ರಾಜ್ಯಾದ್ಯಂತ ಮಾ. 21 ರಿಂದ 2,847 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗಳು ಇದೇ ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಡೆಯಲಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗಳು ಇದೇ ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಡೆಯಲಿವೆ.
ರಾಜ್ಯಾದ್ಯಂತ ಒಟ್ಟು 2,847 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು 8.41 ಲಕ್ಷ  ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ರಾಜ್ಯದ ಒಟ್ಟು 5, 202 ಸರ್ಕಾರಿ, 3,244 ಅನುದಾನಿತ ಹಾಗೂ 6,004 ಅನುದಾನರಹಿತ ಶಾಲೆಗಳು ಸೇರಿ 14,450 ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಸಿ.ಕೆ.ಜಾಫರ್ ಅವರು ಹೇಳಿದ್ದಾರೆ. 
ಇಂದು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ 3,578  ರಷ್ಟು ಹೆಚ್ಚಿದೆ. ಪ್ರಸಕ್ತ ಸಾಲಿನಲ್ಲಿ 4,651 ವಿಕಲಚೇತನ ಮಕ್ಕಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 1,451 ವಿದ್ಯಾರ್ಥಿಗಳಿಗೆ ಭಾಷಾ ವಿನಾಯಿತಿ ನೀಡಲಾಗಿದೆ ಎಂದರು.
480 ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನದ ಬದಲಿಗೆ ಪರ್ಯಾಯ ವಿಷಯಗಳನ್ನು ಬರೆಯಲು ಅವಕಾಶ ಕಲ್ಪಿಸಲಾಗಿದೆ. ಹಾಜರಾತಿ ಕೊರತೆಯಿಂದ  10,575 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನರ್ಹರಾಗಿದ್ದಾರೆ ಎಂದರು.
ರಾಜ್ಯದ 2,487 ಪರೀಕ್ಷಾ ಕೇಂದ್ರಗಳ ಪೈಕಿ 1,057 ಕ್ಲಸ್ಟರ್ ರಹಿತ ಹಾಗೂ 1689 ಕ್ಲಸ್ಟರ್ ಕೇಂದ್ರಗಳಿವೆ. ಖಾಸಗಿ ಅಭ್ಯರ್ಥಿಗಳಿಗೆ ಜಿಲ್ಲಾ ಕೇಂದ್ರಗಳಲ್ಲಿ 92 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸ್ಥಾನಿಕ ಜಾಗೃತ ದಳವನ್ನು ಒಳಗೊಂಡಂತೆ ತಾಲೂಕು ಮತ್ತು ಜಿಲ್ಲಾ ಹಂತಗಳಲ್ಲಿ ವಿಚಕ್ಷಣ ದಳ ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು. 
ಪ್ರಶ್ನೆ ಪತ್ರಿಕೆಗಳ ಸುರಕ್ಷತೆಗೆ ಪ್ರತಿ ಜಿಲ್ಲಾ ಖಜಾನೆಗಳಲ್ಲಿ ಸಿಸಿಟಿವಿ ಮೂಲಕ ನಿಗಾ ಇಡಲಾಗಿದೆ. ಪರೀಕ್ಷಾ ಕಾರ್ಯನಿರ್ವಹಿಸುವ ಎಲ್ಲ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. 
ಪರೀಕ್ಷಾ ಕೊಠಡಿಯಲ್ಲಿ ಸ್ಮಾರ್ಟ್ ವಾಚ್ ಹಾಗೂ ಮೊಬೈಲ್ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ನಕಲು ಪ್ರತಿ (ಜೆರಾಕ್ಸ್) ಅಂಗಡಿಗಳನ್ನು ಮುಚ್ಚಲು ನಿರ್ದೇಶಿಸಲಾಗಿದೆ. 
ಮಾರ್ಚ್ 23 ರಿಂದ ಪಿಯುಸಿ ಹಾಗೂ ಏಪ್ರಿಲ್ 10 ರಿಂದ  ಎಸ್ಎಸ್ಎಲ್ ಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ.
ಏಪ್ರಿಲ್ 10ರಿಂದ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 230 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಮೌಲ್ಯಮಾಪನದ ನಂತರ ಅಂಕಗಳನ್ನು ನೇರವಾಗಿ ಅಂತರ್ಜಾಲ ಆಧರಿತ ತಂತ್ರಾಂಶದ ಮೂಲಕ ಮೌಲ್ಯಮಾಪನ ಕೇಂದ್ರಗಳಿಂದ ನೇರವಾಗಿ ಮಂಡಳಿಯ ಸರ್ವರ್ ಗೆ ವರ್ಗಾಯಿಸಲಾಗುವುದು. ಫಲಿತಾಂಶವನ್ನು ವಿದ್ಯಾರ್ಥಿಗಳ, ಪೋಷಕರ ಮೊಬೈಲ್ ಗೆ ಎಸ್ಎಂಎಸ್ ಮೂಲಕ ತಲುಪಿಸಲಾಗುವುದು. ಶಾಲಾ ಫಲಿತಾಂಶವನ್ನು ಶಾಲಾ ಲಾಗಿನ್ ನಲ್ಲಿ ಪ್ರಕಟಿಸಲಾಗುವುದು  ಎಂದು ಅವರು ಮಾಹಿತಿ ನೀಡಿದರು.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದೆ ಎಂದು ಅವರು ಹೇಳಿದ್ದಾರೆ.
ವೇಳಾಪಟ್ಟಿ ಇಂತಿದೆ :
ಮಾ. 21 ರಂದು ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ)
ಮಾ.23 ರಂದು ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ –2, ಇಂಜಿನಿಯರಿಂಗ್ ಗ್ರಾಫಿಕ್ಸ್ –2, ಎಲಿಮೆಂಟ್ಸ್ ಆಪ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ , ಅರ್ಥಶಾಸ್ತ್ರ, 
ಮಾ. 25 ರಂದು ಗಣಿತ, ಸಮಾಜಶಾಸ್ತ್ರ, 
ಮಾ.27 ರಂದು ಇಂಗ್ಲಿಷ್, ಕನ್ನಡ,
ಮಾ.29 ರಂದು ಸಮಾಜ ವಿಜ್ಞಾನ, 
ಏಪ್ರಿಲ್ 1 ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ ಅಥವಾ ಹಿಂದೂಸ್ತಾನಿ ಸಂಗೀತ, 
ಏಪ್ರಿಲ್ 4 ರಂದು ತೃತೀಯ ಭಾಷೆ (ಹಿಂದಿ, ಕನ್ನಡ, ಇಂಗ್ಲಿಷ್, ಅರೆಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು), ಎನ್ಎಸ್ ಕ್ಯೂಎಫ್ ಪರೀಕ್ಷಾ ವಿಷಯಗಳು–ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್ ) ಪರೀಕ್ಷೆಗಳು ನಡೆಯಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com