ಪಾಳುಬಿದ್ದಿದ್ದ ಗೌರಿಬಿದನೂರು ತಾಲ್ಲೂಕಿನ ಶಾಲೆ ಮತ್ತೆ ಆರಂಭ; ಮಕ್ಕಳಲ್ಲಿ ಸಂತಸ!

ಪಾಳು ಬಿದ್ದಿದ್ದ ಶಾಲೆಯ ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಸಹಕಾರದಿಂದ ಏಳು ವರ್ಷಗಳ ಬಳಿಕ ಮತ್ತೆ ಆರಂಭವಾಗಿದೆ.
ಗೌರಿಬಿದನೂರು ತಾಲ್ಲೂಕಿನಲ್ಲಿ ಮತ್ತೆ ಆರಂಭಗೊಂಡ ಸರ್ಕಾರಿ ಶಾಲೆ
ಗೌರಿಬಿದನೂರು ತಾಲ್ಲೂಕಿನಲ್ಲಿ ಮತ್ತೆ ಆರಂಭಗೊಂಡ ಸರ್ಕಾರಿ ಶಾಲೆ
ಗೌರಿಬಿದನೂರು (ಚಿಕ್ಕಬಳ್ಳಾಪುರ): ಪಾಳು ಬಿದ್ದಿದ್ದ ಶಾಲೆಯ ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಸಹಕಾರದಿಂದ ಏಳು ವರ್ಷಗಳ ಬಳಿಕ ಮತ್ತೆ ಆರಂಭವಾಗಿದೆ. ಈ ಶಾಲೆ ಇರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಬಂಡೆಮೀಡ ತಾಂಡಾದಲ್ಲಿ.
ಈ ಶಾಲೆ ಕೆಲ ವರ್ಷಗಳ ಹಿಂದೆ ಮಕ್ಕಳಿಗೆ ವಿದ್ಯಾರ್ಜನೆಯ ಕೇಂದ್ರವಾಗಿತ್ತು. ನಂತರ ಇಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಹೋದದ್ದರಿಂದ ಶಾಲೆ ಮುಚ್ಚಿಹೋಯಿತು. ಕಟ್ಟಡದ ಸುತ್ತ ಗಿಡ, ಮರ, ಪೊದೆಗಳು ಬೆಳೆದು, ಕಟ್ಟಡದೊಳಗೆ ಬಲೆಯಿಂದ ಮುಚ್ಚಿ ಹೋಗಿತ್ತು. ಮಕ್ಕಳು ಮಾತ್ರವಲ್ಲದೆ ಗ್ರಾಮಸ್ಥರು ಕೂಡ ಕಟ್ಟಡದ ಬಳಿ ಸುಳಿಯುತ್ತಿರಲಿಲ್ಲ. ಶಾಲೆಗೆ ಸಂಬಂಧಪಟ್ಟ ದಾಖಲೆಗಳು ಪಕ್ಕದ ಗ್ರಾಮದ ಶಾಲೆಗೆ  ವರ್ಗಾವಣೆಯಾಯಿತು. ಈ ತಾಂಡಾದ ಮಕ್ಕಳು ಕೂಡ ಪಕ್ಕದ ಹಳ್ಳಿಯ ಶಾಲೆಗೆ ಹೋಗಬೇಕಾಗಿ ಬಂತು. 
ಈ ಶಾಲೆಯಲ್ಲಿ ಓದಿದ ಮಾಜಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಶಾಲೆಯ ದುರವಸ್ಥೆ ಕಂಡು ಗಟ್ಟಿ ಮನಸ್ಸು ಮಾಡಿ ಮತ್ತೆ ಶಾಲೆ ತೆರೆಯುವಂತೆ ಮಾಡಿದರು. 
ಸುತ್ತಮುತ್ತ ಬಂಡೆಕಲ್ಲುಗಳಿಂದ ತುಂಬಿರುವುದರಿಂದ ಈ ತಾಂಡಾಕ್ಕೆ ಬಂಡೆಮೀಡ ತಾಂಡಾ ಎಂಬ ಹೆಸರಿದೆ. ಇಲ್ಲಿ ಸುಮಾರು 500 ಜನರು ನೆಲೆಸಿದ್ದಾರೆ. ಬೆಂಗಳೂರಿನಿಂದ 100 ಕಿಲೋ ಮೀಟರ್ ದೂರದಲ್ಲಿ ಮತ್ತು ಆಂಧ್ರ ಪ್ರದೇಶದ ಅನಂತ್ ಪುರ ಜಿಲ್ಲೆಯಿಂದ ಕೇವಲ 4 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿನ ಬಹುತೇಕ ಮಂದಿ ಕೃಷಿ ಕಾರ್ಮಿಕರು.
1996ರಲ್ಲಿ ಈ ಶಾಲೆ ಆರಂಭವಾಗಿತ್ತು. ಶಾಲೆಯಲ್ಲಿ ಬೇಕಾದ ಮೂಲಭೂತ ಸೌಕರ್ಯಗಳಿದ್ದವು. ನಾಲ್ಕನೇ ತರಗತಿಯವರೆಗೆ ಸುಮಾರು 60 ಮಕ್ಕಳಿದ್ದರು. ಆದರೆ ಬರಬರುತ್ತಾ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಯಿತು. ಇದರಿಂದ ಅನಿವಾರ್ಯವಾಗಿ ಶಾಲೆ ಮುಚ್ಚಿಹೋಯಿತು. 
ಹೀಗಿರುವಾಗ ಕಳೆದ ವರ್ಷ 21 ವರ್ಷದ ಈ ಶಾಲೆಯ ಹಳೆ ವಿದ್ಯಾರ್ಥಿ ಮಂಜು ನಾಯಕ್ ಶಾಲೆಯನ್ನು ನವೀಕರಣ ಮಾಡಲು ಮೊದಲು ಮುಂದಾದರು. ಗೌರಿಬಿದನೂರಿನಲ್ಲಿ ವಿದ್ಯುತ್ ಇಲಾಖೆಯ ಲೈನ್ ಮ್ಯಾನ್ ಆಗಿರುವ ನಾಯಕ್ ಅವರ ಸೋದರ ಸಂಬಂಧಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮಾಡಲು ತಮ್ಮ ಶಿಕ್ಷಣ ದಾಖಲಾತಿಗೆ ಪಕ್ಕದ ನಡುಮಿನ್ ಗ್ರಾಮದ ಸರ್ಕಾರಿ ಶಾಲೆಗೆ ಹೋಗಬೇಕಾಯಿತು. ಏಕೆಂದರೆ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ದಾಖಲೆಗಳು ನೆರೆಯ ಗ್ರಾಮದ ಶಾಲೆಗೆ ವರ್ಗಾಯಿಸಲ್ಪಟ್ಟಿತ್ತು.
ಈ ಸಂದರ್ಭದಲ್ಲಿ ನಾಯಕ್ ಗೆ ಹೇಗಾದರೂ ಮಾಡಿ ಶಾಲೆಯನ್ನು ಮತ್ತೆ ತೆರೆಸಬೇಕೆಂಬ ಹಠ ಹಿಡಿಯಿತು. ಅವರಿಗೆ ಕೆಲವು ಹಳೆ ವಿದ್ಯಾರ್ಥಿಗಳು ಕೈ ಜೋಡಿಸಿದರು. ವಲಯ ಶಿಕ್ಷಣಾಧಿಕಾರಿಯನ್ನು ಭೇಟಿ ಮಾಡಿದಾಗ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪಟ್ಟಿ ಮಾಡಿಕೊಂಡು ಬನ್ನಿ ಎಂದರಂತೆ. ಅದಕ್ಕೆ ಇವರೆಲ್ಲಾ ಗ್ರಾಮಕ್ಕೆ ಹೋಗಿ ಮಕ್ಕಳ ಪೋಷಕರ ಮನವೊಲಿಸಿ ಪತ್ರ ಬರೆಸಿಕೊಂಡು ಶಿಕ್ಷಣಾಧಿಕಾರಿಗೆ ಕೊಟ್ಟರು. ಕೇವಲ 15 ದಿನಗಳಲ್ಲಿ ಶಾಲೆ ಮತ್ತೆ ತೆರೆಯುವಂತಾಯಿತು. ಶಿಕ್ಷಣ ಇಲಾಖೆ ಪಕ್ಕದ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಮಹಬೂಬ್ ಸುಬಾನ್ ಅವರನ್ನು ಶಿಕ್ಷಕರಾಗಿ ನೇಮಿಸಿದರು.
ಇದೀಗ ಸುತ್ತಮುತ್ತಲ ಮಕ್ಕಳು ಮತ್ತೆ ಶಾಲೆಗೆ ಬರಲಾರಂಭಿಸಿದ್ದಾರೆ. ದೂರದ ಹಳ್ಳಿಗೆ ನಡೆದುಕೊಂಡು ಹೋಗುವ ಬದಲು ಹತ್ತಿರದಲ್ಲಿಯೇ ಶಾಲೆ ಆರಂಭವಾಗಿರುವುದು ಮಕ್ಕಳಿಗೆ ಮತ್ತು ಪೋಷಕರಿಗೆ ಸಂತಸ ತಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com