ಬೆಂಗಳೂರು: ತಂಗಿಯಿಂದಲೇ ಅಣ್ಣನ ಹತ್ಯೆ; ಮಗಳ ಮದುವೆ ಹಿಂದಿತ್ತು ಕೊಲೆಯ ರಹಸ್ಯ!

ತನ್ನ ಇಚ್ಛೆಗೆ ವಿರುದ್ಧವಾಗಿ ಮಗಳ ಮದುವೆ ಮಾಡಿಸಲು ನಿರ್ದರಿಸಿದ್ದ ಸ್ವಂತ ಅಣ್ಣನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ತಂಗಿ ಸೇರಿದಂತೆ ನಾಲ್ವರು ಆರೋಪಿಗಳನ್ನು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ತನ್ನ ಇಚ್ಛೆಗೆ ವಿರುದ್ಧವಾಗಿ ಮಗಳ ಮದುವೆ ಮಾಡಿಸಲು ನಿರ್ದರಿಸಿದ್ದ ಸ್ವಂತ ಅಣ್ಣನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ತಂಗಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. 
ಮಾರುತಿನಗರ ನಿವಾಸಿ ಗೌರಮ್ಮ(45), ರಾಯಚೂರು ಜಿಲ್ಲೆ ಸಿಂದನೂರು ಗ್ರಾಮದ ಮುಮ್ತಾಜ್‌ (28), ಗಂಗಾವತಿಯ ಮುನ್ನಾ(24), ಪಶ್ಚಿಮ ಬಂಗಾಳ ಮೂಲದ ಆರ್ಜು(19) ಹಾಗೂ ಸಾಕೀಬ್‌(20) ಬಂಧಿತರು. ಗೌರಮ್ಮನ ಸಹೋದರ, ಪೇಂಟರ್‌ ರಾಜಶೇಖರ್‌ ಕೊಲೆಯಾದ ದುರ್ದೈವಿ.
ಗೌರಮ್ಮ, ತನ್ನ ಮಗಳ ಜೊತೆ ವಾಸವಿದ್ದಳು. ಆಕೆಗೆ ಮೂವರು ಸಹೋದರರು ಮತ್ತು ನಾಲ್ವರು ಸಹೋದರಿಯರು ಇದ್ದಾರೆ. ಈ ಎಲ್ಲರೂ ಮಾರುತಿನಗರದಲ್ಲೇ ಪ್ರತ್ಯೇಕವಾಗಿ ನೆಲೆಸಿದ್ದಾರೆ.
ರಾಜಶೇಖರ್ ಸ್ನೇಹಿತನನ್ನು ಗೌರಮ್ಮನ ಮಗಳು ಇಷ್ಟ ಪಟ್ಟಿದ್ದಳು, ಆದರೆ ಆತನ ಜೊತೆ ಮದುವೆ ಮಾಡಿಸುವುದು ಗೌರಮ್ಮನಿಗೆ ಇಷ್ಟ ಇರಲಿಲ್ಲ, ಆದರೆ ಗೌರಮ್ಮನ ಮಗಳು ಆತನ ಜೊತೆಗೆ ಮದುವೆ ಮಾಡಿಸಬೇಕೆಂದು ತನ್ನ ಸೋದರ ಮಾವ ರಾಜಶೇಖರ್ ಬಳಿ ಕೇಳಿಕೊಂಡಿದ್ದಳು, ಇದಕ್ಕೆ ಒಪ್ಪಿಕೊಂಡ ಆತ ಆಕೆಯನ್ನು ತನ್ನ ಮತ್ತೊಬ್ಬ ಸಹೋದರಿ ಮನೆಯಲ್ಲಿರಿಸಿ ಮದುವೆ ಸಿದ್ಧತೆ ಮಾಡಿದ್ದನು.
ತನ್ನ ವಿರೋಧದ ನಡುವೆ ಮದುವೆ ಮಾಡುತ್ತಿರುವುದನ್ನು ತಡೆಯಲು ಸಹೋದರ ರಾಜಶೇಖರ್‌ರನ್ನು ಕೊಲೆ ಮಾಡಲು ಗೌರಮ್ಮ ಸಂಚು ರೂಪಿಸಿದ್ದಳು. ಅದಕ್ಕಾಗಿ ಮನೆಯ ಎದುರಿನ ಮನೆಯಲ್ಲಿ ನೆಲೆಸಿದ್ದ ಮುಮ್ತಾಜ್‌ಳ ನೆರವು ಕೇಳಿದ್ದಳು. ಅದಕ್ಕೆ 3 ಲಕ್ಷ ರೂ. ಆಗುತ್ತದೆ ಎಂದ ಮುಮ್ತಾಜ್‌, ಗಾರೆ ಕೆಲಸಗಾರರನ್ನು ಸಿದ್ದಪಡಿಸಿದ್ದಳು. ಸಹೋದರನ ಕೊಲೆಗೆ ಗೌರಮ್ಮ 25 ಸಾವಿರ ರೂ. ಮುಂಗಡ ಕೊಟ್ಟಿದ್ದಳು. 
ಮನೆ ಪೇಟಿಂಗ್‌ ಕೆಲಸವಿದೆ ಎಂದು ಜೂ.22ರಂದು ರಾಜಶೇಖರ್‌ನನ್ನು ವಿಶ್ವೇಶ್ವರಯ್ಯ ಲೇಔಟ್‌ಗೆ ಮುಮ್ತಾಜ್‌ ಕರೆಸಿಕೊಂಡಿದ್ದಳು. ನಂತರ ಅಲ್ಲೇ ಇದ್ದ ಪಾಳು ಮನೆಗೆ ರಾಜಶೇಖರ್‌ನನ್ನು ಕರೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು. 
ವಿಚಾರಣೆ ನಡೆಸಿದಾಗ ಗೌರಮ್ಮನ ಮಗಳ ಮದುವೆ ವಿಚಾರಕ್ಕೆ ಜಗಳ ನಡೆದಿರುವುದು ಗೊತ್ತಾಗಿದೆ. ಅದೇ ವೇಳೆ ಮುಮ್ತಾಜ್‌, ಕಾಣೆಯಾಗಿದ್ದು ಅನುಮಾನ ಮೂಡಿಸಿತ್ತು. ಈ ಸುಳಿವು ಆಧರಿಸಿ ತನಿಖೆ ನಡೆಸಿದಾಗ, ಕೊಲೆಗೆ ಒಂದು ದಿನ ಮೊದಲು ಮುಮ್ತಾಜ್‌ ಹೊಸ ಸಿಮ್‌ವೊಂದನ್ನು ಖರೀದಿಸಿರುವುದು ಬೆಳಕಿಗೆ ಬಂದಿದೆ. ಮೊಬೈಲ್‌ ನಂಬರ್‌ ಟವರ್‌ ಲೋಕೇಶನ್‌ ಆಧರಿಸಿ ಕೆಂಗೇರಿ ಸಮೀಪದ ಡಾಬಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com