ ಸುಮಾರಿಗೆ ಬಿಲ್ ಗೆ ಕಾಯುತ್ತಿದ್ದಾಗ ಶಶಿಧರ್ ಗೆ ಎದುರುಗಡೆ ಕುಳಿತಿದ್ದ ಮಹಿಳೆಯರು ಗಾಂಜಾ ಸೇದುತ್ತಿದ್ದಂತೆ ಕಂಡುಬಂತು. ಅವರ ಬಳಿ ಹೋಗಿ ಗಾಂಜಾ ಸೇದದಂತೆ ಸಲಹೆ ನೀಡಿದರು. 
ಆಗ ಮಹಿಳೆ ತ್ರಿಶಾ(ಹೆಸರು ಬದಲಿಸಲಾಗಿದೆ) ವಕೀಲರ ಜೊತೆ ವಾಗ್ವಾದಕ್ಕಿಳಿದರು. ಅವರಿಗೆ ಬಾರ್ ಸಿಬ್ಬಂದಿ ಸಾಥ್ ನೀಡಿದರು. ಶಶಿಧರ್ ಕೊನೆಗೆ ಬಿಲ್ ಪಾವತಿಸಿ ತಮ್ಮ ಸ್ನೇಹಿತರ ಜೊತೆ ಹೊರಗೆ ಬಂದರು. ಆದರೆ ತ್ರಿಶಾ ಮತ್ತು ಬಾರ್ ಸಿಬ್ಬಂದಿಯೊಬ್ಬ ತಮ್ಮನ್ನು ಹಿಂಬಾಲಿಸಿ ಬಂದು ಹಲ್ಲೆ ನಡೆಸಿದರು ಎಂದು ಶಶಿಧರ್ ಆರೋಪಿಸುತ್ತಾರೆ.
ಶಶಿಧರ್ ಮತ್ತು ಅವರ ಸ್ನೇಹಿತರು ಪೊಲೀಸ್ ನಿಯಂತ್ರಣ ಕೊಠಡಿಗೆ ಫೋನ್ ಮಾಡಿದಾಗ ಹೊಯ್ಸಳ ಜೀಪು ಬಂದು ಎರಡೂ ಕಡೆಯವರನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ತ್ರಿಶಾ ಪೊಲೀಸರಿಂದ ತಪ್ಪಿಸಿಕೊಳ್ಳಲೆತ್ನಿಸುತ್ತಿರುವುದನ್ನು ಶಶಿಧರ್ ಅವರ ಸ್ನೇಹಿತರು ವಿಡಿಯೊ ಮಾಡಿದ್ದಾರೆ. 
ಶಶಿಧರ್ ತಮ್ಮ ಮೇಲೆ ಮಹಿಳೆ ಮತ್ತು ಬಾರ್ ಸಿಬ್ಬಂದಿ ಹಲ್ಲೆ ಮಾಡಿದ ದೂರು ನೀಡಿದರೆ ತ್ರಿಶಾ ಶಶಿಧರ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com