ಕೃಷಿಯಲ್ಲಿ ಹತ್ತು ಹಲವು ಸಮಸ್ಯೆ, ಸವಾಲುಗಳು; ಹಳ್ಳಿ ತೊರೆಯುವ ಯುವಕರು

ಹುಣಸೂರು ತಾಲ್ಲೂಕಿನ ಕುಪ್ಪೆ ಗ್ರಾಮದ ರವಿಕುಮಾರ್ ಕೆ ಎಸ್ ಅವರ ಐದು ಸದಸ್ಯರ ಕುಟುಂಬಕ್ಕೆ...

Published: 21st March 2019 12:00 PM  |   Last Updated: 21st March 2019 02:27 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ಬೆಂಗಳೂರು: ಹುಣಸೂರು ತಾಲ್ಲೂಕಿನ ಕುಪ್ಪೆ ಗ್ರಾಮದ ರವಿಕುಮಾರ್ ಕೆ ಎಸ್ ಅವರ ಐದು ಸದಸ್ಯರ ಕುಟುಂಬಕ್ಕೆ ವ್ಯವಸಾಯವೇ ಜೀವನಾಧಾರ. ಆದರೆ ತಮ್ಮ ಕೃಷಿಯಿಂದ ಲಾಭ ಸಿಗುವುದಿಲ್ಲ ಎಂಬ ಬೇಸರ ಅವರಿಗೆ. ತಮ್ಮ ಮಕ್ಕಳು ನಗರ ಪ್ರದೇಶಕ್ಕೆ ಹೋಗಿ ಉದ್ಯೋಗ ಗಿಟ್ಟಿಸಿಕೊಳ್ಳಲಿ ಎಂದು ಮೈಸೂರು ಮತ್ತು ಹುಣಸೂರಿನಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದಾರೆ.

ಇವರಿಗೆ 6 ಎಕರೆ ಜಮೀನಿದೆ. ಅದರಲ್ಲಿ ತಂಬಾಕು ಬೆಳೆಯುತ್ತಾರೆ. ಸುತ್ತಮುತ್ತ ನೀರಾವರಿ ಯೋಜನೆಯಿಲ್ಲದಿರುವುದರಿಂದ ಬೋರ್ ವೆಲ್ ಹಾಕಿಸಿದ್ದರು. ಆದರೆ ಅದರ ನೀರು ಕೃಷಿಗೆ ಸಾಕಾಗುವುದಿಲ್ಲ.

ಒಂದು ಎಕರೆ ತಂಬಾಕು ಬೆಳೆಯಲು 40ರಿಂದ 50 ಸಾವಿರ ಬೇಕು. ಅದಕ್ಕೆ ತಮಗೆ 75 ಸಾವಿರ ರೂಪಾಯಿ ಸಿಗುತ್ತದೆ. ಆದರೆ ಕಾರ್ಮಿಕ ವೆಚ್ಚ ಮತ್ತು ಸಾಗಣೆ ವೆಚ್ಚವೇ ಅಧಿಕವಾಗಿರುತ್ತದೆ. ತಮ್ಮ ಆರ್ಥಿಕ ಸಮಸ್ಯೆಗಳಿಗೆ ಗ್ರಾಮೀಣ ಬ್ಯಾಂಕಿನಿಂದ 7 ಲಕ್ಷ ರೂಪಾಯಿ ಸಾಲ ಪಡೆದೆ. ಅದನ್ನು ತೀರಿಸಲು ಆಗುತ್ತಿಲ್ಲ. ಸರ್ಕಾರದಿಂದ ಸಾಲಮನ್ನಾ ಯಾವಾಗಾಗುತ್ತದೆಯೋ ಗೊತ್ತಿಲ್ಲ. ಬ್ಯಾಂಕಿಗೆ ಹೋಗಿ ಕೇಳಿದರೆ ನಮಗೇನು ಗೊತ್ತಿಲ್ಲ ಎಂದು ಹೇಳುತ್ತಾರೆ ಎನ್ನುತ್ತಾರೆ ರವಿ ಕುಮಾರ್.

ಹೀಗೆ ಕೃಷಿ ಕೆಲಸ ಕಷ್ಟ, ಲಾಭ ಬರುವುದಿಲ್ಲ, ಕೂಲಿ ಕಾರ್ಮಿಕರು ಸಿಗುವುದಿಲ್ಲ ಎಂದು ಕಳೆದ ದಶಕದಿಂದೀಚೆಗೆ ಕೃಷಿ, ವ್ಯವಸಾಯವನ್ನು ತೊರೆದವರು ಅದೆಷ್ಟೋ ಮಂದಿ. ಕೆಲವು ಸಣ್ಣ ವ್ಯವಸಾಯಗಾರರು ಪಟ್ಟಣ, ನಗರಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಹಲವು ಯುವಕರು ನಗರ ಪ್ರದೇಶಗಳಿಗೆ ಉದ್ಯೋಗವನ್ನರಸಿ ವಲಸೆ ಹೋಗುತ್ತಾರೆ. ಹೀಗಾಗಿ ಹಳ್ಳಿಗಳಲ್ಲಿ ಇಂದು ಮನೆಗಳು ವೃದ್ಧಾಶ್ರಮಗಳಾಗುತ್ತಿವೆ.

ಈ ಸಮಸ್ಯೆ ಇಂದು ಕೇವಲ ಒಂದು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ, ಕೃಷಿ ಮಾಡುತ್ತಿರುವ ದೇಶಾದ್ಯಂತ ಈ ಸಮಸ್ಯೆಯಿದೆ. ಕೃಷಿ ಮಾಡುವುದು ಇಂದು ಸವಾಲಿನ ಕೆಲಸವೇ ಸರಿ, ನೀರಾವರಿ ವ್ಯವಸ್ಥೆ ಚೆನ್ನಾಗಿರಬೇಕು, ಇಲ್ಲವೇ ಕೃಷಿ ಉಳಿದುಕೊಳ್ಳಬೇಕಾದರೆ ಹೊಸ ವ್ಯವಸ್ಥೆ ಜಾರಿಗೆ ತರಬೇಕು. ಇಲ್ಲದಿದ್ದರೆ ಇದೇ ಪರಿಸ್ಥಿತಿ ಮುಂದುವರಿದರೆ ಹಳ್ಳಿಗಳಲ್ಲಿ ಯುವಕರೇ ಇಲ್ಲದಾಗುವ ಪರಿಸ್ಥಿತಿ ಬರಲು ಹೆಚ್ಚು ಸಮಯ ಇಲ್ಲ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp