ಮಕ್ಕಳಿಗೆ ಸರ್ಕಾರದ ವಿದ್ಯಾರ್ಥಿವೇತನ ತಲುಪಿಸಲು ಅಂಚೆ ಇಲಾಖೆ ನೆರವು!

ಪೂರ್ವ ಮೆಟ್ರಿಕ್ ಹಂತದ ಸುಮಾರು 4.33 ಲಕ್ಷ ಮಕ್ಕಳಿಗೆ ವಿದ್ಯಾರ್ಥಿವೇತನ ದೊರಕುತ್ತಿದ್ದು ಅದನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪೂರ್ವ ಮೆಟ್ರಿಕ್ ಹಂತದ ಸುಮಾರು 4.33 ಲಕ್ಷ ಮಕ್ಕಳಿಗೆ ವಿದ್ಯಾರ್ಥಿವೇತನ ದೊರಕುತ್ತಿದ್ದು ಅದನ್ನು ಫಲಾನುಭವಿಗಳಿಗೆ ಸರಿಯಾಗಿ ಮತ್ತು ಸುಲಭವಾಗಿ ತಲುಪಿಸಲು ರಾಜ್ಯ ಸರ್ಕಾರ ಅಂಚೆ ಇಲಾಖೆಯ ಮೊರೆ ಹೋಗಿದೆ. ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡದಿರುವುದರಿಂದ ಹಣ ಅವರಿಗೆ ದೊರಕುತ್ತಿಲ್ಲ.
ರಾಜ್ಯ ಸಾಮಾಜಿಕ ಕಲ್ಯಾಣ ಇಲಾಖೆ ಪ್ರತಿವರ್ಷ ಸುಮಾರು 44 ಲಕ್ಷ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ವರ್ಷಕ್ಕೆ 850 ರೂಪಾಯಿಗಳಿಂದ 2,250 ರೂಪಾಯಿಗಳವರೆಗೆ ವಿದ್ಯಾರ್ಥಿವೇತನ ನೀಡುತ್ತದೆ. ಆದರೆ ಈ ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಗೆ ಜೋಡಣೆ ಮಾಡದಿರುವುದರಿಂದ ನೇರ ನಗದು ವರ್ಗಾವಣೆ ಫಲ ಅವರಿಗೆ ತಲುಪುತ್ತಿಲ್ಲ ಎನ್ನುತ್ತಾರೆ ಬೆಂಗಳೂರು ಅಂಚೆ ಇಲಾಖೆ ವೃತ್ತದ ಮಹಾ ನಿರ್ದೇಶಕ ಕರ್ನಲ್ ಅರವಿಂದ್ ವರ್ಮ.
ಆರರಿಂದ 15 ವರ್ಷದೊಳಗಿನ ಇಂತಹ ವಿದ್ಯಾರ್ಥಿವೇತನ ಫಲಾನುಭವಿ ಮಕ್ಕಳಿಗೆ ಹಣ ತಲುಪಿಸಲು ರಾಜ್ಯ ಸರ್ಕಾರ ಇದೀಗ ಅಂಚೆ ಇಲಾಖೆಯ ಮೊರೆ ಹೋಗಿದೆ. ಕಳೆದೊಂದು ವಾರದಿಂದ ನಮ್ಮ ಸಿಬ್ಬಂದಿ ಶಾಲೆಗಳಿಗೆ ಹೋಗಿ ಅಂಚೆ ಕಚೇರಿಯಲ್ಲಿ ಅವರು ಖಾತೆಗಳನ್ನು ತೆರೆಯಲು ಸಹಾಯ ಮಾಡುತ್ತಿದ್ದಾರೆ. ಅವರ ಆಧಾರ್ ಕಾರ್ಡು ಪ್ರತಿ ಮತ್ತು ಜನ್ಮ ದಿನಾಂಕ ದೃಢೀಕರಣ ನಮಗೆ ಬೇಕಾಗಿದೆ ಎಂದರು.
ಈ ವಿದ್ಯಾರ್ಥಿಗಳ ಖಾತೆಗಳನ್ನು ಶೂನ್ಯ ಖಾತೆಯಿಂದ ಆರಂಭಿಸಲಾಗುತ್ತದೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೇ ನಾವು 32 ಸಾವಿರ ಪೂರ್ವ ಮೆಟ್ರಿಕ್ ವಿದ್ಯಾರ್ಥಿಗಳ ಖಾತೆಗಳನ್ನು ತೆರೆಯಬೇಕಿದೆ. ಕಳೆದ ಆರು ದಿನಗಳಲ್ಲಿ ಸುಮಾರು ಎರಡೂವರೆ ಸಾವಿರ ಖಾತೆಗಳನ್ನು ತೆರೆದಿದ್ದೇವೆ ಎಂದು ಹೇಳಿದರು.
ಸಣ್ಣ ವಯಸ್ಸಿನಲ್ಲಿಯೇ ಮಕ್ಕಳು ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು, ಅವರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆ ಈ ಕ್ರಮ ಕೈಗೊಂಡಿದೆ. ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಜೊತೆ ಸೇರಿಕೊಂಡು ಅಂಚೆ ಕಚೇರಿಯಲ್ಲಿ ಮಕ್ಕಳ ಖಾತೆ ತೆರೆಯುತ್ತೇವೆ. ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಖಾತೆಯನ್ನು 10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮತ್ತು ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅಕೌಂಟ್ ಗಳನ್ನು 10 ವರ್ಷಕ್ಕಿಂತ ಮೇಲಿನ ಮಕ್ಕಳ ಹೆಸರಿನಲ್ಲಿ ತೆರೆಯುತ್ತೇವೆ ಎಂದರು ಕರ್ನಾಟಕ ವೃತ್ತದ ಮುಖ್ಯ ಅಂಚೆ ಪ್ರಧಾನ ವ್ಯವಸ್ಥಾಪಕ ಚಾರ್ಲ್ಸ್ ಲೊಬೊ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com