ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಜಲಾಶಯದ ಒಳ ಹರಿವು ಹೆಚ್ಚಾದರೆ ಮಾತ್ರ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ...

Published: 25th June 2019 12:00 PM  |   Last Updated: 25th June 2019 08:53 AM   |  A+A-


Release water to TN if rains are normal: Cauvery board to Karnataka

ಕೆಆರ್ ಎಸ್ ನಲ್ಲಿ ನೀರಿನ ಪ್ರಮಾಣ ಪರಿಶೀಲಿಸುತ್ತಿರುವ ಅಧಿಕಾರಿಗಳು(ಸಂಗ್ರಹ ಚಿತ್ರ)

Posted By : LSB LSB
Source : UNI
ನವದೆಹಲಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಜಲಾಶಯದ ಒಳ ಹರಿವು ಹೆಚ್ಚಾದರೆ ಮಾತ್ರ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಮಸೂದ್ ಹುಸೇನ್ ಅವರ ನೇತೃತ್ವದಲ್ಲಿ ಇಂದು ನವದೆಹಲಿಯಲ್ಲಿ ಸಭೆ ನಡೆಯಿತು. ಪ್ರಾಧಿಕಾರದ ಮುಂದೆ ಕಾವೇರಿ ನೀರು ನಿಯಂತ್ರಣ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಅವರು ಮಾನ್ಸೂನ್ ಮಳೆಯ ಜಲಾಶಯಗಳ ನೀರಿನ ಮಟ್ಟದ ಮಾಹಿತಿಯನ್ನು ವರದಿಯನ್ನು ಸಮಿತಿಗೆ ಸಲ್ಲಿಸಿದ್ದರು.

ಇಂದಿನ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು. ಜೂನ್ ಹಾಗೂ ಜುಲೈ ತಿಂಗಳ ನೀರನ್ನೂ ಒಟ್ಟಿಗೆ ಹರಿಸುವಂತೆ ತಮಿಳುನಾಡು ಬೇಡಿಕೆಯಿಟ್ಟಿತ್ತು. ಆದರೆ ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು ಬಿಡಿ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಸೂಚನೆ ನೀಡಿರುವುದರಿಂದ ಸರ್ಕಾರಕ್ಕೆ ಸಮಾಧಾನ ಸಿಕ್ಕಿದೆ.

ಜೂನ್ ತಿಂಗಳಿನಲ್ಲಿ ಕರ್ನಾಟಕ ತಮಿಳುನಾಡಿಗೆ 9.19 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕಿತ್ತು. ಇದುವರೆಗೆ 1.72 ಟಿಎಂಸಿ ನೀರನ್ನು ಬಿಡುಗಡೆ ಮಾಡಿದೆ. ಬಾಕಿ 7.47 ಟಿಎಂಸಿ ನೀರು ಬಿಡಲು ಕರ್ನಾಟಕಕ್ಕೆ ಸೂಚನೆ ನೀಡುವಂತೆ ತಮಿಳುನಾಡು ಪ್ರಾಧಿಕಾರದ ಅಧ್ಯಕ್ಷರಿಗೆ ಒತ್ತಾಯ ಮಾಡಿತು. ಅಲ್ಲದೇ ಜುಲೈ ತಿಂಗಳ ಕೋಟಾದಲ್ಲಿ 31.24 ಟಿಎಂಸಿ ನೀರು ಬಿಡಬೇಕಿದೆ. ತಮಿಳುನಾಡು ಒಟ್ಟು 40.43 ಟಿಎಂಸಿ ನೀರು ಹರಿಸಬೇಕೆಂದು ಮನವಿ ಸಲ್ಲಿಸಿತು.

ಆದರೆ ಕಾವೇರಿ ಕೊಳ್ಳದಲ್ಲಿ ಮುಂಗಾರು ಮಳೆ ಆಗಿಲ್ಲ. ಮಳೆ ಇಲ್ಲದ ಕಾರಣ ನೀರು ಬಿಡಲು ಸಾಧ್ಯವಿಲ್ಲ ಎಂದು ಪ್ರಾಧಿಕಾರಕ್ಕೆ ಕರ್ನಾಟಕ ಮನವರಿಕೆ ಮಾಡಿಕೊಟ್ಟಿತು. ರಾಜ್ಯದ ಪರ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಸಭೆಯಲ್ಲಿ ವಾದ ಮಂಡಿಸಿದರು.

ಸಭೆಯಲ್ಲಿ ಮೆಟ್ಟೂರು ಅಣೆಕಟ್ಟೆಯಿಂದ ಈವರೆಗೂ ನೀರು ಬಿಟ್ಟಿಲ್ಲ. ತಮ್ಮ ಪಾಲಿನ ನೀರನ್ನು ತಮಿಳುನಾಡಿಗೆ ಹರಿಸಿಲ್ಲ. ಮೆಟ್ಟೂರು ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ತಮಿಳುನಾಡಿನ ರೈತರಿಗೆ ಕಾವೇರಿ ನೀರೇ ಆಸರೆ. ಕುರುವೈ ಬೆಳೆಗಾಗಿ ಮೆಟ್ಟೂರು ಡ್ಯಾಂ ಅವಲಂಬಿಸಲಾಗಿದೆ. ಕಳೆದ ಸಭೆಯಲ್ಲಿ 9.19 ಟಿಎಂಸಿ ಹರಿಸಲು ಸೂಚನೆ ನೀಡಲಾಗಿತ್ತು. ಆದರೆ ಕರ್ನಾಟಕ ಪ್ರಾಧಿಕಾರದ ಸೂಚನೆಯನ್ನು ಪಾಲಿಸಿಲ್ಲ. ಜೂನ್ 30ರೊಳಗೆ ಸಂಪೂರ್ಣ ನೀರು ಬಿಡಬೇಕು ಎಂದು ಸಭೆಯಲ್ಲಿ ತಮಿಳುನಾಡು ಪರ ಅಧಿಕಾರಿಗಳು ವಾದ ಮಂಡಿಸಿದರು.

ಕಾವೇರಿ‌ ಕೊಳ್ಳದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಮಳೆ ಆಗಿಲ್ಲದಿರುವುದರಿಂದ ಜಲಾಶಯಗಳಲ್ಲಿ ನೀರಿಲ್ಲ. ರಾಜ್ಯದಲ್ಲೇ ಬೆಳೆಗಳಿಗೆ ಮತ್ತು ಕುಡಿಯಲು ನೀರಿಲ್ಲ. ನೀರಿಲ್ಲದೇ ಇರುವುದರಿಂದ ತಮಿಳುನಾಡಿಗೆ ಎಲ್ಲಿಂದ ನೀರು ಬಿಡಲು ಸಾಧ್ಯ. ಮುಂದೆ ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾದರೆ ನೀರು ಬಿಡಲಾಗುವುದು ಎಂದು ಕರ್ನಾಟಕದ ಪ್ರತಿನಿಧಿ ರಾಕೇಶ್​ ಸಿಂಗ್ ತಮ್ಮ ನಿಲುವು ಪ್ರಕಟಿಸಿದರು. ಎರಡೂ ಕಡೆಯ ವಾದವನ್ನು ಆಲಿಸಿದ ನಂತರ ಕರ್ನಾಟಕದ ಪರವಾಗಿ ತೀರ್ಪು ನೀಡುವ ಮೂಲಕ ಮೈತ್ರಿ ಸರ್ಕಾರಕ್ಕೆ ಬಂದಿದ್ದ ಗಂಡಾಂತರ ತಪ್ಪಿದಂತಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp