ಸಾರಿಗೆ ನೌಕರರಿಂದ 'ಬೆಂಗಳೂರು ಚಲೋ': ಸಮಸ್ಯೆ ಬಗ್ಗೆ ಸಿಎಂ ಜೊತೆ ಚರ್ಚೆ- ಪರಮೇಶ್ವರ್‌

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್ ವರ್ಕರ್ಸ್‌ ಫೆಡರೇಷನ್ ನೇತೃತ್ವದಲ್ಲಿ ಸಾರಿಗೆ ನೌಕರರು ಇಂದು "ಬೆಂಗಳೂರು ಚಲೋ" ನಡೆಸಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್ ವರ್ಕರ್ಸ್‌ ಫೆಡರೇಷನ್ ನೇತೃತ್ವದಲ್ಲಿ ಸಾರಿಗೆ ನೌಕರರು  ಇಂದು "ಬೆಂಗಳೂರು ಚಲೋ" ನಡೆಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಚ್ ವಿ ಅನಂತಸುಬ್ಬರಾವ್, ಅಧ್ಯಕ್ಷ ಎಂ ಸಿ ನರಸಿಂಹನ್, ಗೌರವಾಧ್ಯಕ್ಷ ಡಾ ಸಿದ್ದನಗೌಡ ಪಾಟೀಲ್ ಅವರ ನೇತೃತ್ವದಲ್ಲಿ ನೂರಾರು ನೌಕರರು ಲಾಲ್‌ಭಾಗ್‌ ಮುಖ್ಯದ್ವಾರದಿಂದ ಶಾಂತಿನಗರದ ಸಂಸ್ಥೆಯ ಕೇಂದ್ರ ಕಚೇರಿವರೆಗೆ ಜಾಥಾ ನಡೆಸಿದರು. ಇಂದು ಸಂಜೆಯವರೆಗೆ ಪ್ರತಿಭಟನೆ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ ಸಂಘಟನೆಗಳ ಮುಖಂಡರು, ಸದಸ್ಯರು ಆಗಮಿಸಿದ್ದಾರೆ.
ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಅವರು ಸಾರಿಗೆ ನೌಕರರ ಬೇಡಿಕೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಅವರನ್ನು ಬದಲಾಯಿಸಿ ಬೇರೆ ಸಚಿವರನ್ನು ನೇಮಕ ಮಾಡಬೇಕು ಎಂದು ಪ್ರತಿಭಟನಕಾರರು ಘೋಷಣೆ ಕೂಗಿದರು.
ಅನಂತಸುಬ್ಬರಾವ್ ಮಾತನಾಡಿ, ಸಾಮಾಜಿಕ ಹೊಣೆಗಾರಿಕೆಗಳ ಸಂಪೂರ್ಣ ವೆಚ್ಚವನ್ನು ಸರ್ಕಾರ ಸಾರಿಗೆ ನಿಗಮಗಳಿಗೆ ಕೊಡಬೇಕು, ವಿದ್ಯಾರ್ಥಿಗಳ ರಿಯಾಯಿತಿ ಬಸ್‌ ಪಾಸಿನ ಬಾಬ್ತಿನಲ್ಲಿ ಬಾಕಿ ಇರುವ ಹಣವನ್ನು ಸಾರಿಗೆ ನಿಗಮಗಳಿಗೆ ಸರ್ಕಾರ ತಕ್ಷಣ ಪಾವತಿಸಬೇಕು ಎಂದು ಒತ್ತಾಯಿಸಿದರು.
ಸಾರಿಗೆ ನಿಗಮಗಳು ಖರೀದಿಸುವ ಡೀಸೆಲ್ ಮೇಲೆ ರಾಜ್ಯ ಸರ್ಕಾರ ವಿಧಿಸುವ ಸುಂಕವನ್ನು ಶೇಕಡಾ 50ರಷ್ಟು ಕಡಿಮೆ ಮಾಡಬೇಕು, ನಾಲ್ಕೂ ಸಾರಿಗೆ ನಿಗಮಗಳನ್ನು ಒಂದು ಮಾಡಬೇಕು ಎಂದು ಒತ್ತಾಯಿಸಿದ ಅವರು, ನಾಲ್ಕೂ ಸಾರಿಗೆ ನಿಗಮಗಳ ವಾಹನಗಳಿಗೆ ಹೆದ್ದಾರಿ ಸುಂಕ ರದ್ದು ಪಡಿಸಬೇಕು,  ನಿಗಮಗಳ ನೌಕರರ ವೇತನವನ್ನು ಸರ್ಕಾರವೇ ಪಾವತಿಸಬೇಕು, ನಾಲ್ಕೂ ಸಾರಿಗೆ ನಿಗಮಗಳ ವಾಹನಗಳಿಗೆ ಮೋಟಾರ್ ವಾಹನ ತೆರಿಗೆಯನ್ನು ರದ್ದುಪಡಿಸಬೇಕು,  4 ನಿಗಮಗಳಿಗೆ ವಾರ್ಷಿಕ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಮಹಾನಗರ ಪಾಲಿಕೆಗಳು ಮತ್ತು ನಗರ ಪಾಲಿಕೆಗಳು ಮತ್ತಿತರ ಸ್ಥಳೀಯ ಸಂಸ್ಥೆಗಳು ಸಾರಿಗೆ ನಿಗಮಗಳ ನಗರ ಸಾರಿಗೆ ವ್ಯವಸ್ಥೆಗೆ ಸೂಕ್ತವಾದ ಅನುದಾನ ನೀಡಬೇಕು, ವಿಕಲಚೇತನರ ಕಾಯ್ದೆ 1995ರ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸಾರಿಗೆ ನಿಗಮಗಳಿಗೆ ಅನುದಾನ ನೀಡಬೇಕು ಎಂದು ಅವರು ಆಗ್ರಹಿಸಿದರು.
ಕಳೆದ ಹತ್ತಾರು ವರ್ಷಗಳಿಂದ ಸಾರಿಗೆ ನಿಗಮಗಳಲ್ಲಿ ಕಾರ್ಯಸ್ಥಳದಲ್ಲಿ ಹಿಂಸೆ, ಕಿರುಕುಳ ತಾಳಲಾರದೆ ಹತಾಶರಾಗಿ ಆತ್ಮಹತ್ಯೆ ಪ್ರಯತ್ನಪಟ್ಟು ಅನೇಕ ನೌಕರರು ತಮ್ಮ ಬದುಕನ್ನು ಕೊನೆಗಾಣಿಸಿಕೊಂಡಿದ್ದಾರೆ. 
ಈ ಪ್ರಯತ್ನದಲ್ಲಿ ಆಕಸ್ಮಿಕವಾಗಿ ಬದುಕಿ ಉಳಿದರೆ ಅವರ ವಿರುದ್ಧ ಶಿಸ್ತುಕ್ರಮದ ಹೆಸರಿನಲ್ಲಿ ಆರ್ಥಿಕ ನಷ್ಟದ ಜೊತೆಗೆ ಮತ್ತಷ್ಟು ಹಿಂಸೆ ಕಿರುಕುಳ ನೀಡಲಾಗುತ್ತಿದೆ. ಇಂತಹ ಅಮಾನುಷ ಪರಿಸ್ಥಿತಿಯನ್ನು ಆಡಳಿತ ವರ್ಗ ತಪ್ಪಿಸಬೇಕು, ಅಂತಹ ಪ್ರಕರಣ ದಾಖಲಾದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಆತ್ಮಹತ್ಯೆಗೆ ಬಲಿಯಾದ ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು, ಬದುಕುಳಿದ ನೌಕರನ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸಬಾರದು ಎಂಬುದು ನೌಕರರ ಪ್ರಮುಖ ಬೇಡಿಕೆಯಾಗಿದೆ.
ನಾಲ್ಕೂ ಸಾರಿಗೆ ನಿಗಮಗಳಲ್ಲೂ ಕೈಗಾರಿಕಾ ಬಾಂಧವ್ಯ ಸಂಪೂರ್ಣವಾಗಿ ಕುಸಿದಿದೆ. ಕೈಗಾರಿಕಾ ಬಾಂಧವ್ಯವನ್ನು ಸರಿಪಡಿಸುವ ದಿಕ್ಕಿನಲ್ಲಿ ಆಡಳಿತ ವರ್ಗ ಯಾವುದೇ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡಿಲ್ಲ.  1999, ಫೆಬ್ರವರಿ 18ರಂದು ಸುಪ್ರೀಂಕೋರ್ಟ್‌ ಫೆಡರೇಷನ್ ಗೆ ಮಾನ್ಯತೆ ಇದೆ ಎಂದು ತಿಳಿಸಿದ್ದರೂ ಆಡಳಿತ ವರ್ಗ ಅದಕ್ಕೆ ಕಿಂಚಿತ್ತೂ ಬೆಲೆ ಕೊಟ್ಟಿಲ್ಲ. ಯಾವುದೇ ಸಂಘಕ್ಕೂಮಾನ್ಯತೆ ಇಲ್ಲ ಹಾಗೂ ನಾವು ಯಾರ ಜೊತೆ ಬೇಕಾದರೂ ಮಾತನಾಡುತ್ತೇವೆ ಎಂಬ ಧೋರಣೆಯನ್ನು ಅದು ತಾಳಿದೆ. 2012 ಸೆಪ್ಟಂಬರ್ ಮತ್ತು 2015 ಜುಲೈ ಮುಷ್ಕರಗಳ ಸಂದರ್ಭಗಳಲ್ಲಿ ಮಾತುಕತೆಯಾದರೂ ಅದು ಕೈಗಾರಿಕಾ ವಿವಾದ ಕಾಯ್ದೆಯಡಿಯಲ್ಲಿ ಕೈಗಾರಿಕಾ ಒಪ್ಪಂದವಾಗಿಲ್ಲ.ಈಗಾಗಲೇ ಚಾಲ್ತಿಯಲ್ಲಿರುವಂತೆ, ಅಪಘಾತವಾದಾಗ ಚಾಲಕರಿಗೆ ಜಾಮೀನು ಕೊಡುವ ವಿಷಯದಲ್ಲಿ, ಐಒಡಿ ಕೊಡುವ ವಿಷಯದಲ್ಲಿ, ಅಮಾನತು ರದ್ದು ಮಾಡುವ ವಿಷಯದಲ್ಲಿ ಕೈಗಾರಿಕಾ ಒಪ್ಪಂದಗಳ ಉಲ್ಲಂಘನೆಯಾಗುತ್ತಿವೆ. ಕೇಂದ್ರ ಮಟ್ಟದಲ್ಲಾಗಲೀ, ವಿಭಾಗ ಮಟ್ಟದಲ್ಲಾಗಲಿ ಅಥವಾ ಘಟಕ ಮಟ್ಟದಲ್ಲಾಗಲೀ ಮಾತುಕತೆ ನಡೆಯುತ್ತಿಲ್ಲ. ಇದರಿಂದ ಸಮಸ್ಯೆ ಹೆಚ್ಚಾಗಿ ಉಳಿದುಕೊಂಡಿದೆ. ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸುವ ನಂಬಿಕೆ ಆಡಳಿತ ವರ್ಗಕ್ಕಿಲ್ಲ. ಇಲ್ಲಿರುವ ಅಧಿಕಾರಿಗಳಿಗೆ ಕೈಗಾರಿಕಾ ಬಾಂಧವ್ಯದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಅವರು ಆರೋಪಿಸಿದರು.
ಸಾರಿಗೆ ನೌಕರರ ಪ್ರತಿಭಟನೆಯಿಂದಾಗಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗಲಿದೆ ಎಂದು ಹೇಳಲಾಗಿತ್ತಾದರೂ ಇಂದು ಎಲ್ಲಾ ವಿಭಾಗಗಳ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ.
ಸಾರಿಗೆ ನೌಕರರ ಸಮಸ್ಯೆ ಬಗ್ಗೆ ಸಿಎಂ ಜೊತೆ ಚರ್ಚೆ: ಪರಮೇಶ್ವರ್‌
ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ನ ನಿಯೋಗ ಇಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಸದಾಶಿವನಗರ ಗೃಹ ಕಚೇರಿಗೆ ಆಗಮಿಸಿ, ವಿವಿಧ ಬೇಡಿಕೆಗಳ ಈಡೇರಿಸುವಂತೆ  ಮನವಿ ಪತ್ರ ಸಲ್ಲಿಸಿತು.
ಬಳಿಕ ಮಾತನಾಡಿದ ಪರಮೇಶ್ವರ್, ಫೆಡರೇಷನ್‌ನ ಪದಾಧಿಕಾರಿಗಳು ಇಂದು ವಿವಿಧ ಬೇಡಿಕೆ ಈಡೇರಿಸಲು ಸಾರಿಗೆ ನೌಕರರ ಬೆಂಗಳೂರು ಚಲೋ ಕಾರ್ಯಕ್ರಮ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಬಸ್‌ ಪಾಸ್‌ ವೆಚ್ಚದ ಬಾಬ್ತು ಭರಿಸುವುದು, ನಾಲ್ಕು ನಿಗಮಗಳ ಬದಲು ಒಂದೇ ನಿಗಮ ಮಾಡುವುದು ಸೇರಿದಂತೆ ಅನೇಕ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ಜೊತೆ ಚರ್ಚಿಸಲಾಗುವುದು. ಅಲ್ಲದೆ, ಸಾರಿಗೆ ಅಧಿಕಾರಿಗಳೊಂದಿಗೆ ಸಭೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com