
ಸಾಂದರ್ಭಿಕ ಚಿತ್ರ
Source : The New Indian Express
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ತಲೆಯೆತ್ತಲಿವೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲು ಸುಮಾರು ಸಾವಿರ ಶಾಲೆಗಳ ಪಟ್ಟಿಯನ್ನು ತಯಾರಿಸಿದೆ. ಅವುಗಳಲ್ಲಿ 122 ಶಾಲೆಗಳು ಬೆಂಗಳೂರಿಗೆ ಹಂಚಿಕೆಯಾಗಿದೆ.
ಇಲಾಖೆಯಿಂದ ಸಿಕ್ಕಿರುವ ಅಂಕಿಅಂಶ ಪ್ರಕಾರ, ಬೆಂಗಳೂರು ನಂತರ ಬೆಳಗಾವಿ ಜಿಲ್ಲೆಯಲ್ಲಿ ಅತಿಹೆಚ್ಚು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು (73) ಮತ್ತು ಕೊಡಗು ಜಿಲ್ಲೆಗೆ ಕೇವಲ 8 ಶಾಲೆಗಳು ಹಂಚಿಕೆಯಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು 2 ಸಾವಿರ ಶಾಲೆಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿದ್ದು ಅವುಗಳಲ್ಲಿ ಸಾವಿರ ಶಾಲೆಗಳು ಆಯ್ಕೆಯಾಗಿವೆ.
ಸರ್ಕಾರಿ ಆಂಗ್ಲಮಾಧ್ಯಮ ಶಾಲೆ ಆರಂಭಿಸುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಅದನ್ನು ಕನ್ನಡಪರ ಕಾರ್ಯಕರ್ತರು ವಿರೋಧಿಸಿದ್ದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಆದರೂ ಕೂಡ ಸಿಎಂ ತಮ್ಮ ನಿರ್ಧಾರಕ್ಕೆ ಬದ್ಧವಾಗಿ ಶಾಲೆಗಳ ಆರಂಭಕ್ಕೆ ಮುಂದಿನ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದರು. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಕೆಲಸ ಕೂಡ ನಡೆಯುತ್ತಿದೆ.
Stay up to date on all the latest ರಾಜ್ಯ news