ಜಿಎಸ್ ಟಿ ನಷ್ಟ ಪರಿಹಾರವನ್ನು ಮತ್ತೆ ಐದು ವರ್ಷಗಳ ಕಾಲ ವಿಸ್ತರಿಸಬೇಕು- ಎಚ್ ಡಿ ಕುಮಾರಸ್ವಾಮಿ

ಸರಕು ಮತ್ತು ಸೇವಾ ತೆರಿಗೆ- ಜಿಎಸ್ ಟಿ ಜಾರಿಗೆ ಬಂದ ನಂತರ ರಾಜ್ಯಗಳಿಗೆ ನೀಡುತ್ತಿರುವ ನಷ್ಟ ಪರಿಹಾರ ವ್ಯವಸ್ಥೆಯನ್ನು ಮತ್ತೆ ಐದು ವರ್ಷಗಳ ಕಾಲ ವಿಸ್ತರಿಸಬೇಕು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ- ಜಿಎಸ್ ಟಿ ಜಾರಿಗೆ ಬಂದ ನಂತರ ರಾಜ್ಯಗಳಿಗೆ ನೀಡುತ್ತಿರುವ ನಷ್ಟ ಪರಿಹಾರ ವ್ಯವಸ್ಥೆಯನ್ನು ಮತ್ತೆ ಐದು ವರ್ಷಗಳ ಕಾಲ ವಿಸ್ತರಿಸಬೇಕು. ನಿರಂತರ ಬರ ಪರಿಸ್ಥಿತಿ ಎದುರಿಸುತ್ತಿರುವ ರಾಜ್ಯಕ್ಕೆ ವಿಪತ್ತು ಪರಿಹಾರ ನಿಧಿಯಡಿ ಹೆಚ್ಚಿನ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
 ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ 15 ನೇ ಹಣಕಾಸು ಆಯೋಗದ ಸಭೆಯಲ್ಲಿ ಮಾತನಾಡಿದ ಅವರು, ಜಿಎಸ್ ಟಿಯಡಿ ರಾಜ್ಯಗಳಿಗೆ ಆಗುತ್ತಿದ್ದ ನಷ್ಟವನ್ನು ತುಂಬಿಕೊಡುವ ಕೇಂದ್ರದ ಹಾಲಿ ವ್ಯವಸ್ಥೆಯನ್ನು ಮತ್ತೆ ಐದು ವರ್ಷಗಳ ಕಾಲ ಅಥವಾ 2022ರವರೆಗೆ ವಿಸ್ತರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಮನವಿ ಮಾಡಿದ್ದಾರೆ
ಹಣಕಾಸು ಆಯೋಗದಡಿ ರಾಜ್ಯಗಳಿಗೆ ಹೆಚ್ಚಿನ ನೆರವು ನೀಡಿ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಪನ್ಮೂಲ ಕಡಿತಗೊಳಿಸುವ ಕೆಲಸವನ್ನು ಕೇಂದ್ರಸರ್ಕಾರ ಮಾಡುತ್ತಿದ್ದು, ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ಮುಖ್ಯಮಂತ್ರಿ, ಸತತ ಬರಗಾಲ ಪರಿಸ್ಥಿತಿ ಎದುರಿಸುತ್ತಿರುವ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಳದ ಪರಿಸ್ಥಿತಿಗಳು, ಹಾಗೂ ಸುಸ್ಥಿರ ಅಭಿವೃದ್ಧಿಯ ಗುರಿಗಳ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಸುಲಭ ವ್ಯಾಪಾರ, ಡಿಜಿಟಲ್ ಆರ್ಥಿಕತೆಗೆ ಹೆಚ್ಚಿನ ಗಮನ ನೀಡಲಾಗಿದೆ. ಎನ್ . ಕೆ. ಸಿಂಗ್  ರಾಜ್ಯದ ಅಗತ್ಯತೆಗಳ ಬಗ್ಗೆ ವರದಿಯಲ್ಲಿ ಸೂಕ್ತ ಶಿಫಾರಸ್ಸು ಮಾಡುತ್ತಾರೆ ಎನ್ನುವ ವಿಶ್ವಾಸ ತಮಗಿದೆ ಎಂದು ಕುಮಾರಸ್ವಾಮಿ  ಹೇಳಿದ್ದಾರೆ.
ಜಿಎಸ್ ಟಿ ಜಾರಿಗೆ ಮುನ್ನ ಕರ್ನಾಟಕ ತೆರಿಗೆ ಸಂಗ್ರಹದಲ್ಲಿ ಸುಸ್ಥಿರ ಪ್ರಯತ್ನಗಳನ್ನು ನಡೆಸಿಕೊಂಡು ಬಂದಿದ್ದು, ದೇಶದಲ್ಲಿ ಅತಿ ಹೆಚ್ಚಿನ ವ್ಯಾಟ್ ಸಂಗ್ರಹಿಸಿದ ರಾಜ್ಯವಾಗಿದೆ. ಅಬಕಾರಿ ತೆರಿಗೆ, ಮೋಟಾರು ವಾಹನ ತೆರಿಗೆ, ಮುದ್ರಾಂಕ ಶುಲ್ಕ ಸಂಗ್ರಹದಲ್ಲಿಯೂ ಉತ್ತಮ ಸಾಧನೆ ಮಾಡಿದ್ದು, ತೆರಿಗೆಯೇತರ ರಾಜಸ್ವ ಸಂಗ್ರಹ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸುಧಾರಣೆ ತರಲು ಸಾಕಷ್ಟು ಅವಕಾಶಗಳಿವೆ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com