ಶಾಲೆಗೆ ವಿದ್ಯುತ್, ಕುಡಿಯುವ ನೀರು ಒದಗಿಸಿ ಮಾದರಿಯಾದ ರಾಯಚೂರಿನ ಸರ್ಕಾರಿ ಶಾಲೆ ಶಿಕ್ಷಕ!

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗುಣಮಟ್ಟವನ್ನು ಸುಧಾರಿಸಲು ಇಲ್ಲೊಬ್ಬ ಶಿಕ್ಷಕರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕಂಪ್ಯೂಟರ್ ...
ಮಾದರಿ ಶಿಕ್ಷಕ ಮೋಹನ್
ಮಾದರಿ ಶಿಕ್ಷಕ ಮೋಹನ್
ರಾಯಚೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗುಣಮಟ್ಟವನ್ನು ಸುಧಾರಿಸಲು ಇಲ್ಲೊಬ್ಬ ಶಿಕ್ಷಕರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕಂಪ್ಯೂಟರ್ ಪ್ರಯೋಗಾಲಯ, ವಿದ್ಯುತ್, ನೀರಿನ ಸೌಲಭ್ಯ, ಗಿಡ ನೆಡುವಿಕೆ, ಗುಡಿಸಲುಗಳ ನಿರ್ಮಾಣ ಇತ್ಯಾದಿಯಿಂದಾಗಿ ಈ ಶಾಲೆ ಯಾವುದೇ ಖಾಸಗಿ ಶಾಲೆಗೆ ಕಡಿಮೆಯಿಲ್ಲದಂತೆ ಕಾಣಿಸುತ್ತದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕೂಡ ಕೊರತೆಯಿಲ್ಲ ಎನ್ನುವುದು ಇನ್ನೊಂದು ವಿಚಾರ.
ಶಾಲೆಯಲ್ಲಿ ಆರಂಭದಲ್ಲಿ ಕುಡಿಯುವ ನೀರು ಮತ್ತು ಶುದ್ಧ ಶೌಚಾಲಯಕ್ಕೆ ಕೊರತೆಯಿತ್ತು. ಹೀಗಾಗಿ ಮಕ್ಕಳು ಶಾಲೆಗೆ ಸರಿಯಾಗಿ ಹಾಜರಾತಿ ಹಾಕುತ್ತಿರಲಿಲ್ಲವಂತೆ. ಇದನ್ನು ಕಂಡು ಶಿಕ್ಷಕ ಮೋಹನ್ ಕುಮಾರ್ ಇದಕ್ಕೆ ಏನಾದರೂ ಪರಿಹಾರ ಕಂಡುಹಿಡಿದು ಶಾಲೆಗೆ ಸರಿಯಾಗಿ ಮಕ್ಕಳು ಬರುವಂತೆ ಮಾಡಬೇಕೆಂದು ಯೋಚಿಸುತ್ತಿದ್ದರು.
ಅದರಂತೆ ಕಾರ್ಯಪ್ರವೃತ್ತರಾದರು. ಇವರು ಕೈಗೊಂಡ ಶಾಲೆಯ ಸುಧಾರಣೆ ಕೆಲಸವೇ ಬೇರೆಯವರಿಗೆ ಮಾದರಿ. ಈ ಕುತೂಹಲಕರ ಸಂಗತಿ ಇಲ್ಲಿದೆ ನೋಡಿ:
ಮೋಹನ್ ಕುಮಾರ್ ಅವರ ಪತ್ನಿ ಕೂಡ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಕೆಲ ವರ್ಷಗಳ ಹಿಂದೆ ರಾಯಚೂರಿಗೆ ವರ್ಗವಾದರು. ರಾಯಚೂರಿನ ಕೊರವಿಯಲ್ಲಿ ಮೋಹನ್ ಅವರು ಕೆಲಸ ಮಾಡುವ ಮುನ್ನ ಮೈಸೂರು ಜಿಲ್ಲೆಯ ಪೆರಿಯಾಪಟ್ನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಪತಿ, ಪತ್ನಿ ಬೇರೆ ಬೇರೆ ಊರಿನಲ್ಲಿದ್ದರಿಂದ ಪ್ರಯಾಣಿಸುವುದು ಕಷ್ಟವೆಂದು ಮೋಹನ್ ರಾಯಚೂರಿಗೆ 2013ರಲ್ಲಿ ವರ್ಗ ಮಾಡಿಸಿಕೊಂಡರು. ಶಾಲೆಯ ಪರಿಸ್ಥಿತಿ ಕಂಡು ಏನಾದರೂ ಬದಲಾವಣೆ ತರಬೇಕೆಂದು ಯೋಚಿಸಿದರು.
ಬಹುರಾಷ್ಟ್ರೀಯ ಕಂಪೆನಿಗಳಿಂದ ಸಹಾಯ ಪಡೆದು ಶಾಲೆಗೆ ಕಂಪ್ಯೂಟರ್ ಪ್ರಯೋಗಾಲಯ ನಿರ್ಮಸಿಕೊಂಡರು. ಆದರೆ ಶಾಲೆಯಲ್ಲಿ ಸರಿಯಾಗಿ ವಿದ್ಯುತ್ ವ್ಯವಸ್ಥೆಯಿಲ್ಲದಿದ್ದರೆ ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತದೆ, ಹೀಗಾಗಿ ವಿದ್ಯುತ್ ಸಂಪರ್ಕ ತರಿಸಿಕೊಳ್ಳಲು ಮೋಹನ್ ಸರಿಯಾಗಿ ಎರಡು ವರ್ಷ ಸಾಹಸ ಮಾಡಿದ್ದಾರೆ.
ಈ ಶಾಲೆಯಲ್ಲಿ ಎರಡು ಕಟ್ಟಡಗಳಿದ್ದವು. ಪ್ರೈಮರಿ ಶಾಲೆ ಗ್ರಾಮದೊಳಗಿದ್ದರೆ ಮಾಧ್ಯಮಿಕ ಪ್ರಾಥಮಿಕ ಶಾಲೆ ಹೊರವಲಯದಲ್ಲಿದೆ. ಪ್ರೈಮರಿ ಶಾಲೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಿದ್ದವು, ಆದರೆ ಮಾಧ್ಯಮಿಕ ಶಾಲೆಯಲ್ಲಿ ಕೊರತೆ. 2016ರಲ್ಲಿ ಈ ಕುರಿತು ಮೋಹನ್ ಸಂಬಂಧಪಟ್ಟ ರಾಜಕಾರಣಿಗಳಿಗೆ, ಸ್ಥಳೀಯ ಶಿಕ್ಷಣಾಧಿಕಾರಿಗಳು ಮತ್ತು ಇತರ ಸರ್ಕಾರಿ ಅಧಿಕಾರಿಗಳಿಗೆ ಪತ್ರ ಬರೆದರು.
ಶಾಲೆಗೆ ವಿದ್ಯುತ್ ಒದಗಿಸಲು ಕರ್ನಾಟಕ ವಿದ್ಯುತ್ ನಿಗಮವನ್ನು ಸಂಪರ್ಕಿಸಿದಾಗ ಶಾಲೆಯ ಸುತ್ತ 8 ಎಲೆಕ್ಟ್ರಿಕ್ ಪೋಲ್ ಗಳನ್ನು ಸ್ಥಾಪಿಸಬೇಕೆಂದು ಅಧಿಕಾರಿಗಳು ಹೇಳಿದ್ದರು. ಹಣದ ಕೊರತೆಯಿರುವುದರಿಂದ ಮೂರು ಎಲೆಕ್ಟ್ರಿಕ್ ಪೋಲ್ ಗಳನ್ನು ಮಾತ್ರ ನೀಡಲು ಸಾಧ್ಯವೆಂದಿದ್ದರು. ಉಳಿದ ವಿದ್ಯುತ್ ಪೋಲ್ ಗಳಿಗೆ ಮೋಹನ್ ತಮ್ಮ ಸ್ವಂತ ಹಣವನ್ನು ಬಳಸಲು ಮುಂದಾದರು. ವಿದ್ಯುತ್ ಸಂಪರ್ಕ ಬಂದಾಗ ಮಕ್ಕಳ ಖುಷಿ ಹೇಳತೀರದು. ಗ್ರಾಮಸ್ಥರು ಮತ್ತು ಪೋಷಕರು ಕೂಡ ಖುಷಿಯಾದರು.
ಶಾಲೆಗೆ ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛ ಶೌಚಾಲಯ ವ್ಯವಸ್ಥೆ ಒದಗಿಸುವುದು ಶಿಕ್ಷಕ ಮೋಹನ್ ಕುಮಾರ್ ಅವರ ಮುಂದಿನ ಸವಾಲಾಗಿತ್ತು. ಮಕ್ಕಳು ಮಧ್ಯಾಹ್ನ ಭೋಜನ ಮಾಡುವ ಮುನ್ನ ಶೌಚಾಲಯ, ನೀರಿನ ವ್ಯವಸ್ಥೆ ಬೇಕಾಗುತ್ತದೆ. ಪ್ರೈಮರಿ ಶಾಲೆಗೆ ಹೋಗಲು ಒಂದು ಕಿಲೋ ಮೀಟರ್ ನಡೆಯಬೇಕು. ಬೇಸಿಗೆಯಲ್ಲಿ ಮಕ್ಕಳಿಗೆ ಅಷ್ಟು ದೂರ ಸಾಗಲು ಕಷ್ಟವಾಗುತ್ತದೆ. ಶಾಲೆಯ ಹತ್ತಿರ ಬೋರ್ ವೆಲ್ ತೆಗೆಯಲು ಹಲವು ಸರ್ಕಾರಿ ಅಧಿಕಾರಿಗಳಿಗೆ ಪತ್ರ ಬರೆದೆ.
ಹಲವು ತಿಂಗಳುಗಳ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಸಿಕ್ಕಿ ಬೋರ್ ವೆಲ್ ಕೊರೆಸಿದೆವು, 6 ಬಾರಿ ನೀರು ಸಿಗದೆ ವಿಫಲವಾಯಿತು. ಏಳನೇ ಬಾರಿ ಬೋರ್ ವೆಲ್ ತೆಗೆಸಿದೆವು. ಅದೃಷ್ಟವಶಾತ್ ನೀರು ಸಿಕ್ಕಿತು. ಈಗ ಕೇವಲ ಶಾಲೆಯಲ್ಲಿ ಮಾತ್ರವಲ್ಲದೆ ಗ್ರಾಮಸ್ಥರು ಕೂಡ ನೀರು ಬಳಸುತ್ತಾರೆ. ಬೇಸಿಗೆಯಲ್ಲಿ ನೀರಿಗೆ ಕೊರತೆಯಾಗಬಾರದೆಂದು ಮತ್ತೊಂದು ಬೋರ್ ವೆಲ್ ತೆಗೆಸಿದ್ದು ಅದರ ನೀರು ಪರೀಕ್ಷೆಯ ಹಂತದಲ್ಲಿದೆ ಎನ್ನುತ್ತಾರೆ ಶಿಕ್ಷಕ ಮೋಹನ್.
ಶಾಲೆಯ ಸುತ್ತಮುತ್ತ ಮೋಹನ್ ಅವರು ವಿದ್ಯಾರ್ಥಿಗಳ ಕೈಯಲ್ಲಿ ಗಿಡ ನೆಡಿಸಿದ್ದಾರೆ. ಮಕ್ಕಳೇ ಪ್ರತಿನಿತ್ಯ ಗಿಡಗಳಿಗೆ ನೀರು ಹಾಕುತ್ತಾರೆ. ಪ್ರೈಮರಿ ಶಾಲೆ ಇದೀಗ ಮಾಧ್ಯಮಿಕ ಶಾಲೆಯ ಕಟ್ಟಡಕ್ಕೆ ವರ್ಗವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com