ಭ್ರಷ್ಟರಿಗೆ ಎಸಿಬಿ ಶಾಕ್: ರಾಜ್ಯದ ನಾಲ್ವರು ಅಧಿಕಾರಿಗಳ ಮನೆ ಮೇಲೆ ದಾಳಿ

ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ) ಅಧಿಕಾರಿಗಳು ಮಂಗಳವಾರ ರಾಜ್ಯದ ನಾಲ್ಕು ಸರ್ಕಾರಿ ಅಧಿಕಾರಿಗಳ ಮನೆಗಳು, ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ) ಅಧಿಕಾರಿಗಳು ಮಂಗಳವಾರ ರಾಜ್ಯದ  ನಾಲ್ಕು  ಸರ್ಕಾರಿ ಅಧಿಕಾರಿಗಳ ಮನೆಗಳು, ಕಚೇರಿಗಳ ಮೇಲೆ  ದಾಳಿ ಮಾಡಿದ್ದಾರೆ. 
ಬಿ.ಸಿ. ಸತೀಶ್, ಸಹಕಾರಿ ಸೊಸೈಟೀಸ್ ರಿಜಿಸ್ಟ್ರಾರ್, ಹೆಡ್ ಆಫೀಸ್, ಬೆಂಗಳೂರು, ಶರದ್ ಗಂಗಪ್ಪ ಇಜೇರಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ, ವಿಜಯಪುರಾ, ಪ್ರಕಾಶ್ ಗೌಡ ಕುದರಿಮೋತಿ ಕೃಷಿ ಅಧಿಕಾರಿ, ಕೃಷಿ ಸಂಪರ್ಕ ಕೇಂದ್ರ, ಮುಂಡರಗಿ ಗದಗ ಜಿಲ್ಲೆ,  ಎಸ್.ಪಿ. ಮಂಜುನಾಥ್, ಬಿಬಿಎಂಪಿ ಸಹಾಯಕ ತೆರಿಗೆ ಅಧಿಕಾರಿ ಅವರುಗಳ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆಯೆಂದು ಎಸಿಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚುವರಿ ನೋಂದಾವಣಾಧಿಕಾರಿಯಾಗಿರುವ ಸತೀಶ್‌ ಬಿ.ಸಿ. ಅವರ ಬಸವೇಶ್ವರ ನಗರದಲ್ಲಿರುವ ನಿವಾಸದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿದೆ. ಇಲ್ಲಿನ ವೀರಶೈವ ಕೊ ಅಪರೇಟಿವ್‌ ಬ್ಯಾಂಕ್‌ ನಲ್ಲಿ ಸತೀಶ್‌ ಅವರ ಹೆಸರಿನಲ್ಲಿದ್ದ ಮೂರು ಅಕೌಂಟ್‌ ಗಳಲ್ಲಿ 1.5 ಕೋಟಿ ರೂಪಾಯಿಗಳ ಹಣ ಪತ್ತೆಯಾಗಿದೆ. ಇದೀಗ ಎಸಿಬಿ ಅಧಿಕಾರಿಗಳು ಸತೀಶ್‌ ಅವರ ನಿವಾಸದಲ್ಲಿ ಆಸ್ತಿ ಕಡತಗಳ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
ಇನ್ನು ಎಸಿಸಿ ಶರದ್‌ ಇಜಾರಿ ಅವರ ವಿಜಯಪುರದ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಆರು ಲಕ್ಷ ನಗದು, ಆರು ನಿವೇಶನ ದಾಖಲೆಗಳು ಮತ್ತು ಬ್ಯಾಂಕ್‌ ಲಾಕರ್‌ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿ ಸಂಬಂಧಿತ ಕಡತಗಳ ಪರಿಶೀಲನೆಯನ್ನು ಎಸಿಬಿ ಅಧಿಕಾರಿಗಳು ಮುಂದುವರೆಸಿದ್ದಾರೆ. ದಾಳಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com