ಸದ್ಯ ಬಸ್ ಪ್ರಯಾಣ ದರ ಏರಿಕೆಗೆ ಸಿಎಂ ಬ್ರೇಕ್, ಪ್ರಯಾಣಿಕರು ನಿರಾಳ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಏರಿಕೆಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸದ್ಯಕ್ಕೆ ಬ್ರೇಕ್ ಹಾಕಿದ್ದು...
ಎಚ್ ಡಿ ಕುಮರಸ್ವಾಮಿ
ಎಚ್ ಡಿ ಕುಮರಸ್ವಾಮಿ
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಏರಿಕೆಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸದ್ಯಕ್ಕೆ ಬ್ರೇಕ್ ಹಾಕಿದ್ದು, ಪ್ರಯಾಣಿಕರು ನಿರಾಳರಾಗಿದ್ದಾರೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಾರಿಗೆ ಇಲಾಖೆ ಮತ್ತು ರಸ್ತೆ ಸಾರಿಗೆ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದ್ಯಕ್ಕೆ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವವನ್ನು ಕೈಬಿಡಲಾಗಿದೆ.
ಬಸ್ ದರ ಏರಿಕೆ ಅನಿವಾರ್ಯತೆ ಕುರಿತಂತೆ ಸೂಕ್ತ ಸಮರ್ಥನೆಗಳೊಂದಿಗೆ ಮರು ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಕುಮಾರಸ್ವಾಮಿ ಅವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಸ್​ ದರವನ್ನು ಶೇಕಡವಾರು ಏರಿಕೆಗೆ ಸಂಬಂಧಿಸಿದಂತೆ ಹೊಸ ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಕುಮಾರಸ್ವಾಮಿ ಅವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ, ಸಾರಿಗೆ ಇಲಾಖೆ ನಷ್ಟದಿಂದ ಹೊರಬರುವ ಬಗ್ಗೆ ಮಾರ್ಗೋಪಾಯದ ಬಗ್ಗೆಯೂ ಅಧಿಕಾರಿಗಳನ್ನು ಸಿಎಂ ಕೇಳಿದ್ದಾರೆ.
ಗಣನೀಯ ಪ್ರಮಾಣದಲ್ಲಿ ಏರುತ್ತಿರುವ ತೈಲ ಬೆಲೆ, ಕಳೆದ ಕೇಂದ್ರ ಬಜೆಟ್ ನಂತರ ಏರಿಕೆ ಆಗಿರುವ ವಾಹನಗಳ ಬಿಡಿ ಭಾಗಗಳು, ಏರಿಕೆ ಆಗಿರುವ ಸಾರಿಗೆ ನೌಕರರ ವೇತನ, ದುಬಾರಿ ಆಗಿರುವ ನಿರ್ವಹಣೆ ವೆಚ್ಚದ ಕುರಿತು ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದರು.
ಕಳೆದ ಹದಿನೆಂಟು ತಿಂಗಳಿಂದ ಬಸ್ ದರ ಏರಿಕೆ ಆಗದಿರುವ ಬಗ್ಗೆಯೂ ಮಾಹಿತಿ ನೀಡಿದರು. ಅಲ್ಲದೇ, ಸರ್ಕಾರ ಬಾಕಿ ಉಳಿಸಿಕೊಂಡ ಮೊತ್ತವನ್ನು ಬಿಡುಗಡೆ ಮಾಡುವಂತೆ ಸಭೆಯಲ್ಲಿ ಅಧಿಕಾರಿಗಳು ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com