ವಾರಾಂತ್ಯದಲ್ಲಿ ಬೆಂಗಳೂರಿನ ಈ ಮಕ್ಕಳು ಮಾಡುವುದು ಇ-ತ್ಯಾಜ್ಯ ಸಂಗ್ರಹಣೆ!

ನಗರದಲ್ಲಿರುವ ಮಧ್ಯಮ, ಮೇಲ್ಮಧ್ಯಮ ಮತ್ತು ಶ್ರೀಮಂತ ಪೋಷಕರ ಮಕ್ಕಳು ವಾರಾಂತ್ಯಗಳಲ್ಲಿ ಏನು ಮಾಡಬಹುದು...
ಇ-ತ್ಯಾಜ್ಯ ಸಂಗ್ರಹಿಸುತ್ತಿರುವ ಮಕ್ಕಳ ಗುಂಪು
ಇ-ತ್ಯಾಜ್ಯ ಸಂಗ್ರಹಿಸುತ್ತಿರುವ ಮಕ್ಕಳ ಗುಂಪು
ಬೆಂಗಳೂರು: ನಗರದಲ್ಲಿರುವ ಮಧ್ಯಮ, ಮೇಲ್ಮಧ್ಯಮ ಮತ್ತು ಶ್ರೀಮಂತ ಪೋಷಕರ ಮಕ್ಕಳು ವಾರಾಂತ್ಯಗಳಲ್ಲಿ ಏನು ಮಾಡಬಹುದು, ತಂದೆ-ತಾಯಿ ಜೊತೆ ಎಲ್ಲಾದರು ಸುತ್ತಾಡಲು ಹೋಗುವುದು, ಸಂಗೀತ, ಭರತನಾಟ್ಯ, ಕರಾಟೆ ಕ್ಲಾಸ್ ಇತ್ಯಾದಿ ಕ್ಲಾಸ್ ಗಳಿಗೆ ಇನ್ನು ಕೆಲವು ಮಕ್ಕಳು ಹೋಗಬಹುದು, ಇಲ್ಲವೇ ಮನೆಯಲ್ಲಿಯೇ ಏನಾದರೂ ಮಾಡಬಹುದು. 
ಆದರೆ ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್ ಮೆಂಟ್ ವೊಂದರ ಮಕ್ಕಳು ವಾರಾಂತ್ಯವನ್ನು ಅರ್ಥವತ್ತಾಗಿ ವಿಶಿಷ್ಟವಾಗಿ ಕಳೆಯುತ್ತಾರೆ. 
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಡೆಕ್ಕನ್ ಪಾಲ್ಮ್ಸ್ ವಿಲ್ಲಾ ಅಪಾರ್ಟ್ ಮೆಂಟ್ ನಲ್ಲಿ ವಿಲ್ಲಾ ಮತ್ತು ಫ್ಲಾಟ್ ಗಳು ಸೇರಿ ಸುಮಾರು 150 ಮನೆಗಳಿವೆ. ಇಲ್ಲಿನ ನಿವಾಸಿಗಳು ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯ ಪ್ರತ್ಯೇಕ ಮಾಡಿ ಆನೆಕಲ್ ಸಿಟಿ ಮುನ್ಸಿಪಲ್ ಕಾರ್ಪೊರೇಷನ್ ಗೆ ನೀಡುತ್ತಾರೆ. ಇಲ್ಲೊಬ್ಬ ಸಾಮಾಜಿಕ ಕಾರ್ಯಕರ್ತೆ ಶೀತಲ್ ಪುರೋಹಿತ್ ಎಂಬುವವರು ಇದ್ದಾರೆ. ಇವರು ಸ್ವ ಆಸಕ್ತಿಯಿಂದ ಇಲ್ಲಿನ ಮಕ್ಕಳಿಗೆ ತ್ಯಾಜ್ಯಗಳ ವಿಂಗಡಣೆ ಬಗ್ಗೆ ಮಾಹಿತಿ ನೀಡಿದರು. ಮಕ್ಕಳು ಕೂಡ ಅಷ್ಟೇ ಆಸಕ್ತಿಯಿಂದ ಕಲಿತು ಕಳೆದ ಬೇಸಿಗೆ ರಜೆಯಲ್ಲಿ ನಗರದಲ್ಲಿ ತ್ಯಾಜ್ಯಗಳ ವಿಂಗಡಣೆ ಮತ್ತು ಅವುಗಳ ವಿಲೇವಾರಿ ಬಗ್ಗೆ ಅಕ್ಕಪಕ್ಕದ ಮನೆಗಳಿಗೆ ಹೋಗಿ ಪೋಸ್ಟರ್ ಮೂಲಕ ಜನರಿಗೆ ಕಸ ವಿಂಗಡಣೆ ಬಗ್ಗೆ ಅರಿವು ಮೂಡಿಸಿದ್ದಾರೆ.
ಇದೀಗ ಮಕ್ಕಳು ಎಲೆಕ್ಟ್ರಾನಿಕ್ ಉಪಕರಣ ತ್ಯಾಜ್ಯಗಳ ವಿಂಗಡಣೆ ಬಗ್ಗೆ ಅಕ್ಕಪಕ್ಕದ ನಿವಾಸಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಈ ತಿಂಗಳು ಮತ್ತೆ ಶಾಲೆ ಆರಂಭವಾಗಿದೆ.
ವಾರಾಂತ್ಯಗಳಲ್ಲಿ ಮಕ್ಕಳು ಈ ಕೆಲಸದಲ್ಲಿ ತೊಡಗಿದ್ದಾರೆ. ಮಕ್ಕಳು ತಂಡವೊಂದನ್ನು ರಚಿಸಿ ಮನೆ ಮನೆಗಳಿಗೆ ಹೋಗಿ ಇ-ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಬ್ಯಾಟರಿ, ಬಲ್ಬ್, ವೈರ್ ಮತ್ತು ಇತರ ವಸ್ತುಗಳನ್ನು ಸೇರಿ ಸುಮಾರು 50 ಕೆಜಿ ಇ-ತ್ಯಾಜ್ಯವನ್ನು ಸಂಗ್ರಹಿಸಿದ್ದಾರೆ. 
ಸಂಗ್ರಹಿಸಿರುವ ಇ-ತ್ಯಾಜ್ಯಗಳನ್ನು ಜಿಗಣಿಯಲ್ಲಿರುವ ಸಾಹಸ್ ಕಂಪೆನಿಗೆ ಮರುಬಳಕೆಗೆ ಕಳುಹಿಸುತ್ತಾರೆ ಎನ್ನುತ್ತಾರೆ ಶೀತಲ್ ಪುರೋಹಿತ್. 
ಮಕ್ಕಳಿಗೆ ಈ ಕೆಲಸ ಒಪ್ಪಿಸುವ ಮುನ್ನ ಆ ಬಗ್ಗೆ ಮಾಹಿತಿ ನೀಡಲಾಗಿದೆ, ಹಲವು ಸ್ಪರ್ಧೆಗಳನ್ನು ಆಡಿಸಲಾಯಿತು, ನಂತರ ಮನೆ ಮನೆಗೆ ಕಳುಹಿಸಲಾಯಿತು, ಮಕ್ಕಳು ಹೋಗುವಾಗ ಅವರ ಜೊತೆ ಫಾರ್ಮ್ ವೊಂದನ್ನು ನೀಡಿ ನಿವಾಸಿಗಳಲ್ಲಿ ಅದನ್ನು ಭರ್ತಿ ಮಾಡುವಂತೆ ಹೇಳಲಾಯಿತು. ಈ ಮೂಲಕ ನಿವಾಸಿಗಳ ಅಭಿಪ್ರಾಯ, ಸಲಹೆಯನ್ನು ಪಡೆಯಲಾಯಿತು ಎಂದರು ಶೀತಲ್.
ಮಕ್ಕಳು ಸಹ ಈ ಕೆಲಸವನ್ನು ಖುಷಿಯಿಂದ ಮಾಡುತ್ತಾರೆ. ಇದರಿಂದ ಹಲವು ವಿಷಯಗಳನ್ನು ಕಲಿಯುತ್ತೇವೆ. ವಾರಾಂತ್ಯ ಚೆನ್ನಾಗಿ ಕಳೆಯುತ್ತೇವೆ ಎನ್ನುತ್ತಾನೆ 4ನೇ ತರಗತಿಯ ರಿತ್ವಿಕ್ ರೆಡ್ಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com