ರಾಮನಗರದಲ್ಲಿ ಎರಡು ಸಜೀವ ಬಾಂಬ್​ ಪತ್ತೆ: ಕಟ್ಟೆಚ್ಚರ ಘೋಷಣೆ

ಬಾಂಗ್ಲಾದೇಶದ ನಿಷೇಧಿತ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್(ಜೆಎಂಬಿ) ಸಂಘಟನೆಯ ಶಂಕಿತ ಉಗ್ರ ಎಸ್.ಕೆ. ಹಬಿಬುರ್ ರೆಹಮಾನ್....

Published: 26th June 2019 12:00 PM  |   Last Updated: 26th June 2019 07:05 AM   |  A+A-


Two live bombs found in Ramanagar

ಬಾಂಬ್ ಪತ್ತೆಯಾದ ಸ್ಥಳದಲ್ಲಿ ಅಧಿಕಾರಿಗಳು

Posted By : LSB LSB
Source : UNI
ರಾಮನಗರ: ಬಾಂಗ್ಲಾದೇಶದ ನಿಷೇಧಿತ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್(ಜೆಎಂಬಿ) ಸಂಘಟನೆಯ ಶಂಕಿತ ಉಗ್ರ ಎಸ್.ಕೆ. ಹಬಿಬುರ್ ರೆಹಮಾನ್ ಅಲಿಯಾಸ್ ಶೇಖ್ ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಂಧನವಾದ ಬೆನ್ನಲ್ಲೇ ರಾಮನಗರದಲ್ಲಿ ಎರಡು ಸಜೀವ ಬಾಂಬ್​ಗಳು ಬುಧವಾರ ಪತ್ತೆಯಾಗಿವೆ. ಈ ಮೂಲಕ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ರಾಮನಗರದ ಟಿಪ್ಪು ನಗರದ 23ನೇ ವಾರ್ಡ್​ನ ಸೇತುವೆ ಬಳಿ ಎನ್​ಐಎ, ಗುಪ್ತಚರ ದಳ ಮತ್ತು ಪೊಲೀಸರು ನಡೆಸಿದ ಶೋಧ ಕಾರ್ಯದಲ್ಲಿ ಎರಡು ಸಜೀವ ಬಾಂಬ್​ಗಳು ಪತ್ತೆಯಾಗಿವೆ. ಈ ಬೆಳವಣಿಗೆಯ ನಂತರ ಸಾರ್ವಜನಿಕರಲ್ಲಿ ಆತಂಕ‌ ಸೃಷ್ಠಿಯಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಮನಗರದಲ್ಲಿ ಕಟ್ಟೆಚ್ಚರ​ ಘೋಷಿಸಲಾಗಿದೆ. 

ಬಾಂಬ್ ಪತ್ತೆಯಾದ ಸುತ್ತಮುತ್ತಲ್ಲಿನ ಸ್ಥಳಗಳಲ್ಲಿ ಮತ್ತಷ್ಟು ಬಾಂಬ್​ ಇಟ್ಟಿರಬಹುದು ಎಂದು ಶಂಕಿಸಿ ಗುಪ್ತಚರ ದಳ ತೀವ್ರ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದೆ.

ಎನ್​ಐಎ ತಂಡ ಬಂಧಿತ ಶಂಕಿತ ಉಗ್ರ ಹಬಿಬುರ್​ ರೆಹಮಾನ್​ (30) ಅನ್ನು ವಿಚಾರಣೆಗೆ ಒಳಪಡಿಸಿದಾಗ ಆತ ರಾಮನಗರದ ಬಳಿ ಬಾಂಬ್​ ಇಟ್ಟಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಎನ್​ಐಎ, ಗುಪ್ತಚರ ದಳ, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು.

ಶಾಸಕಿ ಅನಿತಾ ಕುಮಾರಸ್ವಾಮಿ ಚರ್ಚೆ
ರಾಮನಗರದಲ್ಲಿ ಬಾಂಬ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ದೂರವಾಣಿ ಮೂಲಕ ಪೊಲೀಸ್ ವರಿಷ್ಠಾಧಿಕಾರಿ ರಾಥೋಡ್ ಅವರೊಂದಿಗೆ ಮಾತನಾಡಿ, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. 

ಅಪರಿಚಿತ ವ್ಯಕ್ತಿಗಳ ಮೇಲೆ ನಿಗಾವಹಿಸಿ, ಸಂಶಯ ಬಂದಲ್ಲಿ ತಕ್ಷಣವೇ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಿ ಹಾಗೂ ರಾಮನಗರದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಅವರು ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.

ಪ್ರತಿ ವಾರ್ಡ್ ಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಮತ್ತು ದುಷ್ಕರ್ಮಿಗಳಿಗೆ ಸಹಾಯ ಮಾಡುತ್ತಿರುವವರ ಕುರಿತು ಕೂಲಂಕುಶವಾಗಿ ತನಿಖೆ ನಡೆಸಿ, ಕಠಿಣ ಕ್ರಮ ಜರುಗಿಸುವಂತೆ ಅನೀತಾ ಕುಮಾರಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp