ಕಾರ್ಮಿಕ ಮುಖಂಡ, ಮಾಜಿ ಕೌನ್ಸಿಲರ್‌ ಸತ್ಯನಾರಾಯಣರಾವ್ ನಿಧನ

ಸಮಾಜ ಸೇವಕ, ಕಾರ್ಮಿಕ ಮುಖಂಡ ಹಾಗೂ ಮಾಜಿ ಕೌನ್ಸಿಲರ್ ಸತ್ಯನಾರಾಯಣರಾವ್ ಅಲಿಯಾಸ್ ಓಂ ನಮಃ ಶಿವಾಯಃ ಅವರು ವಿಧಿವಶರಾಗಿದ್ದಾರೆ.

Published: 25th June 2019 12:00 PM  |   Last Updated: 25th June 2019 01:38 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಬೆಂಗಳೂರು: ಸಮಾಜ ಸೇವಕ, ಕಾರ್ಮಿಕ ಮುಖಂಡ ಹಾಗೂ ಮಾಜಿ ಕೌನ್ಸಿಲರ್ ಸತ್ಯನಾರಾಯಣರಾವ್ ಅಲಿಯಾಸ್ ಓಂ ನಮಃ ಶಿವಾಯಃ ಅವರು ವಿಧಿವಶರಾಗಿದ್ದಾರೆ.

ಜಿಕೆಡಬ್ಲೂ ಕಾರ್ಮಿಕ ನಾಯಕನಾಗಿ ನಂತರ ಮಹಾನಗರ ಪಾಲಿಕೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಅವರು, ಬೆಂಗಳೂರಿನಲ್ಲಿ ಗಿಡನೆಡುವ ಕಾರ್ಯಕ್ರಮವನ್ನು ಸ್ವಯಂ ಜಾರಿಗೊಳಿಸುವ ಮೂಲಕ ಮಾದರಿಯಾಗಿದ್ದರು. ಜನತಾ ಪಕ್ಷದಲ್ಲಿದ್ದು ಜೆಡಿಎಸ್ ವರಿಷ್ಠ ದೇವೇಗೌಡರ ಜತೆಗೇ ಗುರುತಿಸಿಕೊಂಡಿದ್ದ ಅವರು, ವಿ ಸೋಮಣ್ಣ, ಕೃಷ್ಣಪ್ಪ ಅವರೊಂದಿಗೆ ಕಾರ್ಪೋರೇಟರ್ ಆಗಿ ತಮ್ಮದೇ ಶೈಲಿಯನ್ನು ರೂಢಿಸಿಕೊಂಡಿದ್ದ ಮಹಾ ಸ್ವಾಭಿಮಾನಿ. 

ದೇವೇಗೌಡರ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಜಯಮಹಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅವರು ಕೊನೆಯುಸಿರು ಇರುವವರೆಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು. ಮುತ್ತಪ್ಪ ರೈ ಅವರ ಜಯಕರ್ನಾಟಕ ಸಂಘಟನೆಗೆ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು, ಪತ್ರಕರ್ತ ಸಮೂಹದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದರು. ಯಾವಾಗಲೂ ತಮ್ಮ ಕಾರಿನಲ್ಲಿ ತಿಂಡಿ, ಇಡ್ಲಿ, ದೋಸೆ, ಚಿತ್ರಾನ್ನ, ಬಿರಿಯಾನಿ ಪೊಟ್ಟಣಗಳನ್ನು ಇಟ್ಟುಕೊಂಡು ಹಾದಿಬದಿಯಲ್ಲಿ ಕಾಣಸಿಗುವ ಹಸಿದವರಿಗೆ ಉಣಬಡಿಸುತ್ತಿದ್ದ ಅವರ ಮಾನವೀಯ ಸೇವೆ ಆದರ್ಶಪ್ರಾಯವಾಗಿತ್ತು.

ಬೆಂಗಳೂರು ಪ್ರೆಸ್ ಕ್ಲಬ್‌ನ ಸದಸ್ಯರೂ ಆಗಿದ್ದ ಅವರು ನಮ ಶಿವಾಯ ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದರು. ಅವರ ನಿಧನಕ್ಕೆ ಬಿಬಿಎಂಪಿ ಸದಸ್ಯರು, ಅಧಿಕಾರಿಗಳು, ಬೆಂಗಳೂರು ಪ್ರೆಸ್‌ಕ್ಲಬ್‌ ಸದಸ್ಯರು ಹಾಗೂ ಸಮಾಜದ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp